ಕಾವ್ಯ ಡಿ.
ಹಣ ಪಡೆಯಲು ಎಟಿಎಂಗೆ ಹೋಗುತ್ತೇವೆ... ಆದರೆ, ಖಾತೆಯಲ್ಲಿ ಹಣ ಕಡಿತವಾದರೂ ಅದು ಕೈಗೆ ಬರುವುದಿಲ್ಲ. ಕಡಿತಗೊಂಡಿದ್ದ ಮೊತ್ತ ನಾಲ್ಕೈದು ದಿನಗಳ ಬಳಿಕ ಮತ್ತೆ ಖಾತೆಗೆ ಸಂದಾಯವಾಗುತ್ತೆ...
ಒಂದಲ್ಲ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರೂ ಈ ಸಮಸ್ಯೆ ಎದುರಿಸಿಯೇ ಇರುತ್ತೇವೆ. ಆದರೆ ನಾಲ್ಕೈದು ದಿನಗಳ ಬಳಿಕವೂ ಹಣ ನಿಮ್ಮ ಖಾತೆಗೆ ವಾಪಸ್ ಬರದಿದ್ದರೆ ಏನು ಮಾಡಬೇಕು? ಬ್ಯಾಂಕಿಗೆ ದೂರು ನೀಡುವುದು ಹೇಗೆ? ದೂರಿದ ಬಳಿಕವೂ ಬ್ಯಾಂಕ್ ಸ್ಪಂದಿಸದಿದ್ದರೆ ಯಾರ ಮೊರೆ ಹೋಗಬೇಕು? ಈ ವಿಚಾರವಾಗಿ ಒಂದಿಷ್ಟು ವಿವರಣೆ ಈ ಬರಹದಲ್ಲಿದೆ.
ತಾಂತ್ರಿಕ ದೋಷ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮಂಜುಳಾ (ಹೆಸರು ಬದಲಾಯಿಸಲಾಗಿದೆ) ಏಪ್ರಿಲ್ 25ರಂದು ಬೆಂಗಳೂರಿನ ಎಟಿಎಂ ಒಂದರಿಂದ ₹10 ಸಾವಿರ ಪಡೆಯಲು ಹೋದರು. ತಾಂತ್ರಿಕ ತೊಂದರೆಯಿಂದಾಗಿ ಎಟಿಎಂನಿಂದ ಹಣ ಬರಲಿಲ್ಲ. ಆದರೆ ಖಾತೆಯಿಂದ ₹10 ಸಾವಿರ ಕಡಿತಗೊಂಡಿತು. ಮಂಜುಳಾ ಅದೇ ದಿನ ಸಂಬಂಧಪಟ್ಟ ಬ್ಯಾಂಕಿನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿದರು. ಆದರೆ ಅದಕ್ಕೆ ಸೂಕ್ತ ಸ್ಪಂದನ ಸಿಗಲಿಲ್ಲ. ಬಳಿಕ ಮಂಜುಳಾ ಬ್ಯಾಂಕಿಗೆ ತೆರಳಿ ಲಿಖಿತ ದೂರು ನೀಡಿದಾಗ, ‘ಒಂದೆರಡು ದಿನಗಳಲ್ಲಿ ಸಮಸ್ಯೆ ಸರಿಪಡಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು. ಕೆಲವು ದಿನಗಳ ಬಳಿಕವೂ ಹಣ ವಾಪಸ್ಸಾಗದಿದ್ದಾಗ ಮಂಜುಳಾ ಮತ್ತೆ ಬ್ಯಾಂಕಿಗೆ ತೆರಳಿ, ಎಲ್ಲಿ ಸಮಸ್ಯೆಯಾಗಿದೆ ಎನ್ನುವುದನ್ನು ಮನಗಾಣಲು ಪ್ರಯತ್ನಿಸಿದರು. ಆಗಲೂ ಬ್ಯಾಂಕಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸಲಿಲ್ಲ.
‘ಬ್ಯಾಂಕ್ ದಾಖಲೆಗಳಲ್ಲಿ, ಹಣ ಮರುಸಂದಾಯ ಆಗಿದೆ ಎಂದು ಮಾಹಿತಿ ಇದೆ. ಇನ್ನು ಹಣ ವಾಪಸ್ ಕೊಡಲು ಸಾಧ್ಯವಿಲ್ಲ’ ಎಂದರು. ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ಕೊಡುವುದಾಗಿ ಮಂಜುಳಾ ಹೇಳಿದರೂ ಬ್ಯಾಂಕಿನವರು ಜಗ್ಗಲಿಲ್ಲ. ಸಣ್ಣ ಉದ್ಯೋಗದಲ್ಲಿದ್ದ ಮಂಜುಳಾಗೆ ದಿಕ್ಕೇ ತೋಚದಂತಾಯ್ತು. ಅವರ ತಿಂಗಳ ದುಡಿಮೆಯೇ ₹20 ಸಾವಿರ. ಹೀಗಿರುವಾಗ ₹10 ಸಾವಿರ ಎಟಿಎಂ ದೋಷದ ಕಾರಣಕ್ಕೆ ನಷ್ಟವಾದರೆ ಹೇಗಾಗಬೇಡ...?
ಕಣ್ಣೀರು ಒರೆಸಿದ ಆರ್‌ಬಿಐ: ಮಂಜುಳಾ ತಾವು ಎಟಿಎಂ ದೋಷದಿಂದ ₹10 ಸಾವಿರ ಕಳೆದುಕೊಂಡ ಬಗ್ಗೆ ಸ್ನೇಹಿತರಲ್ಲಿ ಹೇಳಿಕೊಂಡರು. ಸ್ನೇಹಿತರೊಬ್ಬರು, ಆರ್‌ಬಿಐ ವೆಬ್‌ಸೈಟ್ ಮೂಲಕ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು ಎಂದರು. ಅವರ ನೆರವು ಪಡೆದು ಮಂಜುಳಾ, ವೆಬ್‌ಸೈಟ್‌ನಲ್ಲಿರುವ ದೂರು ಸಲ್ಲಿಕೆ ವಿಭಾಗಕ್ಕೆ (www.rbi.org.in/Scripts/Complaints.aspx) ಭೇಟಿ ನೀಡಿ ಜೂನ್ 1ರಂದು ದೂರು ಸಲ್ಲಿಸಿದರು. ಹೆಸರು, ವಿಳಾಸ ನಮೂದಿಸಿ, ಬ್ಯಾಂಕಿನಿಂದ ತಮಗಾದ ನಷ್ಟ, ಅದರಿಂದಾದ ಮಾನಸಿಕ ವೇದನೆ, ಆರ್ಥಿಕ ತೊಂದರೆ ಮತ್ತು ಬ್ಯಾಂಕಿನ ವರ್ತನೆಯನ್ನು ವಿವರಿಸಿದರು. ಬ್ಯಾಂಕ್ ವಹಿವಾಟು ವಿವರ, ಬ್ಯಾಂಕಿಗೆ ಸಲ್ಲಿಸಿದ ದೂರು ಮತ್ತು ಅದಕ್ಕೆ ಸಿಕ್ಕಿದ ಹಿಂಬರಹ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿದರು. 2019 ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ಹೊರಡಿಸಿದ ಸುತ್ತೋಲೆ ಪ್ರಕಾರ ಬ್ಯಾಂಕ್ ಎಟಿಎಂನ ತಾಂತ್ರಿಕ ತೊಂದರೆಯಿಂದ ಗ್ರಾಹಕನ ಖಾತೆಯಲ್ಲಿ ಹಣ ಕಡಿತಗೊಂಡರೆ ಐದು ದಿನಗಳ ಒಳಗಾಗಿ ಅದನ್ನು ವಾಪಸ್ ನೀಡಬೇಕು. ಇಲ್ಲವಾದಲ್ಲಿ ಪ್ರತಿ ದಿನ ₹100 ದಂಡವನ್ನು ಬ್ಯಾಂಕ್ ಸಂತ್ರಸ್ತ ಗ್ರಾಹಕನಿಗೆ ನೀಡಬೇಕು ಎನ್ನುವ ನಿಯಮವನ್ನೂ ಉಲ್ಲೇಖಿಸಿದರು.
ದೂರು ನೀಡಿದ ಬಳಿಕ, ಜೂನ್ 13ರಂದು ಬ್ಯಾಂಕಿನಿಂದ ಮಂಜುಳಾಗೆ ₹10 ಸಾವಿರ ವಾಪಸ್ ಆಯಿತು. ಜೊತೆಗೆ ಜೂನ್ 21ರಂದು ₹4,200 ಪರಿಹಾರ ಸಿಕ್ಕಿತು. ತಮ್ಮದೇ ಹಣಕ್ಕಾಗಿ ಸುಮಾರು 50ಕ್ಕೂ ಹೆಚ್ಚು ದಿನ ಮಾನಸಿಕ ವೇದನೆ ಅನುಭವಿಸಿದರೂ ಅಂತಿಮವಾಗಿ ಮಂಜುಳಾ ಅವರಿಗೆ ತಮ್ಮ ಹಣದ ಜೊತೆ ಪರಿಹಾರವೂ ಸಿಕ್ಕಿತು.
ಒಂಬುಡ್ಸ್‌ಮನ್‌ಗೆ ಯಾವಾಗ ದೂರು ನೀಡಬೇಕು?
* ಮೊದಲು ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿ
* ಬ್ಯಾಂಕಿನಿಂದ ತೊಂದರೆಯಾದಾಗ ಮೊದಲಿಗೆ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿ
* ಸಹಾಯವಾಣಿಗೆ ದೂರು ನೀಡಿ ಪರಿಹಾರ ಸಿಗದಿದ್ದರೆ ಇ-ಮೇಲ್ ಮೂಲಕ ದೂರು ಸಲ್ಲಿಸಿ
* ಸಂಬಂಧಪಟ್ಟ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರ ಇ-ಮೇಲ್ ವಿಳಾಸಕ್ಕೆ ವಿವರವಾದ ದೂರು ಸಲ್ಲಿಸಿ ಅಥವಾ ಸಾಂಪ್ರದಾಯಿಕ ಪತ್ರದ ಮೂಲಕ ದೂರು ನೀಡಿ
* ನೀವು ನೀಡಿದ ದೂರಿಗೆ ಹಿಂಬರಹವನ್ನು ಕಡ್ಡಾಯವಾಗಿ ಪಡೆದುಕೊಳ್ಳಿ
* ಆಗಲೂ ಬ್ಯಾಂಕ್ ಸ್ಪಂದಿಸದಿದ್ದರೆ ದಾಖಲೆ ಸಮೇತ ಆರ್‌ಬಿಐಗೆ ದೂರು ಸಲ್ಲಿಸಿ
* ಆರ್‌ಬಿಐ ಒಂಬುಡ್ಸ್‌ಮನ್ ಎಂಬುದು ಬ್ಯಾಂಕ್ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಇರುವ ವ್ಯವಸ್ಥೆ
* ದೂರು ಇಲ್ಲಿ ಸಲ್ಲಿಸಿ: www.rbi.org.in/Scripts/Complaints.aspx
(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)
ದಾಖಲೆ ಏರಿಕೆ ಕಂಡ ಷೇರುಪೇಟೆ
ಜೂನ್ 30ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಜಿಗಿದಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸರ್ವಕಾಲಿಕ ಏರಿಕೆ ಕಂಡಿವೆ. 64,718 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.76ರಷ್ಟು ಹೆಚ್ಚಳ ದಾಖಲಿಸಿದೆ. 19,189 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.80ರಷ್ಟು ಜಿಗಿದಿದೆ. ವಿದೇಶಿ ಹೂಡಿಕೆದಾರರ ಖರೀದಿ ಉತ್ಸಾಹ, ವಾಯುವ್ಯ ಮುಂಗಾರಿನ ಪ್ರಗತಿ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿವೆ.
ವಲಯವಾರು ಪ್ರಗತಿ ನೋಡಿದಾಗ ಎಲ್ಲ ಕ್ಷೇತ್ರಗಳ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 4.4ರಷ್ಟು, ನಿಫ್ಟಿ ವಾಹನ ಸೂಚ್ಯಂಕ ಶೇ 4ರಷ್ಟು, ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3.5ರಷ್ಟು ಮತ್ತು ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 3ರಷ್ಟು ಹೆಚ್ಚಳ ದಾಖಲಿಸಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹20,361.75 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ದೇಶಿ ಸಾಂಸ್ಥಿಕ ಹೂಡಿಕೆದಾರರು ₹1,564.60 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ, ಅದಾನಿ ಎಂಟರ್‌ಪ್ರೈಸಸ್, ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ, ಟಾಟಾ ಮೋಟರ್ಸ್, ಇಂಟರ್ ಗ್ಲೋಬ್ ಏವಿಯೇಷನ್, ಸನ್ ಫಾರ್ಮಾ, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಇನ್ಫೊಸಿಸ್ ಉತ್ತಮ ಗಳಿಕೆ ದಾಖಲಿಸಿವೆ.
ಮುನ್ನೋಟ: ಈ ವಾರ ಚಾಲೆಟ್ ಹೊಟೇಲ್ಸ್ ಲಿ., ಪ್ರೀಮಿಯರ್ ಪಾಲಿ ಫಿಲಂ ಲಿ., ಕೆಬಿಸಿ ಗ್ಲೋಬಲ್ ಲಿ., ಜಿ.ಎಂ. ಬ್ರಿವರಿಸ್ ಲಿ., ಒರಿಸಾ ಮಿನರಲ್ ಡೆವಲಪ್ಮೆಂಟ್ ಕಂಪನಿ ಲಿ., ವಾನ್‌ಬರ್ಗ್ ಲಿ., ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶಗಳು, ಜಾಗತಿಕ ವಿದ್ಯಮಾನಗಳು ಮತ್ತು ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.