ADVERTISEMENT

ಬಂಡವಾಳ ಮಾರುಕಟ್ಟೆ: ಗೃಹ ಸಾಲ ಇರಲಿ ಲೆಕ್ಕಾಚಾರ

ಕಾವ್ಯ ಡಿ.
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸ್ವಂತಕ್ಕೊಂದು ಸೂರು ಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಆದರೆ, ಬಹುಪಾಲು ಜನರಿಗೆ ಗೃಹ ಸಾಲದೊಂದಿಗೆ ಮನೆ ಖರೀದಿಯ ಕನಸು ನನಸಾಗುತ್ತದೆ. ಗೃಹ ಸಾಲ ಪಡೆಯುವಾಗ ಬಹಳ ಲೆಕ್ಕಾಚಾರ ಮತ್ತು ಎಚ್ಚರದಿಂದ ಇರಬೇಕು.

ಸಾಲ ನೀಡುವಾಗ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ನಿಮಗೆ ಅನುಕೂಲವಾಗುವ ರೀತಿಯಲ್ಲೇ ಸಾಲ ಒದಗಿಸುತ್ತವೆ ಎಂದು ಕಣ್ಣುಮುಚ್ಚಿ ನಂಬಲು ಸಾಧ್ಯವಿಲ್ಲ. ಗೃಹ ಸಾಲ ಪಡೆಯುವಾಗ ಬಹುತೇಕರು ಬಡ್ಡಿದರ ಎಷ್ಟು ಎನ್ನುವ ವಿಷಯಕ್ಕೆ ಮಾತ್ರ ಹೆಚ್ಚು ಒತ್ತು ನೀಡುತ್ತಾರೆ.

ADVERTISEMENT

ಸಾಲದ ಷರತ್ತುಗಳು ಮತ್ತು ಗೌಪ್ಯ ಶುಲ್ಕಗಳನ್ನು ಅವರು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆದರೆ, ಇಂತಹ ತಪ್ಪು ನಿಮಗೆ ದುಬಾರಿಯಾಗಬಹುದು. ಬನ್ನಿ, ಸಾಲ ಪಡೆಯುವಾಗ ಏನೆಲ್ಲಾ ವಿಷಯಗಳ ಬಗ್ಗೆ ಎಚ್ಚರವಹಿಸಬೇಕು ಎಂಬ ಬಗ್ಗೆ ತಿಳಿಯೋಣ.

ಬಡ್ಡಿದರ ಎಲ್ಲಿ ಕಡಿಮೆ?: ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿಮಗೆ ಸಾಲ ನೀಡಲು ಮುಂದೆ ಬರುತ್ತವೆ. ಆದರೆ, ಬ್ಯಾಂಕ್‌ಗಳಿಗಿಂತ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿದರ ಹೆಚ್ಚಿಗೆ ಇರುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಕೆಲವು ಸಂದರ್ಭದಲ್ಲಿ ಈ ಸಂಸ್ಥೆಗಳು ಕಡಿಮೆ ಬಡ್ಡಿದರಕ್ಕೆ ಸಾಲ ಕೊಡುವುದಾಗಿ ಹೇಳಿದರೂ ಕ್ರಮೇಣ ಹೆಚ್ಚಿಸಿ ಬಿಡುತ್ತವೆ.

ಗೃಹ ಸಾಲ ಅಂತ ಬಂದಾಗ ಬ್ಯಾಂಕ್‌ಗಳು, ಈ ಹಣಕಾಸು ಸಂಸ್ಥೆಗಳಿಗಿಂತ ಪಾರದರ್ಶಕವಾಗಿವೆ. ಬ್ಯಾಂಕ್‌ಗಳು ಸಾಲ ಕೊಡುವಾಗ ಬಡ್ಡಿದರ ನಿಗದಿ ಮಾಡಲು ರೆಪೊ ದರವನ್ನು ಮಾನದಂಡವಾಗಿ ಪರಿಗಣಿಸಿದರೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪ್ರೈಮ್‌ ಲೆಂಡಿಂಗ್ ರೇಟ್ ಅನ್ನು ಮಾನದಂಡವಾಗಿ ತೆಗೆದುಕೊಳ್ಳುತ್ತವೆ. ಎಲ್ಲಿಂದ ಸಾಲ ಪಡೆಯಬೇಕು ಎನ್ನುವಾಗ ಈ ವಿಚಾರಗಳು ನಿಮಗೆ ಗೊತ್ತಿರಬೇಕು.

ವಿಮೆ ಖರೀದಿಸಬೇಕೇ?: ಗೃಹ ಸಾಲ ಪಡೆಯುವಾಗ ಮಧ್ಯವರ್ತಿಗಳು ಅಥವಾ ಬ್ಯಾಂಕ್ ಅಧಿಕಾರಿಗಳು ಗೃಹ ವಿಮೆ ಜೊತೆಗೆ ಜೀವ ವಿಮೆ ಖರೀದಿಸುವಂತೆ ಒತ್ತಾಯಿಸುತ್ತಾರೆ. ಆದರೆ, ಗೃಹ ಸಾಲದ ಜೊತೆಗೆ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗಳು ಒದಗಿಸುವ ಗೃಹ ವಿಮೆ ಮತ್ತು ಜೀವ ವಿಮೆ ಖರೀದಿಯನ್ನು ನೀವು ಪರಿಗಣಿಸಬೇಕೇ? ವಾಸ್ತವದಲ್ಲಿ ಮನೆ ಸಾಲ ಪಡೆದವರಿಗೆ ಖಂಡಿತವಾಗಿಯೂ ಗೃಹ ಮತ್ತು ಜೀವ ವಿಮೆಯ ಅಗತ್ಯವಿದೆ. ಏಕೆಂದರೆ ಗೃಹ ವಿಮೆ ಮನೆಗೆ ಹಣಕಾಸಿನ ಭದ್ರತೆ ಒದಗಿಸುತ್ತದೆ. ಪ್ರವಾಹ, ಭೂಕಂಪ, ಅಗ್ನಿ ಅವಘಡದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಗೃಹ ವಿಮೆ ಆಪ್ತರಕ್ಷಕನಂತೆ ಕೆಲಸ ಮಾಡುತ್ತದೆ.

ಇನ್ನು ಜೀವ ವಿಮೆ ಬ್ಯಾಂಕ್ ಕೊಟ್ಟಿರುವ ಸಾಲದ ಮೊತ್ತಕ್ಕೆ ಖಾತರಿ ಒದಗಿಸುತ್ತದೆ. ಸಾಲ ಪಡೆದಿರುವ ವ್ಯಕ್ತಿಯ ಜೀವಕ್ಕೆ ಹಾನಿಯಾದರೆ ಜೀವ ವಿಮೆಯ ಮೊತ್ತದಿಂದ, ಬ್ಯಾಂಕ್ ತನ್ನ ಸಾಲ ನಷ್ಟವನ್ನು ಭರಿಸಿಕೊಳ್ಳುತ್ತದೆ. ಆದರೆ, ನೆನಪಿರಲಿ. ಗೃಹ ಸಾಲ ಪಡೆಯುವಾಗ ಸಾಲ ನೀಡುವ ಸಂಸ್ಥೆಯಿಂದಲೇ ‘ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್’ ಪಡೆಯಬೇಕು ಎಂಬ ಯಾವುದೇ ನಿಯಮವಿಲ್ಲ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಥವಾ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎಐ) ಕೂಡ ಇಂತಹ ಯಾವುದೇ ನಿಯಮ ಮಾಡಿಲ್ಲ. ನೀವು ಯಾರ ಬಳಿಯಾದರೂ ಗೃಹ ಮತ್ತು ಜೀವ ವಿಮೆ ಪಡೆಯಬಹುದು. ಸಾಮಾನ್ಯವಾಗಿ ಗೃಹ ಸಾಲದ ಜೊತೆಗೆ ಕೊಡುವ ಗೃಹ ಮತ್ತು ಜೀವ ವಿಮೆಗಳು ದುಬಾರಿಯಾಗಿರುತ್ತವೆ. ಒಂದೇ ಬಾರಿಗೆ ಪ್ರೀಮಿಯಂ ಪಾವತಿಸಬೇಕಾಗುವ ಇಂತಹ ವಿಮೆಗಳನ್ನು ಬ್ಯಾಂಕ್‌ನವರು ‘ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ.

‘ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್‌’ನ ಪ್ರೀಮಿಯಂ ಮೊತ್ತವನ್ನು ಬ್ಯಾಂಕ್ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳು ಸಾಲದ ಮೊತ್ತದ ಜೊತೆಗೆ ಸೇರಿಸಿ ಬಿಡುತ್ತವೆ. ಹೀಗೆ ಮಾಡಿದಾಗ ನಿಮ್ಮ ಸಾಲದ ಇಎಂಐ (ಸಾಲದ ಮಾಸಿಕ ಕಂತು) ಹೆಚ್ಚಳವಾಗುವ ಜೊತೆಗೆ ವಿಮೆಗೆ ಕಟ್ಟುವ ಮೊತ್ತವೂ ಜಾಸ್ತಿಯಾಗುತ್ತದೆ.

ಗೃಹ ಸಾಲದ ವರ್ಗಾವಣೆ: ಒಂದು ಬ್ಯಾಂಕ್‌ನಿಂದ ಗೃಹ ಸಾಲ ಪಡೆದಿರುತ್ತೀರಿ. ಮತ್ತೊಂದು ಬ್ಯಾಂಕ್‌ನ ಪ್ರತಿನಿಧಿಗಳು ಬಂದು ನೀವು ಈಗಾಗಲೇ ಮನೆ ಸಾಲ ಪಡೆದಿರುವ ಬ್ಯಾಂಕ್‌ನ ಬಡ್ಡಿ ದರಕ್ಕಿಂತ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ ಒದಗಿಸುವುದಾಗಿ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಹೋಮ್ ಲೋನ್ ಸ್ವಿಚ್ ಅಥವಾ ಗೃಹ ಸಾಲ ವರ್ಗಾವಣೆಗೆ ಅವಕಾಶ ಇರುತ್ತದೆ.

ಸರಳವಾಗಿ ಹೇಳುವುದಾದರೆ ಗೃಹ ಸಾಲದ ಬಾಕಿ ಮೊತ್ತವನ್ನು ಜಾಸ್ತಿ ಬಡ್ಡಿದರವಿರುವ ಬ್ಯಾಂಕ್‌ನಿಂದ ಕಡಿಮೆ ಬಡ್ಡಿದರವಿರುವ ಬ್ಯಾಂಕ್‌ಗೆ ವರ್ಗಾಯಿಸುವ ಪ್ರಕ್ರಿಯೆಯೇ ಹೋಮ್ ಲೋನ್ ಸ್ವಿಚ್. ಆದರೆ, ಎಲ್ಲ ಸಂದರ್ಭದಲ್ಲೂ ಹೋಮ್ ಲೋನ್ ಸ್ವಿಚ್, ಸಾಲ ಪಡೆದ ವ್ಯಕ್ತಿಗೆ ಅನುಕೂಲಕರವಾಗಿರುವುದಿಲ್ಲ. ನಿಮ್ಮ ಗೃಹ ಸಾಲದ ಅವಧಿ 15 ವರ್ಷಕ್ಕಿಂತ ಜಾಸ್ತಿ ಇದ್ದು, ಈಗಾಗಲೇ ಸಾಲ ಪಡೆದಿರುವ ಬ್ಯಾಂಕ್‌ನ ಬಡ್ಡಿಗಿಂತ ಸಾಲದ ಬಡ್ಡಿದರ ಶೇ 0.25ರಷ್ಟು ಕಡಿಮೆಯಾದರೆ ಮಾತ್ರ ಹೋಮ್ ಲೋನ್ ಸ್ವಿಚ್ ಪರಿಗಣಿಸಬೇಕು.

ಇದೇ ರೀತಿ 10ರಿಂದ 15 ವರ್ಷಗಳ ಸಾಲದ ಅವಧಿ ಹೊಂದಿರುವವರು ಸಾಲದ ಬಡ್ಡಿದರವು ಶೇ 0.50ರಷ್ಟು ಕಡಿಮೆಯಾದರೆ ಮಾತ್ರ ಹೋಮ್ ಲೋನ್ ಸ್ವಿಚ್‌ ಅನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಾಲದ ಅವಧಿ 10 ವರ್ಷಕ್ಕಿಂತ ಕಡಿಮೆ ಇದ್ದರೆ ಹೋಮ್ ಲೋನ್ ಸ್ವಿಚ್‌ನಿಂದ ಅನುಕೂಲವಿದೆಯೋ, ಇಲ್ಲವೋ ಎನ್ನುವುದನ್ನು ಪರಾಮರ್ಶಿಸಬೇಕು. ಹೋಮ್ ಲೋನ್ ಸ್ವಿಚ್ ಮಾಡುವಾಗ ಏನಾದರೂ ಶುಲ್ಕಗಳಿವೆಯಾ, ಸಾಲ ವರ್ಗಾವಣೆ ನಂತರ ಹೊಸ ಬ್ಯಾಂಕ್ ಎಷ್ಟು ಅವಧಿಗೆ ಕಡಿಮೆ ಬಡ್ಡಿಗೆ ಸಾಲ ಒದಗಿಸಬಹುದು ಎಂಬ ಪೂರಕ ಅಂಶಗಳನ್ನು ಅರಿತು ಮುನ್ನಡೆಯಬೇಕು.

ಕರಡಿ ಕುಣಿತಕ್ಕೆ ಮುಗ್ಗರಿಸಿದ ಸೂಚ್ಯಂಕಗಳು

ಅಕ್ಟೋಬರ್ 4ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ಕಂಡಿವೆ. ಕರಡಿ ಕುಣಿತಕ್ಕೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿದಿವೆ. 81,688 ಅಂಶದಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 4.54ರಷ್ಟು ಕುಸಿತ ಕಂಡಿದೆ. 25,014 ಅಂಶದಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 4.45ರಷ್ಟು ಇಳಿಕೆಯಾಗಿದೆ.

ಕಳೆದ ಎರಡು ವರ್ಷದ ಅವಧಿಯಲ್ಲಿ ವಾರವೊಂದರಲ್ಲಿ ಸೂಚ್ಯಂಕಗಳು ಕಂಡಿರುವ ತೀವ್ರ ಇಳಿಕೆ ಇದಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟು, ಚೀನಾ ಮಾರುಕಟ್ಟೆಗೆ ಹೂಡಿಕೆ ವರ್ಗಾವಣೆ, ತೈಲ ಬೆಲೆ ಹೆಚ್ಚಳ, ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಷೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಅತಿಹೆಚ್ಚು ಅಂದರೆ ಶೇ 7.77ರಷ್ಟು ಕುಸಿದಿದೆ. ಆಟೊ ವಲಯ ಶೇ 5.98, ಎನರ್ಜಿ ಶೇ 5.49, ಅನಿಲ ಮತ್ತು ತೈಲ ಶೇ 5.11, ಫೈನಾನ್ಸ್ ಶೇ 5.01, ಬ್ಯಾಂಕ್ ಶೇ 4.23, ಎಫ್‌ಎಂಸಿಜಿ ಶೇ 3.62, ಮಾಧ್ಯಮ ಶೇ 2, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.96, ಫಾರ್ಮಾ ಶೇ 1.82 ಮತ್ತು ಮಾಹಿತಿ ತಂತ್ರಜ್ಞಾನ ವಲಯ ಶೇ 0.85ರಷ್ಟು ಕುಸಿದಿದೆ. ಲೋಹ ವಲಯ ಮಾತ್ರ ಶೇ 0.51ರಷ್ಟು ಜಿಗಿದಿದೆ.

ಏರಿಕೆ–ಇಳಿಕೆ: ಈ ವಾರ ನಿಫ್ಟಿಯಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ ಶೇ 3.28, ಟೆಕ್ ಮಹೀಂದ್ರ
ಶೇ 0.65, ಇನ್ಫೊಸಿಸ್ ಶೇ 0.58, ಟಾಟಾ ಸ್ಟೀಲ್ ಶೇ 0.15 ಮತ್ತು ಹಿಂಡಾಲ್ಕೋ ಇಂಡಸ್ಟ್ರೀಸ್
ಶೇ 0.07ರಷ್ಟು ಗಳಿಸಿಕೊಂಡಿವೆ.

ರಿಲಯನ್ಸ್ ಶೇ 9.13, ಶ್ರೀರಾಮ್ ಫೈನಾನ್ಸ್ ಶೇ 7.49, ಹೀರೊ ಮೋಟೊಕಾರ್ಪ್
ಶೇ 7.39, ಎಕ್ಸಿಸ್‌ ಬ್ಯಾಂಕ್ ಶೇ 7.14, ಬಜಾಜ್ ಆಟೊ ಶೇ 7.13, ಏಷ್ಯನ್‌ ಪೇಂಟ್ಸ್
ಶೇ 7.1, ಬಿಪಿಸಿಎಲ್ ಶೇ 7.05, ಬಜಾಜ್ ಫೈನಾನ್ಸ್ ಶೇ 6.97, ಐಷರ್ ಮೋಟರ್ಸ್ ಶೇ 6.81, ಅಪೋಲೊ ಹಾಸ್ಪಿಟಲ್ಸ್ ಶೇ 6.45 ಮತ್ತು ಮಾರುತಿ ಸುಜುಕಿ ಶೇ 6.3ರಷ್ಟು ಕುಸಿದಿವೆ.

ಮುನ್ನೋಟ: ಕಚ್ಚಾ ತೈಲ ಬೆಲೆ ಹೆಚ್ಚಳದ ಜೊತೆಗೆ ಚೀನಾ ಮಾರುಕಟ್ಟೆಯತ್ತ ಜಾಗತಿಕ ಹೂಡಿಕೆದಾರರು ಚಿತ್ತ ಹರಿಸಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಾತಾವರಣ ಮುಂದುವರಿಯಲಿದೆ. ಅಕ್ಟೋಬರ್ 7ರಿಂದ 9ರ ವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು, ಬಡ್ಡಿದರ ಇಳಿಕೆಯ ಬಗ್ಗೆ ಒಂದಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.

ಅಕ್ಟೋಬರ್ 15ರ ನಂತರದಲ್ಲಿ ಕಂಪನಿಗಳ ಎರಡನೇ ತ್ರೈಮಾಸಿಕ ಅವಧಿಯ ಫಲಿತಾಂಶಗಳು ಹೊರಬೀಳಲಿದ್ದು, ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು, ಮಧ್ಯಪ್ರಾಚ್ಯ ಬಿಕ್ಕಟು ಸೇರಿ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.