ADVERTISEMENT

ಬಂಡವಾಳ ಮಾರುಕಟ್ಟೆ | ಮ್ಯೂಚುಯಲ್‌ ಫಂಡ್‌: ಸಂಪತ್ತು ಗಳಿಕೆ ಹೇಗೆ?

ಕಾವ್ಯ ಡಿ.
Published 6 ಮೇ 2024, 0:29 IST
Last Updated 6 ಮೇ 2024, 0:29 IST
   

ಸಂಪತ್ತು ಸೃಷ್ಟಿಸುವುದು ಹೇಗೆ ಎನ್ನುವ ಪ್ರಶ್ನೆ ಬಂದ ತಕ್ಷಣ ಅಲ್ಲಿ ಮ್ಯೂಚುಯಲ್ ಫಂಡ್‌ನ ಪ್ರಸ್ತಾಪ ಬಂದೇ ಬರುತ್ತದೆ. ಅದರಲ್ಲೂ ಹೊಸದಾಗಿ ಹೂಡಿಕೆ ಆರಂಭಿಸುವವರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ ಬಗ್ಗೆ ಇನ್ನಿಲ್ಲದ ಉತ್ಸಾಹವಿರುತ್ತದೆ.

ಆದರೆ, 45ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಕಂಪನಿಗಳು ರೂಪಿಸಿರುವ  1,300ಕ್ಕೂ ಹೆಚ್ಚು ಯೋಜನೆಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದೇ ಪ್ರಶ್ನೆ. ಈ ಗೊಂದಲ ನಿಮಗೂ ಇದ್ದರೆ ಉತ್ತರ ಇಲ್ಲಿದೆ.

ಸಂಪತ್ತು ಸೃಷ್ಟಿ ಎಂದರೇನು?:‌

ADVERTISEMENT

‌ನಮ್ಮ ಆಸೆ–ಆಕಾಂಕ್ಷೆ ಈಡೇರಿಸಿಕೊಳ್ಳಲು ಸಾಕಷ್ಟು ಹಣ ಹೊಂದಿರುವುದನ್ನು ‘ಸಂಪತ್ತು ಸೃಷ್ಟಿ’ ಎಂದು ಸರಳವಾಗಿ ಕರೆಯಬಹುದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಹಣಕಾಸಿನ ಗುರಿಗಳನ್ನು ಪೂರೈಸಿಕೊಳ್ಳಲು ಸಂಪತ್ತನ್ನು ಸೃಷ್ಟಿ ಮಾಡಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ನಿವೃತ್ತಿ ಬಳಿಕ ವಿದೇಶ ಪ್ರವಾಸ ಕೈಗೊಳ್ಳಬೇಕೆಂಬುದು ನಿಮ್ಮ ಇಚ್ಛೆಯಾಗಿರುತ್ತದೆ ಎಂದುಕೊಳ್ಳಿ. ಆ ಆಸೆ ಕೈಗೂಡುವಂತೆ ಮಾಡಲು ಸಂಪತ್ತು ಅಂದರೆ ಹಣ ಬೇಕೇಬೇಕು. ನಿಮ್ಮ ಮಕ್ಕಳನ್ನು ವಿದೇಶದ ವಿಶ್ವವಿದ್ಯಾಲಯದಲ್ಲಿ ಓದಿಸುವ ಗುರಿ ಇದೆ ಎಂದುಕೊಳ್ಳಿ. ಆಗ ಅದಕ್ಕೆ ದುಡ್ಡು ಅಂದರೆ ಸಂಪತ್ತು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗೆ ಪ್ರತಿಯೊಂದು ಗುರಿ ಪೂರೈಸಿಕೊಳ್ಳಲು ಸಂಪತ್ತು ಅಗತ್ಯವಾಗುತ್ತದೆ. ಸಂಪತ್ತು ಸೃಷ್ಟಿಗೆ ಭದ್ರ ಬುನಾದಿಯೇ ಉಳಿತಾಯ ಮತ್ತು ಹೂಡಿಕೆ.

ಹಣಕಾಸಿನ ಗುರಿ ಎಂದರೇನು?:

22 ವರ್ಷದ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಇನ್ನು 6 ವರ್ಷಗಳಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾದಲು ₹12 ಲಕ್ಷ ಹೊಂದುವ ಗುರಿ ಇಟ್ಟುಕೊಂಡಿದ್ದಾನೆ ಎಂದು ಭಾವಿಸಿ. ಈಗಷ್ಟೇ ಮದುವೆಯಾಗಿರುವ ಜೋಡಿ ಇನ್ನು 15 ವರ್ಷಗಳಲ್ಲಿ ಮನೆ ಖರೀದಿಸುವ ಉದ್ದೇಶ ಹೊಂದಿದ್ದು, ಆ ಗುರಿಗಾಗಿ ಬೇಕಿರುವ ಮೊತ್ತ ₹2 ಕೋಟಿ ಎಂದುಕೊಳ್ಳಿ. 35 ವರ್ಷದ ವ್ಯಕ್ತಿಗೆ ಹೊಸ ಕಾರು ಕೊಳ್ಳಲು 2 ವರ್ಷದಲ್ಲಿ ₹20 ಲಕ್ಷದ ಅಗತ್ಯವಿದೆ ಎಂದು ಭಾವಿಸಿ. ಈ ಎಲ್ಲಾ ಮೂರು ಸನ್ನಿವೇಶಗಳು ಹಣಕಾಸಿನ ಗುರಿಗಳಿಗೆ ಉದಾಹರಣೆಯಾಗಿ ನಿಲ್ಲುತ್ತವೆ.

ವ್ಯಕ್ತಿಯ ಪರಿಸ್ಥಿತಿ ಮತ್ತು ಅಗತ್ಯಕ್ಕೆ ತಕ್ಕಂತೆ ಹಣಕಾಸಿನ ಗುರಿಗಳು ಬೇರೆ ಬೇರೆಯಾಗಿರುತ್ತವೆ. ಯಾವುದೇ ಹಣಕಾಸಿನ ಗುರಿಗೆ ಎಷ್ಟು ಹಣ ಅಗತ್ಯ? ಗುರಿ ತಲುಪಲು ಬೇಕಿರುವ ಹಣ ಹೊಂದಿಸಲು ಎಷ್ಟು ಸಮಯವಿದೆ? ಆ ನಿರ್ದಿಷ್ಟ ವ್ಯಕ್ತಿಯ ಸದ್ಯದ ವಯಸ್ಸು ಎಷ್ಟು ಎನ್ನುವುದು ಮುಖ್ಯವಾಗುತ್ತದೆ. ಈ ಮೂರು ಅಂಶಗಳನ್ನು ಒಳಗೊಳ್ಳದ ಹಣಕಾಸಿನ ಗುರಿ ಅಪೂರ್ಣವಾಗುತ್ತದೆ.

ಉದಾಹರಣೆಗೆ ಈಗಷ್ಟೇ ಕೆಲಸಕ್ಕೆ ಸೇರಿರುವ ವ್ಯಕ್ತಿ ಒಂದಷ್ಟು ವರ್ಷ ಕಳೆದ ಮೇಲೆ ಒಂದು ದೊಡ್ಡ ಕಾರು ತಗೋಬೇಕು ಅಂತ ಅಂದುಕೊಂಡರೆ ಅದು ಗೊತ್ತುಗುರಿಯಿಲ್ಲದ ಹಣಕಾಸಿನ ಗುರಿಯಾಗುತ್ತದೆ. ಯಾಕೆಂದರೆ ಇಲ್ಲಿ ನಿರ್ದಿಷ್ಟ ಅಂಕಿ ಸಂಖ್ಯೆಗಳಿಲ್ಲ.

ಗುರಿಯೇ ಇಲ್ಲ, ಹೂಡಿಕೆ ಮಾಡಲ್ಲ ಅನ್ನೋದು ತಪ್ಪು:

ಈಗಷ್ಟೇ ಕೆಲಸಕ್ಕೆ ಸೇರಿರುವ ಬಹಳಷ್ಟು ಯುವಕರು ನಮಗೆ ಯಾವುದೇ ಹಣಕಾಸಿನ ಗುರಿಗಳಿಲ್ಲ. ಹಾಗಾಗಿ, ನಾವು ಹೂಡಿಕೆ ಮಾಡುವುದಿಲ್ಲ ಎಂದು ಹೇಳುವುದನ್ನು ನಾನು ನೋಡಿದ್ದೇನೆ. ಆದರೆ, ಇಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗುರಿ ಆಧರಿಸಿ ಹೂಡಿಕೆ ಶುರು ಮಾಡಿ. ಎಲ್ಲರಿಗೂ ಕನಿಷ್ಠ ನಿವೃತ್ತಿಗಾದರೂ ಹಣ ಬೇಕಾಗುತ್ತದೆ. ಅದಾದರೂ ನಿಮ್ಮ ಗುರಿ ಎಂದುಕೊಂಡು ಕಾರ್ಯಪ್ರವೃತ್ತರಾಗ‌ಬೇಕು. ಬೇಗ ಹೂಡಿಕೆ ಆರಂಭಿಸಿದಾಗ ಹಣ ಬೆಳೆಯಲು ಸಮಯ ಸಿಗುತ್ತದೆ.

ನೆನಪಿಡಿ ಕೇವಲ ನಿಶ್ಚಿತ ಠೇವಣಿ (ಎಫ್.ಡಿ), ಅಂಚೆ ಕಚೇರಿ ಹೂಡಿಕೆಗಳಿಂದ ಸಂಪತ್ತು ಸೃಷ್ಟಿಸಿ ಹಣಕಾಸಿನ ಗುರಿಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಬೆಲೆ ಏರಿಕೆಯನ್ನು ಮೀರಿ ಲಾಭಾಂಶ ಕೊಡುವ ಸಾಮರ್ಥ್ಯವಿರುವ ಮ್ಯೂಚುಯಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಬಗ್ಗೆ ಅರಿತು ಹೂಡಿಕೆ ಮಾಡಿ. ಈ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ರಿಸ್ಕ್ ಇದ್ದರೂ ಸಹಿತ ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಕೊಡುವ ಸಾಮರ್ಥ್ಯವೂ ಈ ಹೂಡಿಕೆಗಳಿಗೆ ಇದೆ.

ಈ ವೇಗದ ಯುಗದಲ್ಲಿ ರಾತ್ರೋರಾತ್ರಿ ಶ್ರೀಮಂತರಾಗಿಬಿಡುವ ಧಾವಂತ ಎಲ್ಲರಿಗೂ ಇದೆ. ಆದರೆ, ನೆನಪಿರಲಿ, ಸಂಪತ್ತು ಸೃಷ್ಟಿಸುವಾಗ ಸಮಯ ಬೇಕಾಗುತ್ತದೆ. ಕನಿಷ್ಠ 10ರಿಂದ 15 ವರ್ಷಗಳ ಲೆಕ್ಕಾಚಾರದಲ್ಲಿ ಷೇರು ಆಧಾರಿತ ಹೂಡಿಕೆಗಳಲ್ಲಿ ತೊಡಗಿಸಿ. ಆಗ ಸಂಪತ್ತಿನೆಡೆಗೆ ಸಾಗುತ್ತೀರಿ.

ಮ್ಯೂಚುಯಲ್ ಫಂಡ್ ಹೂಡಿಕೆ ಆರಂಭ ಹೇಗೆ?:

ಹೊಸದಾಗಿ ಮ್ಯೂಚುಯಲ್ ಫಂಡ್ ಹೂಡಿಕೆ ಆರಂಭಿಸುವವರು ಉತ್ತಮ ಮ್ಯೂಚುಯಲ್ ಫಂಡ್ ಕಂಪನಿಗಳ ಇಂಡೆಕ್ಸ್ ಫಂಡ್, ಲಾರ್ಜ್ ಕ್ಯಾಪ್ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡು ನಿಯಮಿತವಾಗಿ ಪ್ರತಿ ತಿಂಗಳು ₹2 ಸಾವಿರ, ₹3 ಸಾವಿರ, ₹5 ಸಾವಿರ, ₹10 ಸಾವಿರ, ₹20 ಸಾವಿರ ಹೀಗೆ ನಿಮ್ಮ ಹಣಕಾಸಿನ ಸ್ಥಿತಿಗತಿಗೆ ಅನುಗುಣವಾಗಿ ಎಸ್‌ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಹೂಡಿಕೆ ಮಾಡುತ್ತಾ ಬನ್ನಿ. ‌

ಮಾರುಕಟ್ಟೆ ಬಿದ್ದಾಗ ಎಸ್‌ಐಪಿ ನಿಲ್ಲಿಸಬೇಡಿ. ಪ್ರತಿದಿನದ ಮಾರುಕಟ್ಟೆ ಏರಿಳಿತಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಸಾಧ್ಯವಾದರೆ ನಿಮ್ಮ ಆದಾಯ ಹೆಚ್ಚಳವಾದಂತೆಲ್ಲಾ ಮ್ಯೂಚುಯಲ್ ಫಂಡ್‌ಗೆ ಹೂಡಿಕೆ ಮಾಡುವ ಮೊತ್ತವನ್ನೂ ಹೆಚ್ಚಳ ಮಾಡುತ್ತಾ ಬನ್ನಿ. ಆಗ ಖಂಡಿತವಾಗಲೂ ಸಂಪತ್ತು ಗಳಿಕೆ ಸಾಧ್ಯವಾಗುತ್ತದೆ. ಇನ್ನು ಆನ್‌ಲೈನ್ ಹೂಡಿಕೆ ಆ್ಯಪ್‌ಗಳು, ಮ್ಯೂಚುಯಲ್ ಫಂಡ್ ವೆಬ್‌ಸೈಟ್‌ಗಳು ಮತ್ತು ಮ್ಯೂಚುಯಲ್ ಫಂಡ್ ವಿತರಕರ ಮೂಲಕ ಎಸ್ಐಪಿ ಹೂಡಿಕೆ ಆರಂಭಿಸಬಹುದು. ವಿತರಕರ ಮೂಲಕ ಹೂಡಿಕೆ ಮಾಡಿದಾಗ ಕಮಿಷನ್ ಜಾಸ್ತಿ ಇರುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಷೇರುಪೇಟೆ: ಅಲ್ಪ ಗಳಿಕೆ ದಾಖಲಿಸಿದ ಸೂಚ್ಯಂಕಗಳು

ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅತ್ಯಲ್ಪ ಗಳಿಕೆ ದಾಖಲಿಸಿವೆ. 73878 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 20ರಷ್ಟು ಜಿಗಿದಿದೆ. 22475 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 25ರಷ್ಟು ಹೆಚ್ಚಳ ಕಂಡಿದೆ. ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಲಾಭ ಗಳಿಕೆಯ ಉದ್ದೇಶಕ್ಕೆ ಷೇರುಗಳನ್ನು ಮಾರಾಟ ಮಾಡುತ್ತಿದ್ದರೂ ಸೂಚ್ಯಂಕಗಳು ಸತತ ಎರಡನೇ ವಾರದಲ್ಲಿ ಗಳಿಕೆ ದಾಖಲಿಸಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 3.13ರಷ್ಟು ಕುಸಿದಿದೆ. ಐ.ಟಿ. ಸೂಚ್ಯಂಕ ಶೇ 2.25 ರಿಯಲ್ ಎಸ್ಟೇಟ್ ಶೇ 0.66 ಎಫ್‌ಎಂಸಿಜಿ ಶೇ 0.05ರಷ್ಟು ಇಳಿಕೆಯಾಗಿದೆ. ನಿಫ್ಟಿ ಹಣಕಾಸು ವಲಯದ ಸೂಚ್ಯಂಕ ಶೇ 2.08 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 2.01 ನಿಫ್ಟಿ ವಾಹನ ಸೂಚ್ಯಂಕ ಶೇ 1.94 ನಿಫ್ಟಿ ಎನರ್ಜಿ ಶೇ 1.51 ನಿಫ್ಟಿ ಬ್ಯಾಂಕ್ ಶೇ 1.5 ನಿಫ್ಟಿ ಫಾರ್ಮಾ ಶೇ 0.73 ಲೋಹ ವಲಯ ಶೇ 0.58 ಮತ್ತು ಅನಿಲ ಮತ್ತು ತೈಲ ಸೂಚ್ಯಂಕ ಶೇ 0.19ರಷ್ಟು ಹೆಚ್ಚಳ ಕಂಡಿವೆ. ಗಳಿಕೆ – ಇಳಿಕೆ: ನಿಫ್ಟಿಯಲ್ಲಿ ಮಹಿಂದ್ರ ಆ್ಯಂಡ್‌ ಮಹಿಂದ್ರ ಶೇ 7.08 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 6.59 ಗ್ರಾಸಿಮ್ ಇಂಡಸ್ಟ್ರೀಸ್ ಶೇ 5.74 ಕೋಲ್ ಇಂಡಿಯಾ ಶೇ 4.23 ಎಸ್‌ಬಿಐ ಶೇ 3.76 ಶ್ರೀರಾಮ್ ಫೈನಾನ್ಸ್ ಶೇ 3.39 ಬಿಪಿಸಿಎಲ್ ಶೇ 3.35 ಮತ್ತು ಐಸಿಐಸಿಐ ಬ್ಯಾಂಕ್ ಶೇ 3.15ರಷ್ಟು ಗಳಿಸಿಕೊಂಡಿವೆ. ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 8.45 ಅಪೋಲೊ ಹಾಸ್ಪಿಟಲ್ಸ್ ಶೇ 3.84 ಕೋಟಕ್ ಮಹಿಂದ್ರ ಬ್ಯಾಂಕ್ ಶೇ 3.8 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 3.76 ಏರ್‌ಟೆಲ್ ಶೇ 3.46 ಅದಾನಿ ಎಂಟರ್ ಪ್ರೈಸಸ್ ಶೇ 2.9 ಎಲ್ ಆ್ಯಂಡ್‌ ಟಿ ಶೇ 2.86 ಮತ್ತು ಎಲ್‌ಟಿಐ ಮೈಂಡ್‌ಟ್ರೀ ಶೇ 2.78ರಷ್ಟು ಕುಸಿದಿವೆ.

ಮುನ್ನೋಟ:

ಈ ವಾರ ಇಂಡಿಯನ್ ಬ್ಯಾಂಕ್ ಮ್ಯಾರಿಕೋ ಲುಪಿನ್ ಪಿಡಿಲೈಟ್ ಇಂಡಸ್ಟ್ರೀಸ್ ಜೆಎಸ್‌ಡಬ್ಲ್ಯು ಎನರ್ಜಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ವೋಲ್ಟಾಸ್ ಐಡಿಎಫ್‌ಸಿ ಏಷಿಯನ್ ಪೇಂಟ್ಸ್ ಬಿಪಿಸಿಎಲ್ ಎಚ್‌ಪಿಸಿಎಲ್ ಕ್ಯಾಮ್ಸ್ ಅಬೋಟ್ ಇಂಡಿಯಾ ಎಲ್ ಆ್ಯಂಡ್‌ ಟಿ ಟಿವಿಎಸ್ ಮೋಟಾರ್ ಕಂಪನಿ ಹೀರೊ ಮೋಟೊಕಾರ್ಪ್ ಟಾಟಾ ಪವರ್ ಟಾಟಾ ಮೋಟರ್ಸ್ ಸಿಪ್ಲಾ ಎಬಿಬಿ ಇಂಡಿಯಾ ಪಾಲಿಕ್ಯಾಬ್ ಇಂಡಿಯಾ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣ್ ಜ್ಯುವೆಲರ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ಮತ್ತು ದೇಶೀಯ ಬೆಳವಣಿಗೆಯು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.