ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಉಳಿತಾಯ– ಹೂಡಿಕೆ ಮಾಡುವುದು ಪ್ರತಿ ಪೋಷಕರ ಆದ್ಯತೆಯ ವಿಚಾರ. ಆದರೆ, ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ. ಫಿಕ್ಸೆಡ್ ಡೆಪಾಸಿಟ್, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್‌ಸಿ), ಎಂಡೋಮೆಂಟ್ ಪಾಲಿಸಿ, ಮನಿ ಬ್ಯಾಕ್ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದರೆ ಹಣದುಬ್ಬರವನ್ನು ಮೀರಿ ಹೂಡಿಕೆ ಹಣ ಬೆಳೆಯುವುದಿಲ್ಲ.
ಷೇರು ಮಾರುಕಟ್ಟೆಯಲ್ಲಿ ಗಳಿಕೆಯ ಸಾಧ್ಯತೆ ಹೆಚ್ಚಿದೆಯಾದರೂ ಏರಿಳಿತದ ಅಪಾಯ ಕೂಡ ಅಷ್ಟೇ ಇರುತ್ತದೆ. ಆ ಬಗ್ಗೆ ಒಂದಷ್ಟು ತಿಳಿದವರಿಗಷ್ಟೇ ಅದು ಸರಿಹೊಂದುತ್ತದೆ. ಪರಿಸ್ಥಿತಿ ಹೀಗಿರುವಾಗ ಬಹುಪಾಲು ಜನರಿಗೆ ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಹೂಡಿಕೆ ಮಾಡಲು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ.
ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ ಏಕೆ?: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಬೆಲೆ ಏರಿಕೆ ಮೀರಿ ಗಳಿಕೆ ತಂದುಕೊಡುವ ಹೂಡಿಕೆ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಬೇಕು. ಬೆಲೆ ಏರಿಕೆ ಮಿತಿ ದಾಟಿ ದೀರ್ಘಾವಧಿಯಲ್ಲಿ ಲಾಭ ತಂದುಕೊಡುವ ಹೂಡಿಕೆಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ (ಎಂ.ಎಫ್) ಪ್ರಮುಖವಾದುದು.
ಈ ಫಂಡ್‌ನಲ್ಲಿ ಹಣ ತೊಡಗಿಸಿದಾಗ ಷೇರು ಮಾರುಕಟ್ಟೆಯಲ್ಲಿರುವ ಹತ್ತಾರು ಉತ್ತಮ ಕಂಪನಿಗಳ ಮೇಲೆ ನಿಮ್ಮ ಹೂಡಿಕೆ ಮೊತ್ತ ಹಂಚಿಕೆಯಾಗುತ್ತದೆ. ಹಲವು ಕಂಪನಿಗಳ ಮೇಲೆ ಹೂಡಿಕೆ ಮೊತ್ತ ಹೋಗುವುದರಿಂದ ಹೂಡಿಕೆ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಮಾರುಕಟ್ಟೆ ಏರಿಳಿತದ ಅಪಾಯವನ್ನೂ ನಿಭಾಯಿಸಬಹುದಾಗಿದೆ.
ದೀರ್ಘಾವಧಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಹಣ ಹಾಕಿದಾಗ ವಾರ್ಷಿಕ ಸರಾಸರಿ ಶೇ 12ರಷ್ಟು ಗಳಿಕೆ ನಿರೀಕ್ಷಿಸಬಹುದಾಗಿದೆ. ಈ ಫಂಡ್‌ಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ನಿಭಾಯಿಸುವುದರಿಂದ ಮಾರುಕಟ್ಟೆ ಏರಿಳಿತದ ಬಗ್ಗೆ ಹೂಡಿಕೆದಾರರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಉತ್ತಮ ಫಂಡ್ ಆಯ್ಕೆ ಮಾಡಿಕೊಂಡು ಶಿಸ್ತುಬದ್ಧವಾಗಿ ಹೂಡಿಕೆ ಮಾಡುತ್ತಾ ಸಾಗಿದರೆ ಕ್ರಮೇಣ ಅದು ದೊಡ್ಡ ಮೊತ್ತವಾಗಿ ಬೆಳೆಯುತ್ತದೆ.
ಹೂಡಿಕೆ ಮಾಡುವುದು ಹೇಗೆ?: ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ಈಕ್ವಿಟಿ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವಾಗ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮತ್ತು ಲಂಸಮ್ ಮಾದರಿಯಲ್ಲಿ ಹೂಡಿಕೆ ಸಾಧ್ಯವಿದೆ. ಎಸ್ಐಪಿ ಅಂದರೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿಗದಿತ ದಿನಾಂಕದಂದು ಹೂಡಿಕೆ ಮಾಡುತ್ತಾ ಸಾಗುವುದು. ಉದಾಹರಣೆಗೆ ಪ್ರತಿ ತಿಂಗಳ 5ರಂದು ₹10 ಸಾವಿರ ಹೂಡಿಕೆ ಮಾಡುವುದಾಗಿ ಎಸ್ಐಪಿ ಮಾಡಿದರೆ ಪ್ರತಿ ತಿಂಗಳು ಅಷ್ಟೇ ಮೊತ್ತ ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಮ್ಯೂಚುವಲ್ ಫಂಡ್‌ಗೆ ಜಮಾವಣೆಯಾಗುತ್ತದೆ.
ನನ್ನ ಬಳಿ ₹50 ಸಾವಿರ, ₹1 ಲಕ್ಷದಂತಹ ದೊಡ್ಡ ಮೊತ್ತವಿದೆ. ಅದನ್ನು ಮಕ್ಕಳ ಶಿಕ್ಷಣಕ್ಕೆ ತೊಡಗಿಸಬೇಕು ಎಂದರೆ ಲಂಸಮ್ ಹೂಡಿಕೆ ಮಾದರಿ ಅನುಸರಿಸಬಹುದು. ಆದರೆ, ಶಿಸ್ತುಬದ್ಧವಾಗಿ ಹೂಡಿಕೆ ಮಾಡಲು ಎಸ್ಐಪಿ ವಿಧಾನ ಒಳ್ಳೆಯ ಆಯ್ಕೆ. ಉದಾಹರಣೆಗೆ 10 ವರ್ಷಗಳ ಕಾಲ ಪ್ರತಿ ತಿಂಗಳು ₹15 ಸಾವಿರ ಹೂಡಿಕೆ ಮಾಡುತ್ತಾ ಸಾಗಿದರೆ ವಾರ್ಷಿಕ ಸರಾಸರಿ ಶೇ 12ರ ಗಳಿಕೆ ಲೆಕ್ಕಾಚಾರದಲ್ಲಿ ಅದು ₹34.85 ಲಕ್ಷವಾಗುತ್ತದೆ.
Cut-off box - ಮತ್ತೆ ಕುಸಿದ ಷೇರು ಸೂಚ್ಯಂಕಗಳು ಷೇರು ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. 77580 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.47ರಷ್ಟು ತಗ್ಗಿದೆ. 23532 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.75ರಷ್ಟು ಇಳಿಕೆಯಾಗಿದೆ. ಕಂಪನಿಗಳ ಎರಡನೇ ತ್ರೈಮಾಸಿಕ ವರದಿಗಳಲ್ಲಿ ಆಶಾದಾಯಕ ಫಲಿತಾಂಶ ಬಾರದಿರುವುದು ಡಾಲರ್ ಸೂಚ್ಯಂಕದತ್ತ ಹೂಡಿಕೆದಾರರು ಮುಖ ಮಾಡಿರುವುದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿರುವುದು ದೇಶೀಯ ರಿಟೇಲ್ ಹೂಡಿಕೆದಾರರು ಹೂಡಿಕೆಗೆ ಹಿಂಜರಿಯುತ್ತಿರುವುದು ಸೇರಿ ಹಲವು ಅಂಶಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಾರದ ಲೆಕ್ಕಾಚಾರ ನೋಡಿದಾಗ ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 0.81ರಷ್ಟು ಗಳಿಸಿಕೊಂಡಿದೆ. ಇನ್ನುಳಿದ ಎಲ್ಲ ಪ್ರಮುಖ ಸೂಚ್ಯಂಕಗಳು ಕುಸಿತ ದಾಖಲಿಸಿವೆ. ನಿಫ್ಟಿ ಲೋಹ ಸೂಚ್ಯಂಕ ಶೇ 5.16 ಸರ್ಕಾರ ಸ್ವಾಮ್ಯದ ಬ್ಯಾಂಕ್ ಶೇ 5.15 ಎಫ್‌ಎಂಸಿಜಿ ಶೇ 4.42 ಆಟೊ ವಲಯ ಶೇ 3.74 ಅನಿಲ ಮತ್ತು ತೈಲ ಶೇ 3.72 ಎನರ್ಜಿ ಶೇ 3.53 ಫಾರ್ಮಾ ಶೇ 3.51 ಬ್ಯಾಂಕ್ ಶೇ 2.68 ಫೈನಾನ್ಸ್ ಶೇ 2.66 ರಿಯಲ್ ಎಸ್ಟೇಟ್ ಶೇ 2.14 ಮತ್ತು ಮಾಧ್ಯಮ ಸೂಚ್ಯಂಕ ಶೇ 1.85ರಷ್ಟು ಕುಸಿದಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 13.61 ಏಷ್ಯನ್ ಪೇಂಟ್ಸ್ ಶೇ 12.67 ಟಾಟಾ ಸ್ಟೀಲ್ ಶೇ 8.55 ಎನ್‌ಟಿಪಿಸಿ ಶೇ 7.8 ಶ್ರೀರಾಮ್ ಫೈನಾನ್ಸ್ ಶೇ 7.77 ಅಪೋಲೊ ಹಾಸ್ಪಿಟಲ್ಸ್ ಶೇ 7.43 ಅದಾನಿ ಪೋರ್ಟ್ಸ್ ಶೇ 6.52 ಎಸ್‌ಬಿಐ ಶೇ 6.42 ಭಾರತ್ ಎಲೆಕ್ಟ್ರಾನಿಕ್ಸ್ ಶೇ 6.38 ಕೋಲ್ ಇಂಡಿಯಾ ಶೇ 5.91 ಟಾಟಾ ಮೋಟರ್ಸ್ ಶೇ 5.56 ಮತ್ತು ಟಾಟಾ ಕನ್ಸ್ಯೂಮರ್ ಶೇ 5.53ರಷ್ಟು ಇಳಿದಿವೆ. ಇನ್ಫೊಸಿಸ್ ಶೇ 3.53 ಟೈಟನ್ ಶೇ 2.26 ಟೆಕ್ ಮಹೀಂದ್ರ ಶೇ 2 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 1.55 ಐಷರ್ ಮೋಟರ್ಸ್ ಶೇ 0.53 ಮತ್ತು ವಿಪ್ರೊ ಶೇ 0.49ರಷ್ಟು ಹೆಚ್ಚಳವಾಗಿವೆ. ಮುನ್ನೋಟ: ವಾರಿ ಎನರ್ಜೀಸ್ ಗೋದಾವರಿ ಬಯೊ ರಿಫೈನರಿಸ್ ಬ್ರಹ್ಮಪುತ್ರ ಇನ್ಫ್ರಾಸ್ಟ್ರಕ್ಚರ್ ಒರಿಸ್ಸಾ ಮಿನರಲ್ಸ್ ಡೆವಲಪ್‌ಮೆಂಟ್ ಕಂಪನಿ ಸಹಸ್ರ ಎಲೆಕ್ಟ್ರಾನಿಕ್ ಸಲ್ಯೂಷನ್ಸ್ ಸೇರಿ ಕೆಲ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಮತ್ತು ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.