ADVERTISEMENT

ಬಂಡವಾಳ ಮಾರುಕಟ್ಟೆ | ನಾಮಿನಿ–ಉಯಿಲು ವ್ಯತ್ಯಾಸವೇನು?

ಕಾವ್ಯ ಡಿ.
Published 28 ಜುಲೈ 2024, 23:58 IST
Last Updated 28 ಜುಲೈ 2024, 23:58 IST
   

ಅಂಚೆ ಕಚೇರಿ ಹೂಡಿಕೆ, ಬ್ಯಾಂಕ್ ಖಾತೆ, ಷೇರು ಹೂಡಿಕೆ, ಮ್ಯೂಚುವಲ್ ಫಂಡ್ ಹೂಡಿಕೆ, ಪಿಪಿಎಫ್, ಇಪಿಎಫ್ ಹೀಗೆ ಬಹುತೇಕ ಎಲ್ಲ ಹೂಡಿಕೆಗಳಿಗೆ ಈಗ ನಾಮಿನಿ (ನಾಮ ನಿರ್ದೇಶನ) ಕಡ್ಡಾಯಗೊಳಿಸಲಾಗಿದೆ.

ಆದರೆ, ನಾಮಿನಿಯಲ್ಲಿ ಒಬ್ಬರ ಹೆಸರಿದ್ದು ವಿಲ್‌ನಲ್ಲಿ (ಉಯಿಲು) ಮತ್ತೊಬ್ಬರ ಹೆಸರು ಸೂಚಿಸಿದ್ದರೆ ಹಣ, ಆಸ್ತಿ ಯಾರ ಪಾಲಾಗುತ್ತದೆ? ಹೀಗೊಂದು ಪ್ರಶ್ನೆ ನಿಮಗೆ ಎದುರಾಗದಿರಬಹುದು. ಬನ್ನಿ, ನಾಮಿನಿ ಮತ್ತು ವಿಲ್ ನಡುವಿನ ವ್ಯತ್ಯಾಸ ತಿಳಿದುಕೊಂಡು ಯಾವುದಕ್ಕೆ ಯಾವ ಸಂದರ್ಭದಲ್ಲಿ ಹೆಚ್ಚು ಮಾನ್ಯತೆ ಸಿಗುತ್ತದೆ ಎನ್ನುವುದನ್ನು ಅರಿಯೋಣ.

ನಾಮಿನಿ ಮತ್ತು ವಿಲ್ ನಡುವಿನ ವ್ಯತ್ಸಾಸ: 

ADVERTISEMENT

ನಾಮಿನಿ ಮತ್ತು ವಿಲ್ ಎರಡು ಕೂಡ ಬಹಳ ಮುಖ್ಯವಾದ ಕಾನೂನುಬದ್ಧ ದಾಖಲೆಗಳಾಗಿವೆ. 1925ರ ಉತ್ತರಾಧಿಕಾರ ಕಾಯ್ದೆ ಪ್ರಕಾರ ವಿಲ್ ಕಾನೂನು ದಾಖಲೆಯಾಗಿದೆ. ವ್ಯಕ್ತಿಯ ಮರಣದ ನಂತರ ಸ್ಥಿರಾಸ್ತಿ, ಚರಾಸ್ತಿಗಳು ಯಾರಿಗೆ ಸಲ್ಲಬೇಕು ಮತ್ತು ಹೇಗೆ ಹಂಚಿಕೆಯಾಗಬೇಕು ಎನ್ನುವುದನ್ನು ಇದು ತಿಳಿಸಿಕೊಡುತ್ತದೆ.

ಉದಾಹರಣೆಗೆ ವ್ಯಕ್ತಿಯೊಬ್ಬರು ಮ್ಯೂಚುವಲ್ ಫಂಡ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಹೂಡಿಕೆ ಮಾಡಿದ್ದಾರೆ ಎಂದುಕೊಳ್ಳಿ. ಜೊತೆಗೆ, ಎರಡು ಎಕರೆ ಸ್ವಯಾರ್ಜಿತ ಕೃಷಿ ಜಮೀನು ಹೊಂದಿದ್ದು, ಸ್ವಂತ ಮನೆಯಲ್ಲೇ ವಾಸವಿದ್ದಾರೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ಯಾವ್ಯಾವ ಆಸ್ತಿ ಯಾರಿಗೆ ಸಲ್ಲಬೇಕು ಎಂದು ವಿಲ್‌ನಲ್ಲಿ ನಮೂದಿಸಬಹುದು. ಪತಿಗೆ, ಪತ್ನಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ, ಸಂಬಂಧಿಕರಿಗೆ, ದತ್ತಿ ಸಂಸ್ಥೆಗಳಿಗೆ ದಾನ ಹೀಗೆ ಅವರಿಷ್ಟದಂತೆ ಆಸ್ತಿ ಹಂಚಿಕೆ ಮಾಡಬಹುದು.

ನಾಮಿನಿಯು ವ್ಯಕ್ತಿಯ ಮರಣದ ನಂತರ ನಿರ್ದಿಷ್ಟ ಆಸ್ತಿಯ ಹಕ್ಕುದಾರ ಯಾರು ಎನ್ನುವುದನ್ನಷ್ಟೇ ಸೂಚಿಸುತ್ತದೆ. ಆಸ್ತಿಯ ಹಕ್ಕುದಾರನಾಗುವುದಕ್ಕೂ ಆಸ್ತಿಯ ಮಾಲೀಕನಾಗುವುದಕ್ಕೂ ವ್ಯತ್ಯಾಸವಿದೆ. ನಾಮಿನಿ ಕೇವಲ ಆಸ್ತಿಯ ಹಕ್ಕನ್ನು ಮಾತ್ರ ಒದಗಿಸುತ್ತದೆ. ನಾಮಿನಿ ಮಾಡಲಾಗಿರುವ ವ್ಯಕ್ತಿ ಆಸ್ತಿಯ ಪಾಲಕನಾಗಿರುತ್ತಾನೆ ಅಷ್ಟೇ. ಆಸ್ತಿಯ ಹಕ್ಕುದಾರನಾಗುವ ವ್ಯಕ್ತಿ ಅದನ್ನು ನಿರ್ವಹಿಸಿ ಸರಿಯಾದ ಸಂದರ್ಭದಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗೆ ವರ್ಗಾಯಿಸಬೇಕಾಗುತ್ತದೆ.

ಹೀಗಿರುವಾಗ ನಾಮಿನಿ ಅಗತ್ಯವೇನು ಎಂಬ ಪ್ರಶ್ನೆ ಬರಬಹುದು. ಎಷ್ಟೋ ಸಂದರ್ಭದಲ್ಲಿ ವ್ಯಕ್ತಿಗಳು ವಿಲ್ ಬರೆದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಾಮಿನಿ ಆಗಿರುವ ವ್ಯಕ್ತಿಗೆ ಆಸ್ತಿ ವರ್ಗಾವಣೆಯಾಗಿ ಬಳಿಕ ಕಾನೂನುಬದ್ಧ ಉತ್ತರಾಧಿಕಾರಿಗೆ ಆಸ್ತಿ ಸಲ್ಲುತ್ತದೆ. ವಿಲ್ ಕೂಡ ಬರೆದಿಲ್ಲ, ನಾಮಿನಿ ಕೂಡ ಮಾಡಿಲ್ಲದಿದ್ದರೆ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ವರ್ಗಾಯಿಸಲು ಕಷ್ಟವಾಗುತ್ತದೆ.

ಸಂದರ್ಭ 1:

ಉದಾಹರಣೆಗೆ ವ್ಯಕ್ತಿಯೊಬ್ಬರು ಷೇರುಗಳಲ್ಲಿ ಹೂಡಿಕೆ ಮಾಡಿದ್ದು ತಮ್ಮ ಸೋದರನನ್ನು ಅದಕ್ಕೆ ನಾಮಿನಿಯಾಗಿ ಮಾಡಿದ್ದಾರೆ ಎಂದುಕೊಳ್ಳಿ. ಆದರೆ, ಅದೇ ವ್ಯಕ್ತಿ ವಿಲ್ ಬರೆಯುವಾಗ ಪುತ್ರ ಅಥವಾ ಪುತ್ರಿಗೆ ಷೇರುಗಳು ಸಲ್ಲಬೇಕು ಎಂದು ನಮೂದಿಸಿದ್ದಾರೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಮರಣದ ನಂತರ ಷೇರುಗಳು ಮೊದಲು ನಾಮಿನಿಯಾಗಿರುವ ಸೋದರನಿಗೆ ವರ್ಗಾವಣೆಗೊಂಡು ಬಳಿಕ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುವ ವ್ಯಕ್ತಿಯ ಪುತ್ರ ಅಥವಾ ಪುತ್ರಿಯ ಖಾತೆಗೆ ಬರುತ್ತವೆ.

ಸಂದರ್ಭ 2: ಉದಾಹರಣೆಗೆ ವ್ಯಕ್ತಿಯೊಬ್ಬ ಷೇರುಗಳಲ್ಲಿ ಹೂಡಿಕೆ ಮಾಡಿದ್ದು, ತಮ್ಮ ಸೋದರನನ್ನು ಅದಕ್ಕೆ ನಾಮಿನಿಯಾಗಿ ಮಾಡಿದ್ದಾರೆ ಎಂದುಕೊಳ್ಳಿ. ಮತ್ತೆ ವಿಲ್ ಬರೆಯುವಾಗಲೂ ಸೋದರನಿಗೇ ಅದು ಸಲ್ಲಬೇಕು ಎಂದು ಬರೆದಿದ್ದಾರೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಮರಣದ ನಂತರ ಷೇರುಗಳು ಸೋದರನಿಗೆ ಮಾತ್ರ ಸಿಗುತ್ತವೆ.

ಕಿವಿಮಾತು: ನಾಮಿನಿ ಮತ್ತು ವಿಲ್‌ನ ಮಹತ್ವ ನಿಮಗೆ ಅರ್ಥವಾಗಿದೆ ಎಂದು ಭಾವಿಸಿದ್ದೇನೆ. ನಿಮ್ಮ ಆಸ್ತಿ ಸುಲಭವಾಗಿ ನಿಮ್ಮವರಿಗೆ ವರ್ಗಾವಣೆಯಾಗಬೇಕಾದರೆ ತಪ್ಪದೇ ನಾಮಿನಿ ಮತ್ತು ವಿಲ್ ಮಾಡಿ. ಪೂರಕ ಸಲಹೆಗೆ ಕಾನೂನು ತಜ್ಞರ ನೆರವು ಪಡೆಯಿರಿ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಮತ್ತೆ ಪುಟಿದೆದ್ದ ಸೂಚ್ಯಂಕಗಳು

ಜುಲೈ 26ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ.

81332 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.90ರಷ್ಟು ಗಳಿಸಿಕೊಂಡಿದೆ. 24834 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.24ರಷ್ಟು ಜಿಗಿದಿದೆ. ವಾರದ ಆರಂಭದ ನಾಲ್ಕು ದಿನಗಳಲ್ಲಿ ಕುಸಿತದ ಹಾದಿಯಲ್ಲಿದ್ದ ಸೂಚ್ಯಂಕಗಳು ವಾರಾಂತ್ಯದಲ್ಲಿ ಗಣನೀಯ ಏರಿಕೆ ಕಂಡಿವೆ.

ಜೂನ್ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿಯು ಶೇ 2.8ರಷ್ಟು ಬೆಳವಣಿಗೆ ಕಂಡಿರುವುದು ಅಮೆರಿಕದಲ್ಲಿ ಹಣದುಬ್ಬರ ಇಳಿಕೆಯಾಗಿರುವುದು ಮುಂಬರುವ ದಿನಗಳಲ್ಲಿ ಅಮೆರಿಕದ ಫೆಡರಲ್ ರಿಸರ್ವ್‌ ಬ್ಯಾಂಕ್ ಬಡ್ಡಿದರ ಕಡಿತ ಮಾಡಬಹುದು ಎಂಬ ವಿಶ್ವಾಸ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಶೇ 1.86 ನಿಫ್ಟಿ ರಿಯಲ್ ಎಸ್ಟೇಟ್ ಶೇ 1.69 ಫೈನಾನ್ಸ್ ಶೇ 1.19ರಷ್ಟು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.44ರಷ್ಟು ಕುಸಿದಿವೆ.

ನಿಫ್ಟಿ ಫಾರ್ಮಾ ಶೇ 5.77 ಮಾಧ್ಯಮ ಶೇ 5.74 ಆಟೊ ಶೇ 5.16 ಎನರ್ಜಿ ಶೇ 2.79 ಎಫ್‌ಎಂಸಿಜಿ ಶೇ 2.69 ಮಾಹಿತಿ ತಂತ್ರಜ್ಞಾನ ಶೇ 2.64 ಅನಿಲ ಮತ್ತು ತೈಲ ಶೇ 2.51 ಮತ್ತು ನಿಫ್ಟಿ ಲೋಹ ವಲಯ ಶೇ 1.81ರಷ್ಟು ಹೆಚ್ಚಳ ಕಂಡಿವೆ.

ವಾರದ ಏರಿಕೆ–ಇಳಿಕೆ: 

ನಿಫ್ಟಿಯಲ್ಲಿ ಟಾಟಾ ಮೋಟರ್ಸ್ ಶೇ 12.98 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 10.53 ಸನ್ ಫಾರ್ಮಾ ಶೇ 9.38 ಎನ್‌ಟಿಪಿಸಿ ಶೇ 8.78 ಬಿಪಿಸಿಎಲ್ ಶೇ 8.2 ಟೈಟನ್ ಶೇ 6.82 ಸಿಪ್ಲಾ ಶೇ 6.39 ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 6.27 ಡಿವೀಸ್ ಲ್ಯಾಬ್ಸ್ ಶೇ 6.05 ಐಟಿಸಿ ಶೇ 5.95 ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 4.96ರಷ್ಟು ಗಳಿಸಿಕೊಂಡಿವೆ.

ಎಕ್ಸಿಸ್ ಬ್ಯಾಂಕ್ ಶೇ 8.86 ವಿಪ್ರೊ ಶೇ 5.79 ನೆಸ್ಲೆ ಇಂಡಿಯಾ ಶೇ 4.63 ಬಜಾಜ್ ಫಿನ್‌ಸರ್ವ್ ಶೇ 3.5 ಐಸಿಐಸಿಐ ಬ್ಯಾಂಕ್ ಶೇ 3.25 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 2.95 ರಿಲಯನ್ಸ್ ಇಂಡಸ್ಟ್ರೀಸ್ ಶೇ 2.95 ಬಜಾಜ್ ಫೈನಾನ್ಸ್ ಶೇ 2.09 ಇಂಡಸ್ ಇಂಡ್ ಬ್ಯಾಂಕ್ ಶೇ 1.79 ಹಿಂದುಸ್ತಾನ್‌ ಯೂನಿಲಿವರ್ ಶೇ 0.55 ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಶೇ 0.41ರಷ್ಟು ಕುಸಿದಿವೆ.

ಮುನ್ನೋಟ:

ಈ ವಾರ ಭಾರತ್ ಎಲೆಕ್ಟ್ರಾನಿಕ್ಸ್ ಎಕ್ಸೈಡ್ ಇಂಡಸ್ಟ್ರೀಸ್ ಎಚ್‌ಪಿಸಿಎಲ್ ಬಿಪಿಸಿಎಲ್ ಎಸಿಸಿ ಇಂಡಿಯನ್ ಬ್ಯಾಂಕ್ ಅದಾನಿ ವಿಲ್ಮಾರ್ ಮಾರುತಿ ಸುಜುಕಿ ಮಹೀಂದ್ರ ಆ್ಯಂಡ್‌ ಮಹೀಂದ್ರ  ಟಾಟಾ ಸ್ಟೀಲ್ ಅಂಬುಜಾ ಸಿಮೆಂಟ್ಸ್ ಬ್ಯಾಂಕ್ ಆಫ್ ಬರೋಡಾ ಐಟಿಸಿ ಟಾಟಾ ಮೋಟರ್ಸ್ ಸನ್ ಫಾರ್ಮಾ ಡಾಬರ್ ಇಂಡಿಯಾ ಕಲ್ಯಾಣ್ ಜ್ಯುವೆಲರ್ಸ್ ಟೈಟನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಯು ಷೇರುಪೇಟೆಗಳ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.