ದೇಶದಲ್ಲಿ 50ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಕಂಪನಿಗಳಿದ್ದು, ಸಾವಿರಾರು ಸ್ಕೀಂಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಯಾವ ಕಂಪನಿಯ ಯಾವ ಫಂಡ್ ಆಯ್ಕೆ ಮಾಡಿಕೊಳ್ಳುವುದು ಎನ್ನುವುದೇ ದೊಡ್ಡ ಪ್ರಶ್ನೆ.
ಎಲ್ಲ ಕಂಪನಿಗಳ ಒಂದೊಂದೇ ಸ್ಕೀಂ ಅನ್ನು ಅಳೆದು ತೂಗಿ ಯಾವುದು ಉತ್ತಮವಾಗಿದೆ ಎಂದು ಪರಿಷ್ಕರಿಸಿ ನೋಡುವುದು ವಾಸ್ತವದಲ್ಲಿ ಅಸಾಧ್ಯದ ಕೆಲಸ. ಪರಿಸ್ಥಿತಿ ಹೀಗಿರುವಾಗ ಹೊಸ ಹೂಡಿಕೆದಾರರು ಗೊಂದಲಕ್ಕೀಡಾಗಿ ಮ್ಯೂಚುವಲ್ ಫಂಡ್ ಹೂಡಿಕೆಯ ಸಹವಾಸವೇ ಬೇಡ ಎಂದು ದೂರ ಸರಿದು ಬಿಡುತ್ತಾರೆ.
ಇದನ್ನು ತಪ್ಪಿಸಲು ಫೋರ್ ಫಂಡ್ ಪೋರ್ಟ್‌ಫೋಲಿಯೊ ಎಂಬ ಪರಿಕಲ್ಪನೆ ನೆರವಿಗೆ ಬರುತ್ತದೆ. ನಾಲ್ಕು ವಿವಿಧ ಮಾದರಿಯ ಹೂಡಿಕೆಗಳ ಸಮ್ಮಿಶ್ರಣವನ್ನು ಫೋರ್ ಫಂಡ್ ಪೋರ್ಟ್‌ಫೋಲಿಯೊ ಎಂದು ಕರೆಯಲಾಗುತ್ತದೆ. ಇದನ್ನು ರಚಿಸುವುದು ಹೇಗೆ? ಯಾರಿಗೆ ಇದು ಸರಿ ಹೊಂದುತ್ತದೆ? ಬನ್ನಿ ತಿಳಿಯೋಣ.
ಫೋರ್ ಫಂಡ್ ಪೋರ್ಟ್‌ಫೋಲಿಯೊ ಎಂದರೇನು?:
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಯಾವ ಮಾದರಿಯ ಫಂಡ್‌ನಲ್ಲಿ ಎಷ್ಟು ಹೂಡಿಕೆ ಮಾಡಬೇಕು (ಅಸೆಟ್ ಅಲೊಕೇಷನ್) ಎನ್ನುವುದು ಬಹಳ ಮುಖ್ಯ. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬೇಕಾದರೆ ಈ ಅಂಶವನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಒಳ್ಳೆಯ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೊ ಅಂದರೆ, ಷೇರು ಮಾರುಕಟ್ಟೆ ಆಧಾರಿತವಾಗಿ ಎರಡು ಇಂಡೆಕ್ಸ್ ಫಂಡ್‌ಗಳು, ಒಂದು ಬಾಂಡ್ ಫಂಡ್ ಮತ್ತು ಗೋಲ್ಡ್ ಫಂಡ್‌ನ ಸಮ್ಮಿಶ್ರಣ ಇರಬೇಕು.
ಅಮೆರಿಕದಲ್ಲಿ ತ್ರಿಫಂಡ್ ಪೋರ್ಟ್‌ಫೋಲಿಯೊ ಅನ್ನೋ ಪರಿಕಲ್ಪನೆ ಬಹಳ ಜನಪ್ರಿಯವಾಗಿದೆ. ಅದೇ ಮಾದರಿಯಲ್ಲಿ ಭಾರತದ ಸನ್ನಿವೇಶಕ್ಕೆ ಫೋರ್ ಫಂಡ್ ಪೋರ್ಟ್‌ಫೋಲಿಯೊ ಸರಿ ಹೊಂದುತ್ತದೆ ಎಂದು ಜೆರೋಧಾ ಸಂಸ್ಥೆಯ ಹಣಕಾಸು ಶಿಕ್ಷಣ ವಿಭಾಗದ ಮುಖ್ಯಸ್ಥ ಕಾರ್ತಿಕ್ ರಂಗಪ್ಪ ಹೇಳುತ್ತಾರೆ.
ಮ್ಯೂಚುವಲ್ ಫಂಡ್ ಹೂಡಿಕೆಗೆ ಹೊಸದಾಗಿ ಪ್ರವೇಶ ಮಾಡುವವರಿಗೆ ಈ ಫೋರ್ ಫಂಡ್ ಪೋರ್ಟ್‌ಫೋಲಿಯೊ ಸರಿಹೊಂದುತ್ತದೆ. ಆದರೆ ನೆನಪಿರಲಿ, ಯಾವುದೇ ವ್ಯಕ್ತಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಪ್ರವೇಶ ಮಾಡುವ ಮುನ್ನ ಆರೋಗ್ಯ ವಿಮೆ ಮತ್ತು ಜೀವ ವಿಮೆ ಪಡೆದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು.
ಈ ಫೋಲಿಯೊದಲ್ಲಿ ಯಾವ ಫಂಡ್ ಇರುತ್ತವೆ?:
ಫೋರ್ ಫಂಡ್ ಪೋರ್ಟ್‌ಫೋಲಿಯೊದಲ್ಲಿ ನಿಫ್ಟಿ 50 ಇಂಡೆಕ್ಸ್ ಫಂಡ್, ಮಿಡ್ ಕ್ಯಾಪ್ ಇಂಡೆಕ್ಸ್ ಫಂಡ್, ಅಲ್ಪಾವಧಿ ಅಥವಾ ಮಧ್ಯಮಾವಧಿಯ ಬಾಂಡ್ ಫಂಡ್
ಮತ್ತು ಗೋಲ್ಡ್ ಫಂಡ್ ಅಥವಾ ಗೋಲ್ಡ್ ಇಟಿಎಫ್ ಇರಬೇಕಾಗುತ್ತದೆ. ಈ ಮಿಶ್ರಣ ಇದ್ದಾಗ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ನಿಫ್ಟಿ 50 ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ದೇಶದ ಅಗ್ರಮಾನ್ಯ ಕಂಪನಿಗಳ ಮೇಲೆ ನಿಮ್ಮ ಹಣ ತೊಡಗಿಸಿದಂತಾಗುತ್ತದೆ. ಅಲ್ಲದೆ ಇಲ್ಲಿ ನಿಫ್ಟಿ 50 ಸೂಚ್ಯಂಕವನ್ನೇ ಹೋಲಿಕೆ ಮಾಡಿ ಹೂಡುವುದರಿಂದ ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷಿಯೊ) ಅಂದರೆ ಕಮಿಷನ್ ಕಡಿಮೆ ಇರುತ್ತದೆ. ಆರಂಭಿಕ ಹೂಡಿಕೆದಾರರಿಗೆ ಈ ಆಯ್ಕೆ ಅತ್ಯಂತ ಸೂಕ್ತವಾಗುತ್ತದೆ.
ಮಿಡ್ ಕ್ಯಾಪ್ ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಭವಿಷ್ಯದಲ್ಲಿ ಉತ್ತಮ ಬೆಳವಣಿಗೆ ಸಾಧಿಸುವ ಅವಕಾಶವಿರುವ ಕಂಪನಿಯಲ್ಲಿ ನಿಮ್ಮ ಹಣವಿರುತ್ತದೆ. ಲಾರ್ಜ್‌ಕ್ಯಾಪ್ ಕಂಪನಿಗಳ ಮೌಲ್ಯಕ್ಕಿಂತ ಮಿಡ್‌ಕ್ಯಾಪ್ ಕಂಪನಿಗಳ ಮೌಲ್ಯ ಕಡಿಮೆ ಇದ್ದರೂ ಇಲ್ಲಿ ಬೆಳವಣಿಗೆಯ ಸಾಧ್ಯತೆ ಹೆಚ್ಚಿರುತ್ತದೆ. ಇಂಡೆಕ್ಸ್ ಫಂಡ್‌ಗಳ ಜೊತೆ ಬಾಂಡ್ ಫಂಡ್‌ಗಳೂ ನಿಮ್ಮ ಪೋರ್ಟ್‌ಫೋಲಿಯೊದ ಭಾಗವಾಗಬೇಕು.
ಏಕೆಂದರೆ, ಇಂಡೆಕ್ಸ್ ಫಂಡ್‌ಗಳ ಗಳಿಕೆ ಮೇಲೆ ಮಾರುಕಟ್ಟೆಯ ಏರಿಳಿತದ ರಿಸ್ಕ್ ಹೆಚ್ಚಿಗೆ ಇದ್ದರೆ ಬಾಂಡ್ ಫಂಡ್‌ಗಳಲ್ಲಿ ಈ ರಿಸ್ಕ್ ಕೊಂಚ ಕಡಿಮೆ ಇರುತ್ತದೆ. ಹೀಗಿದ್ದಾಗ ಒಟ್ಟಾರೆ ಪೋರ್ಟ್‌ಫೋಲಿಯೊದಲ್ಲಿ ಒಂದು ಹದ ಕಂಡುಕೊಂಡು ಹೂಡಿಕೆ ವೈವಿಧ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇನ್ನೂ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಚಿನ್ನಕ್ಕೆ ಸ್ಥಾನ ಕೊಡದಿದ್ದರೆ ಹೇಗೆ? ಹೌದು ಬಂಗಾರ ಒಳ್ಳೆಯ ಹೂಡಿಕೆಯೇ. ಆದರೆ, ಆಭರಣ ಚಿನ್ನ ಒಳ್ಳೆಯ ಹೂಡಿಕೆಯಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಗೋಲ್ಡ್ ಮ್ಯೂಚುವಲ್ ಫಂಡ್ ಅಥವಾ ಗೋಲ್ಡ್ ಇಟಿಎಫ್ ಪರಿಗಣಿಸಬೇಕು.
ಎಷ್ಟು ಹಣ ಹಂಚಿಕೆ ಮಾಡಬೇಕು?:
ನಿಮ್ಮ ವಯಸ್ಸು ಚಿಕ್ಕದಿದೆ. ಈಗಷ್ಟೇ ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸಿದ್ದೀರಿ ಅಂತಾದರೆ ಈಕ್ವಿಟಿ ಆಧಾರಿತ ಹೂಡಿಕೆಗಳಿಗೆ ಹೆಚ್ಚಿನ ಒತ್ತು ನೀಡಿ. ಅಂದರೆ ನಿಫ್ಟಿ 50 ಇಂಡೆಕ್ಸ್ ಫಂಡ್ ಮತ್ತು ಮಿಡ್ ಕ್ಯಾಪ್ ಇಂಡೆಕ್ಸ್ ಫಂಡ್‌ನಲ್ಲಿ ನಿಮ್ಮ ಉಳಿತಾಯದ ಶೇ 60ರಿಂದ ಶೇ 70ರಷ್ಟು ಹಣ ತೊಡಗಿಸಿ. ಶೇ 20ರಷ್ಟು ಹಣವನ್ನು ಬಾಂಡ್ ಫಂಡ್‌ಗಳ ಮೇಲೆ ಹಾಕಿ. ಇನ್ನುಳಿದ ಶೇ 10ರಷ್ಟು ಮೊತ್ತವನ್ನು ಗೋಲ್ಡ್ ಫಂಡ್‌ಗಳ ಮೇಲೆ ಹೂಡಿಕೆ ಮಾಡಿ. ಈ ನಿಯಮ ಒಂದು ಸಿದ್ಧ ಸೂತ್ರವಲ್ಲ. ಅಂದಾಜು ಅಷ್ಟೇ. ನಿಮ್ಮ ಹಣಕಾಸಿನ ಸ್ಥಿತಿಗತಿ ಮತ್ತು ಅಗತ್ಯಕ್ಕೆ ತಕ್ಕಂತೆ ಇದನ್ನು ಮಾರ್ಪಾಡು ಮಾಡಿಕೊಳ್ಳಬಹುದು.
ಹೂಡಿಕೆ ಮಾಡುವಾಗ ನಿರ್ದಿಷ್ಟ ಗುರಿ ಮುಖ್ಯ:
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಅನೇಕರಿಗೆ ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೀವಿ ಎನ್ನುವ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸುವಾಗ ನಿವೃತ್ತಿ, ಉನ್ನತ ಶಿಕ್ಷಣ, ಮನೆ ನಿರ್ಮಾಣ, ಕಾರು ಖರೀದಿ ಹೀಗೆ ಒಂದಲ್ಲ ಒಂದು ನಿರ್ದಿಷ್ಟ ಹಣಕಾಸಿನ ಗುರಿ ಇರಬೇಕಾಗುತ್ತದೆ. ಗುರಿ ಕೇಂದ್ರಿತ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ನಿಗದಿತ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.
(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.