ಭಾರತದ ಅತ್ಯುತ್ತಮ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡಿ ಲಾಭ ಗಳಿಸಬೇಕು ಎನ್ನುವ ಬಯಕೆ ಪ್ರತಿ ಹೂಡಿಕೆದಾರನಿಗೂ ಇರುತ್ತದೆ. ಆದರೆ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹಲವರು ಭಯಪಡುತ್ತಾರೆ. ಅಂತಹ ಹೂಡಿಕೆಗದಾರರಿಗೆ ಉತ್ತಮ ಆಯ್ಕೆ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್.
ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಷೇರು ಮಾರುಕಟ್ಟೆಯ ಅಗ್ರಮಾನ 100 ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತವೆ. ಅಂದರೆ ಈ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ದೇಶದ ಟಾಪ್ 100 ಕಂಪನಿಗಳಲ್ಲಿ ನೀವೂ ಒಂದಿಷ್ಟು ಪಾಲು ಪಡೆದುಕೊಂಡಂತೆ! ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಅಂದರೆ ಏನು? ಇವುಗಳಲ್ಲಿ ಹೂಡಿಕೆ ಯಾರಿಗೆ ಸೂಕ್ತ? ತಿಳಿಯೋಣ.
ಷೇರು ಮಾರುಕಟ್ಟೆಯಲ್ಲಿರುವ 100 ಅಗ್ರಮಾನ್ಯ ಕಂಪನಿಗಳನ್ನು ಲಾರ್ಜ್ ಕ್ಯಾಪ್ ಕಂಪನಿಗಳು ಎಂದು ಕರೆಯುತ್ತೇವೆ. ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳನ್ನು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಎಂದು ಕರೆಯಲಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟನ್, ಬ್ರಿಟಾನಿಯಾ, ರಿಲಯನ್ಸ್ , ಹಿಂದೂಸ್ಥಾನ್ ಯುನಿಲಿವರ್, ಏಷ್ಯನ್ ಪೇಂಟ್ಸ್, ಐಟಿಸಿ ಸೇರಿ ಹೆಸರಾಂತ ಕಂಪನಿಗಳು ಲಾರ್ಜ್ ಕ್ಯಾಪ್ ಫಂಡ್ ವ್ಯಾಪ್ತಿಗೆ ಬರುತ್ತವೆ. ಇಂತಹ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು ₹20 ಸಾವಿರ ಕೋಟಿಗೂ ಹೆಚ್ಚಿಗೆ ಇರುತ್ತದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದ ಪ್ರಕಾರ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಕಂಪನಿಗಳು ಹೂಡಿಕೆದಾರರು ತೊಡಗಿಸುವ ಶೇ 80ರಷ್ಟು ಹಣವನ್ನು ಅತ್ಯುತ್ತಮ ಎನಿಸುವ ಪ್ರಮುಖ 100 ಕಂಪನಿಗಳ ಮೇಲೆ ತೊಡಗಿಸಬೇಕು. ಇನ್ನುಳಿದ ಶೇ 20ರಷ್ಟು ಹಣವನ್ನು ಮಿಡ್ ಕ್ಯಾಪ್ ಕಂಪನಿಗಳ ಮೇಲೆ ತೊಡಗಿಸಲು ಅವಕಾಶವಿದೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರ ಹಣದ ಬಹುಪಾಲನ್ನು ದೊಡ್ಡ ಕಂಪನಿಗಳ ಮೇಲೆ ಹೂಡಿಕೆ ಮಾಡುವುದರಿಂದ ಮಿಡ್ ಕ್ಯಾಪ್ ಅಥವಾ ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿರುವ ಅನಿಶ್ಚಿತತೆ ಇಲ್ಲಿ ಕಂಡುಬರುವುದಿಲ್ಲ. ದೀರ್ಘಾವಧಿ ಮತ್ತು ಮಧ್ಯಮ ಅವಧಿಯಲ್ಲಿ ಈ ಫಂಡ್ ಗಳು ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಡುತ್ತವೆ.
ಈಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಹೊಸಬರು, ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದವರು ಲಾರ್ಜ್ ಕ್ಯಾಪ್ ಫಂಡ್‌ಗಳನ್ನು ಪರಿಗಣಿಸಬಹುದು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಸಿದರೆ ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಅನಿಶ್ಚಿತತೆ ಕಡಿಮೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಸಾಮಾನ್ಯವಾಗಿ ಉತ್ತಮ ಕಂಪನಿಗಳ ಮೇಲೆ ಹೆಚ್ಚು ಹಣ ತೊಡಗಿಸುವ ಕಾರಣ, ನಿಶ್ಚಿತ ಲಾಭ ಸಿಗುವ ಸಾಧ್ಯತೆ ಹೆಚ್ಚು. 5 ವರ್ಷಗಳ ಹೂಡಿಕೆ ಅವಧಿಯೊಂದಿಗೆ ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ತೊಡಗಿಸಿದರೆ ಉತ್ತಮ ಲಾಭದ ಸಾಧ್ಯತೆ ಹೆಚ್ಚಿರುತ್ತದೆ.
ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಕೆ ಮಾಡಿ ನೋಡಿದಾಗ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಲಾಭದ ಪ್ರಮಾಣ ಕೊಂಚ ಕಡಿಮೆ. ಈ ಫಂಡ್‌ಗಳು ಕಳೆದ ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕ ಶೇ 12.67ರಷ್ಟು ಸರಾಸರಿ ಲಾಭ ತಂದುಕೊಟ್ಟಿವೆ. ಮಿಡ್ ಕ್ಯಾಪ್ ಫಂಡ್‌ಗಳು ಇದೇ ಅವಧಿಯಲ್ಲಿ ಶೇ 18.36ರಷ್ಟು ಲಾಭ ನೀಡಿದ್ದರೆ ಸ್ಮಾಲ್ ಕ್ಯಾಪ್ ಫಂಡ್ ಗಳು ಶೇ 21.4ರಷ್ಟು ಲಾಭ ಒದಗಿಸಿವೆ.
ಯಾವ ಲಾರ್ಜ್ ಕ್ಯಾಪ್ ಫಂಡ್ ಉತ್ತಮ ಎಂದು ತೀರ್ಮಾನಿಸುವ ಮುನ್ನ ಅಲ್ಲಿನ ಕಮಿಷನ್ ದರ ಎಷ್ಟಿದೆ ಎನ್ನುವುದನ್ನೂ ನೋಡಿಕೊಳ್ಳಿ. ಫಂಡ್ ಆಯ್ಕೆ ನಿಮಗೆ ತಿಳಿಯದಿದ್ದರೆ ವೃತ್ತಿಪರ ಹೂಡಿಕೆ ತಜ್ಞರ ನೆರವು ಪಡೆಯಿರಿ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಒಳಗಾಗಿ ನಗದೀಕರಣಕ್ಕೆ ಮುಂದಾದರೆ ಗಳಿಕೆಯ ಮೇಲೆ ಶೇ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ನಗದೀಕರಣಕ್ಕೆ ಮುಂದಾಗಿ ಲಾಭವು ₹1 ಲಕ್ಷದ ಒಳಗಿದ್ದರೆ ತೆರಿಗೆ ಇಲ್ಲ. ₹1 ಲಕ್ಷ ಮೀರಿದ ಲಾಭಕ್ಕೆ ಶೇ 10ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.
(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್ )
ಸೆಪ್ಟೆಂಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 66,598 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.85ರಷ್ಟು ಹೆಚ್ಚಳವಾಗಿದೆ. 19,820 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.97ರಷ್ಟು ಜಿಗಿದಿದೆ. ಸತತ ಎರಡನೇ ವಾರ ಷೇರುಪೇಟೆ ಸೂಚ್ಯಂಕಗಳು ಗಣನೀಯ ಹೆಚ್ಚಳ ಕಂಡಿವೆ. ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳ ಸ್ಥಗಿತಗೊಳಿಸುತ್ತದೆ ಎಂಬ ಅಶಾಭಾವ, ದೇಶಿ ಹೂಡಿಕೆದಾರರಿಂದ ಉತ್ತಮ ಖರೀದಿ ಸೇರಿದಂತೆ ಕೆಲವು ಅಂಶಗಳು ಮಾರುಕಟ್ಟೆಗೆ ಪೂರಕವಾಗಿ ವರ್ತಿಸಿವೆ.
ವಲಯವಾರು ಪ್ರಗತಿಯಲ್ಲಿ ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 5ರಷ್ಟು, ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಶೇ 5ರಷ್ಟು, ಎನರ್ಜಿ ಸೂಚ್ಯಂಕ ಶೇ 4.7ರಷ್ಟು ಮತ್ತು ಬಿಎಸ್ಇ ಪವರ್ ಸೂಚ್ಯಂಕ ಶೇ 4.7ರಷ್ಟು ಜಿಗಿದಿವೆ.
ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹9,321.41 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹4,527.14 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಕೋಲ್ ಇಂಡಿಯಾ, ನೈಕಾ, ಶ್ರೀ ಸಿಮೆಂಟ್ಸ್, ಲಾರ್ಸನ್ ಆ್ಯಂಡ್ ಟೂಬ್ರೊ ಮತ್ತು ಎಚ್‌ಸಿಎಲ್ ಟೆಕ್ನಾಲಜಿಸ್ ಉತ್ತಮ ಗಳಿಕೆ ಕಂಡಿವೆ. ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಪವರ್ ಫೈನಾನ್ಸ್ ಕಾರ್ಪೊರೇಷನ್, ಐಡಿಬಿಐ ಬ್ಯಾಂಕ್, ಪೆಟ್ರೋನೆಟ್ ಎಲ್ಎನ್‌ಜಿ, ಆರ್‌ಇಸಿ, ಅದಾನಿ ಪವರ್, ಜೆಎಸ್‌ಡಬ್ಲ್ಯೂ ಎನರ್ಜಿ, ಬಾಯೇರ್ ಕ್ರಾಪ್ ಸೈನ್ಸ್ ಮತ್ತು ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಶೇ 10ರಿಂದ ಶೇ 18ರಷ್ಟು ಜಿಗಿದಿವೆ.
ಮುನ್ನೋಟ: ಮಾರುಕಟ್ಟೆ ತಜ್ಞರ ಪ್ರಕಾರ ನಿಫ್ಟಿ ಸದ್ಯದಲ್ಲೇ 20 ಸಾವಿರದ ಗಡಿ ದಾಟುವ ಸಾಧ್ಯತೆಯಿದೆ. ಜಿ–20 ಸಮಾವೇಶದಲ್ಲಿ ವಿಶ್ವದ ಪ್ರಮುಖ ನಾಯಕರು ಕೈಗೊಳ್ಳುವ ನಿರ್ಣಯಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.