ADVERTISEMENT

ಬಂಡವಾಳ ಮಾರುಕಟ್ಟೆ| ತೆರಿಗೆ ಉಳಿಸುವ ಈ ಸೆಕ್ಷನ್‌ಗಳು ಗೊತ್ತೇ?

ಅವಿನಾಶ್ ಕೆ.ಟಿ
Published 31 ಜನವರಿ 2023, 6:57 IST
Last Updated 31 ಜನವರಿ 2023, 6:57 IST
   

ವೈಯಕ್ತಿಕ ಹಣಕಾಸು ನಿರ್ವಹಣೆಯ ಪ್ರಮುಖ ಅಂಶಗಳಲ್ಲಿ ತೆರಿಗೆ ನಿರ್ವಹಣೆ ಕೂಡ ಒಂದು. ಯಾರು ಕಾನೂನಿನ ಮಿತಿಯಲ್ಲಿ ನ್ಯಾಯಯುತವಾಗಿ ತೆರಿಗೆ ಉಳಿಸಲು ಕಾರ್ಯಪ್ರವೃತ್ತರಾಗುತ್ತಾರೋ ಅವರ ನಿವ್ವಳ ಆದಾಯ ಹೆಚ್ಚಾಗುತ್ತದೆ. ತೆರಿಗೆ ಉಳಿಸಬೇಕು ಅಂದರೆ ಆದಾಯ ತೆರಿಗೆ ಕಾಯ್ದೆಯ ಯಾವೆಲ್ಲಾ ಸೆಕ್ಷನ್‌ಗಳ ಅಡಿ ಉಳಿತಾಯಕ್ಕೆ ಅವಕಾಶವಿದೆ ಎನ್ನುವುದರ ಮಾಹಿತಿ ಇರಬೇಕು. ಅಂತಹ ಸೆಕ್ಷನ್‌ಗಳ ಬಗ್ಗೆ ಒಮ್ಮೆ ಗಮನ ಹರಿಸೋಣ.

ಸೆಕ್ಷನ್ 80 ಸಿ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ₹ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್‌ವೈ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಜೀವ ವಿಮೆ ಪ್ರೀಮಿಯಂ, ಯುಲಿಪ್ ಪ್ಲಾನ್, ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ), 5 ವರ್ಷದ ಅವಧಿ ಠೇವಣಿ (ಎಫ್.ಡಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಕ್ಕಳ ಶಾಲೆಯ ಬೋಧನಾ ಶುಲ್ಕ, ಮನೆ ಸಾಲದ ಮೇಲಿನ ಅಸಲು ಪಾವತಿ ಮೊತ್ತಕ್ಕೆ ಈ ವಿನಾಯಿತಿ ಪಡೆಯಬಹುದು.

ಸೆಕ್ಷನ್ 80 ಡಿ: ಈ ಸೆಕ್ಷನ್ ಅಡಿಯಲ್ಲಿ ಕುಟುಂಬಕ್ಕೆ (ಸ್ವಂತಕ್ಕೆ, ಪತ್ನಿ, ಮಕ್ಕಳಿಗೆ) ಪಡೆಯುವ ಆರೋಗ್ಯ ವಿಮೆಗೆ ₹ 25 ಸಾವಿರದವರೆಗೆ ತೆರಿಗೆ ವಿನಾಯಿತಿ ಇದೆ. 60 ವರ್ಷ ಮೇಲ್ಪಟ್ಟ ಪೋಷಕರಿಗೆ ವಿಮೆ ಮಾಡಿಸಿದ್ದರೆ ₹ 50 ಸಾವಿರದವರೆಗೆ ತೆರಿಗೆ ಅನುಕೂಲವಿದೆ.

ADVERTISEMENT

ಸೆಕ್ಷನ್ 80 ಜಿಜಿ: ಬಾಡಿಗೆಗೆ ಪಡೆದಿರುವ ಮನೆಗೆ ವಾರ್ಷಿಕ ₹ 60 ಸಾವಿರದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ವಿನಾಯಿತಿಯು ಸ್ವಂತ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಅನ್ವಯ ಆಗುವುದಿಲ್ಲ.

ಸೆಕ್ಷನ್ 80 ಇ: ಸ್ವಂತಕ್ಕೆ, ಪತ್ನಿ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರೆ ನಿಗದಿತ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಡ್ಡಿಯ ಮೇಲೆ ವಿನಾಯಿತಿ ಸಿಗುತ್ತದೆ.

ಸೆಕ್ಷನ್ 80 ಟಿಟಿಎ, 80 ಟಿಟಿಬಿ: ವ್ಯಕ್ತಿ ಗಳಿಸಿರುವ ₹ 10 ಸಾವಿರದವರೆಗಿನ ಬಡ್ಡಿ ಆದಾಯಕ್ಕೆ ವಿನಾಯಿತಿ ಲಭ್ಯ. ಅಂಚೆ ಕಚೇರಿ, ಉಳಿತಾಯ ಖಾತೆ ಹೂಡಿಕೆಗಳ ಮೇಲೆ ಬರುವ ಬಡ್ಡಿಗೆ ಇದು ಅನ್ವಯ. ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಖಾತೆ ಮತ್ತು ಅವಧಿ ಠೇವಣಿ ಮೇಲೆ ಸಿಗುವ ಬಡ್ಡಿಗೆ ₹ 50 ಸಾವಿರದತನಕ ವಿನಾಯಿತಿ ಇದೆ.

ಸೆಕ್ಷನ್ 80 ಸಿಸಿಡಿ (1), 80 ಸಿಸಿಡಿ (1ಬಿ): ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿ ಈ ಅನುಕೂಲ ಪಡೆಯಬಹುದು. ನಿಮ್ಮ ವೇತನದ ಶೇ 10ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಸ್ವಂತ ಉದ್ಯೋಗಿಗಳಿಗೆ ಶೇ 20ರಷ್ಟು ವಿನಾಯಿತಿ ಸಿಗುತ್ತದೆ. 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ₹ 50 ಸಾವಿರದ ವರೆಗಿನ ಎನ್‌ಪಿಎಸ್ ಹೂಡಿಕೆಗೆ ವಿನಾಯಿತಿ ಇದೆ.

ಸೆಕ್ಷನ್ 24(ಬಿ), ಸೆಕ್ಷನ್ 80 ಇಇ, ಸೆಕ್ಷನ್ 80 ಇಇಎ: 1999ರ ನಂತರ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 24(ಬಿ) ಅಡಿಯಲ್ಲಿ ₹ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಮೊದಲ ಬಾರಿಗೆ ಮನೆ ಖರೀದಿಸುವವರು ಸೆಕ್ಷನ್ 80 ಇಇ ಅಡಿಯಲ್ಲಿ ಹೆಚ್ಚುವರಿ ₹ 50 ಸಾವಿರದವರೆಗೆ ವಿನಾಯಿತಿ ಪಡೆಯಬಹುದು.

₹ 35 ಲಕ್ಷಕ್ಕಿಂತ ಕಡಿಮೆ ಸಾಲ ಪಡೆದಿದ್ದು ನಿಮ್ಮ ಆಸ್ತಿಯ ಮೌಲ್ಯ ₹ 50 ಲಕ್ಷ ಇದ್ದಲ್ಲಿ ಮಾತ್ರ ಈ ವಿನಾಯಿತಿ ಲಭ್ಯ. ಜತೆಗೆ 2017ನೇ ವರ್ಷದಲ್ಲಿ ಅಥವಾ ನಂತರದಲ್ಲಿ ಪಡೆದಿರುವ ಸಾಲಗಳಿಗೆ ಮಾತ್ರ ಇದು ಮಾನ್ಯ. ಸೆಕ್ಷನ್ 24 (ಬಿ) ಅಡಿಯಲ್ಲಿ ಸಾಲದ ಮೇಲಿನ ಬಡ್ಡಿ ಪಾವತಿಗೆ ₹ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದಕ್ಕಿಂತ ಹೆಚ್ಚಿಗೆ ಬಡ್ಡಿ ಕಟ್ಟಿದ್ದರೆ ಸೆಕ್ಷನ್ 80 ಇಇಎ ಅಡಿಯಲ್ಲಿ ವಿನಾಯಿತಿ ಲಭ್ಯ. 2019ರಲ್ಲಿ ಜಾರಿಗೆ ಬಂದಿರುವ ಈ ಸೆಕ್ಷನ್ ಅಡಿಯಲ್ಲಿ ನೀವು ₹ 1.5 ಲಕ್ಷದವರೆಗೆ ಹೆಚ್ಚುವರಿಯಾಗಿ ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ವಿನಾಯಿತಿ ಪಡೆಯಬಹುದು. ಹಣಕಾಸು ವರ್ಷ 2020ರಲ್ಲಿ ಸಾಲ ಪಡೆದಿದ್ದು, ಮನೆಯ ನೋಂದಣಿ ಮೊತ್ತ ₹ 45 ಲಕ್ಷದ ಒಳಗಿದ್ದರೆ ಮಾತ್ರ ಈ ಅನುಕೂಲ ಸಿಗುತ್ತದೆ.

(ಲೇಖಕ ಇಂಡಿಯನ್ ಮನಿ ಡಾಟ್‌ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

***

ಷೇರುಪೇಟೆಯಲ್ಲಿ ಅನಿಶ್ಚಿತತೆಯ ಓಟ, ಸೂಚ್ಯಂಕಗಳು ಕುಸಿತ

ಸತತ ಎರಡು ವಾರಗಳಿಂದ ಗಳಿಕೆ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕುಸಿತದ ಹಾದಿ ತುಳಿದಿವೆ. 59,330 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.12ರಷ್ಟು ಕುಸಿತ ಕಂಡಿದೆ. 17,604 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.34ರಷ್ಟು ತಗ್ಗಿದೆ. ಲಾಭ ಗಳಿಕೆಯ ಉದ್ದೇಶದಿಂದ ಉಂಟಾದ ಮಾರಾಟದ ಒತ್ತಡ, ಮುಂಬರುವ ಕೇಂದ್ರ ಬಜೆಟ್ ಘೋಷಣೆಗಳ ಬಗ್ಗೆ ಗಮನ, ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳದ ಬಗ್ಗೆ ಯಾವ ನಿರ್ಣಯ ಕೈಗೊಳ್ಳಲಿದೆ ಎನ್ನುವ ವಿಚಾರ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 9.6ರಷ್ಟು ಕುಸಿದಿದೆ. ನಿಫ್ಟಿ ಎನರ್ಜಿ ಸೂಚ್ಯಂಕ ಶೇ 7.5ರಷ್ಟು ತಗ್ಗಿದೆ. ತೈಲ ಮತ್ತು ಅನಿಲ ಸೂಚ್ಯಂಕ ಶೇ 7.4ರಷ್ಟು ಕುಸಿದಿದ್ದು ನಿಫ್ಟಿ ಲೋಹ ಸೂಚ್ಯಂಕ ಸಹ ಶೇ 6ರಷ್ಟು ಇಳಿಕೆಯಾಗಿದೆ. ನಿಫ್ಟಿ ವಾಹನ ಸೂಚ್ಯಂಕ ಶೇ 3ರಷ್ಟು ಹೆಚ್ಚಳ ದಾಖಲಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 9,352.18 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,210.53 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟ್ರಾನ್ಸ್‌ಮಿಷನ್ ಶೇ 3ರಷ್ಟು, ಅಂಬುಜಾ ಸಿಮೆಂಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷನ್ ಇಕನಾಮಿಕ್ ಜೋನ್, ಅದಾನಿ ಎಂಟರ್‌ಪ್ರೈಸಸ್ ಮತ್ತು ಇಂಡಸ್ ಟವರ್ಸ್ ಶೇ 20ರಿಂದ ಶೇ 26ರವರೆಗೆ ಕುಸಿತ ಕಂಡಿವೆ.

ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಎಸಿಸಿ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ವೋಡಾಫೋನ್ ಐಡಿಯಾ, ಅದಾನಿ ಪವರ್, ಜೆಎಸ್‌ಡಬ್ಲ್ಯೂ ಎನರ್ಜಿ, ಪವರ್ ಫೈನಾನ್ಸ್ ಕಾರ್ಪೊರೇಷನ್, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಬಿಎಚ್‌ಇಎಲ್ ಕುಸಿತ ಕಂಡಿವೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ ಕಿರಿ ಇಂಡಸ್ಟ್ರೀಸ್, ಜಿಟಿಎಲ್ ಇನ್ಫ್ರಾಸ್ಟ್ರಕ್ಚರ್, ಡಿಕ್ಸಾನ್ ಟೆಕ್ನಾಲಜೀಸ್, ಪಿಸಿ ಜ್ಯುವೆಲರ್, ಮೊನಾರ್ಕ್ ನೆಟ್‌ವರ್ತ್ ಕ್ಯಾಪಿಟಲ್, ಪವರ್ ಮೆಕ್ ಪ್ರಾಜೆಕ್ಟ್ಸ್, ಜಯಂತ್ ಆಗ್ರೋ ಆರ್ಗ್ಯಾನಿಕ್ಸ್, ಕಿಬಿಸಿ ಗ್ಲೋಬಲ್ ಶೇ 15ರಿಂದ ಶೇ 26ರಷ್ಟು ಕುಸಿದಿವೆ.

ಮುನ್ನೋಟ: ಜನವರಿ 31ಮತ್ತು ಫೆಬ್ರುವರಿ 1ರಂದು ಅಮೆರಿಕದ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ ಸಭೆ ಇದೆ. ಬಡ್ಡಿ ದರ ಮತ್ತಷ್ಟು ಹೆಚ್ಚಳ ವಾಗುವುದೇ ಎನ್ನುವ ಬಗ್ಗೆ ಈ ಸಭೆಯಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಇದೆ. ಫೆಬ್ರುವರಿ 6ರಿಂದ 8ರವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ಇದೆ. ಈ ಎಲ್ಲ ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.