ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೆಚ್ಚುವರಿ ಹಣಕಾಸು ಒದಗಿಸಲು ಕೇಂದ್ರ ಸರ್ಕಾರವು ‘ಭಾರತ್ ಬಾಂಡ್ ಇಟಿಎಫ್’ ಗೆ ಚಾಲನೆ ನೀಡಿದೆ. ಇದು ದೇಶದ ಮೊದಲ ಕಾರ್ಪೋರೇಟ್ ಬಾಂಡ್ ಇಟಿಎಫ್ (ಷೇರು ವಿನಿಮಯ- ವಹಿವಾಟು ನಿಧಿ) ಆಗಿದ್ದು, ಸಣ್ಣ ಹೂಡಿಕೆದಾರರು ಸಹ ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
ಡಿಸೆಂಬರ್ 20, 2019ರ ವರೆಗೆ ಬಾಂಡ್‌ಗಳ ಖರೀದಿಗೆ ಅವಕಾಶವಿದೆ. ಈ ಹೊತ್ತಿನಲ್ಲಿ ಭಾರತ್ ಬಾಂಡ್ ಇಟಿಎಫ್ ನ ಒಳನೋಟ ಇಲ್ಲಿದೆ.
ಏನಿದು ಭಾರತ್ ಬಾಂಡ್ ಇಟಿಎಫ್?: ಭಾರತ್ ಬಾಂಡ್ ಇಟಿಎಫ್, ಸರ್ಕಾರಿ ವಲಯದ ಉದ್ಯಮಗಳು (ಸಿಪಿಎಸ್‌ಇ) ನೀಡುವ ಬಾಂಡ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತದೆ. ನಬಾರ್ಡ್, ಭಾರತೀಯ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪವರ್ ಗ್ರಿಡ್, ಪವರ್ ಫೈನಾನ್ಸ್ ಕಾರ್ಪೊರೇಷನ್ ಸೇರಿ ಇನ್ನಿತರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಹೂಡಿಕೆ ಇರುತ್ತದೆ.
ಭಾರತ್ ಬಾಂಡ್ ಇಟಿಎಫ್‌ನ ಪ್ರತಿ ಯುನಿಟ್ ಮೌಲ್ಯವನ್ನು ₹ 1,000 ಕ್ಕೆ ನಿಗದಿ ಮಾಡಲಾಗಿದೆ. ಸದ್ಯ ಈ ಬಾಂಡ್ ಅಲ್ಪಾವಧಿ (ಮೂರು ವರ್ಷ) ಮತ್ತು ದೀರ್ಘಾವಧಿ (10 ವರ್ಷ) ಸರಣಿಗಳನ್ನು ಹೊಂದಿದೆ. ಅಲ್ಪಾವಧಿ ಸರಣಿಯು 2023 ರ ಏಪ್ರಿಲ್ ನಲ್ಲಿ ಮೆಚ್ಯುರಿಟಿ (ಪರಿಪಕ್ವ ದಿನ) ಹೊಂದಲಿದೆ. 2030ರ ಏಪ್ರಿಲ್‌ನಲ್ಲಿ ದೀರ್ಘಾವಧಿ ಸರಣಿಯು ಮೆಚ್ಯೂರಿಟಿ ಹೊಂದಲಿದೆ. ಈ ಎರಡೂ ಫಂಡ್‌ಗಳು ‘ನಿಫ್ಟಿ’ ಭಾರತ್ ಬಾಂಡ್ ಸೂಚ್ಯಂಕ ಅನುಸರಿಸಲಿವೆ.
ಭಾರತ್ ಬಾಂಡ್ ಇಟಿಎಫ್ ಎಷ್ಟು ಸುರಕ್ಷಿತ?: ಎಎಎ ಶ್ರೇಣಿಯ ಕ್ರೆಡಿಟ್ ರೇಟಿಂಗ್ ಹೊಂದಿರುವ ಬಾಂಡ್‌ಗಳಲ್ಲಿ ಇಟಿಎಫ್ ಹೂಡಿಕೆ ಇರುವುದರಿಂದ ಇಲ್ಲಿ ನಷ್ಟದ ಸಾಧ್ಯತೆ ಕನಿಷ್ಠ ಮಟ್ಟದಲ್ಲಿ ಇರಲಿದೆ. ಇಷ್ಟಾದರೂ ಇಟಿಎಫ್‌ನಲ್ಲಿನ ನಿಮ್ಮ ಹೂಡಿಕೆ ಮಾರುಕಟ್ಟೆ ಏರಿಳಿತಗಳಿಗೆ ಒಳಪಟ್ಟಿರುತ್ತದೆ. ಅಲ್ಪಾವಧಿ ಇಟಿಎಫ್ ಬಾಂಡ್ ಶೇ 6.69 ಮತ್ತು ದೀರ್ಘಾವಧಿ ಇಟಿಎಫ್ ಬಾಂಡ್‌ನಿಂದ ಶೇ 7.58 ರಷ್ಟು ಲಾಭಾಂಶ
ನಿರೀಕ್ಷಿಸಬಹುದು. ಆದರೆ ಈ ಲಾಭಾಂಶಕ್ಕೆ ಖಾತರಿ ಇಲ್ಲ.
ಭಾರತ್ ಇಟಿಎಫ್ ಗುಣಲಕ್ಷಣಗಳು: ಭಾರತದ ನಾಗರಿಕರು, ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇದರಲ್ಲಿ ಹೂಡಿಕೆ ಮಾಡಬಹುದು.
ಈಗಾಗಲೇ ಡಿಮ್ಯಾಟ್ ಖಾತೆ ಹೊಂದಿದ್ದರೆ, ನಿಮ್ಮ ಬ್ರೋಕಿಂಗ್ ಖಾತೆಯ ಮೂಲಕ ಅರ್ಜಿ ಸಲ್ಲಿಸಬಹುದು.
ನಿಮ್ಮ ಷೇರುಗಳನ್ನು ಸ್ಟಾಕ್ ಬ್ರೋಕರ್ ಮೂಲಕ ಖರೀದಿಸಬಹುದು / ಮಾರಾಟ ಮಾಡಬಹುದು. ಇದಕ್ಕೆ ಯಾವುದೇ ಲಾಕ್ ಇನ್ ಪೀರಿಯಡ್ ಇಲ್ಲ. ಫಂಡ್ ನಿರ್ವಹಣೆ ವೆಚ್ಚ ಭಾರಿ ಕಡಿಮೆ ಇದ್ದು ವಾರ್ಷಿಕ ಶೇ 0.0005 ರಷ್ಟಿದೆ. (₹ 2 ಲಕ್ಷ ಹೂಡಿಕೆಗೆ ₹ 1 ನಿರ್ವಹಣೆ ವೆಚ್ಚ)
ಇಟಿಎಫ್ ಫಂಡ್‌ನಿಂದ ಯಾರಿಗೆ ಅನುಕೂಲ?: ಭಾರತ್ ಬಾಂಡ್ ಇಟಿಎಫ್ ಹೂಡಿಕೆಯಿಂದ ಕೋಟ್ಯಧಿಪತಿಯಾಗುವ ಕನಸು ಖಂಡಿತವಾಗಿಯೂ ನನಸಾಗುವುದಿಲ್ಲ. ಷೇರು ಮಾರುಕಟ್ಟೆ ನೀಡುವ ಗರಿಷ್ಠ ಲಾಭಾಂಶವನ್ನೂ ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ಹೂಡಿಕೆಯಲ್ಲಿ ವೈವಿಧ್ಯತೆಯ ಜತೆಗೆ ಸುರಕ್ಷತೆ ಅಗತ್ಯ ಎನ್ನುವವರಿಗೆ ಇಟಿಎಫ್ ಒಳ್ಳೆಯ ಆಯ್ಕೆ.
ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮತ್ತು ಡೆಟ್ ಮ್ಯೂಚುವಲ್ ಫಂಡ್‌ಗಳಿಂದ ನಿರ್ದಿಷ್ಟ ಆದಾಯ ಪಡೆಯುತ್ತಿರುವವರಿಗೆ ಭಾರತ್ ಬಾಂಡ್ ಒಂದು ಪರ್ಯಾಯ. ಭಾರತ್ ಬಾಂಡ್‌ನಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹೂಡಿಕೆ ಮಾಡಿದರೆ ಹೆಚ್ಚಿನ ತೆರಿಗೆ ಅನುಕೂಲ ಸಿಗುತ್ತದೆ.
ಜಾಗತಿಕ ಬೆಳವಣಿಗೆಗೆ ಜಿಗಿದ ಷೇರುಪೇಟೆ
ಜಾಗತಿಕ ವಲಯದಲ್ಲಿ ಸಕಾರಾತ್ಮಕ ವಿದ್ಯಮಾನಗಳು ಕಂಡುಬಂದ ಹಿನ್ನೆಲೆಯಲ್ಲಿ ಷೇರುಪೇಟೆ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ತಲಾ ಶೇ 1.4 ರಷ್ಟು ಏರಿಕೆ ಕಂಡಿವೆ. ನಿಫ್ಟಿ 12,087 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದರೆ, ಸೆನ್ಸೆಕ್ಸ್ 41,010 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಅಮೆರಿಕ- ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಕುರಿತಂತೆ ಸಕಾರಾತ್ಮಕ ಬೆಳವಣಿಗೆ, ಅಮೆರಿಕ ಮುಕ್ತ ಮಾರುಕಟ್ಟೆ ಸಮಿತಿಯು ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇಟ್ಟಿರುವುದು ಸೇರಿ ಇನ್ನೂ ಕೆಲ ವಿದ್ಯಮಾನಗಳಿಂದ ಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ.
ವಲಯವಾರು ಪ್ರಗತಿಯಲ್ಲಿಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.5 ರಷ್ಟು ಜಿಗಿದಿದೆ. ಲೋಹ ಮತ್ತು ವಾಹನ ತಯಾರಿಕಾ ವಲಯ ಶೇ 3 ರಷ್ಟು ಏರಿಕೆಯಾಗಿವೆ. ಬ್ಯಾಂಕ್ ಶೇ 2.2, ಹಣಕಾಸು ಸೇವೆ ಶೇ 2.5, ರಿಯಲ್ ಎಸ್ಟೇಟ್ ಶೇ 1.5 ರಷ್ಟು ಸುಧಾರಿಸಿವೆ. ಮಾಧ್ಯಮ ಮತ್ತು ಐಟಿ ವಲಯ ಕ್ರಮವಾಗಿ ಶೇ 1 ಮತ್ತು ಶೇ 0.6 ರಷ್ಟು ತಗ್ಗಿವೆ.
ಗಳಿಕೆ: ನಿಫ್ಟಿಯಲ್ಲಿ ಟಾಟಾ ಮೋಟರ್ಸ್ , ಟಾಟಾ ಸ್ಟೀಲ್, ಹಿಂಡಾಲ್ಕೊ, ಐಷರ್ ಮೋಟರ್ಸ್, ವೇದಾಂತ, ಮಾರುತಿ ಸುಜುಕಿ ಕಂಪನಿ ಷೇರುಗಳು ಶೇ 5 ರಿಂದ ಶೇ 9.5 ರಷ್ಟು ಏರಿಕೆಯಾಗಿವೆ. ಮಧ್ಯಮ ಶ್ರೇಣಿಯಲ್ಲಿ ಐಡಿಬಿಐ ಶೇ 11, ಡಿಷ್ ಟಿವಿ ಶೇ 7 ರಷ್ಟು ಜಿಗಿದಿವೆ.
ಕೆನರಾ ಬ್ಯಾಂಕ್, ಮಣಪ್ಪುರಂ ಫೈನಾನ್ಸ್, ಇನ್ಫೊ ಎಡ್ಜ್, ಸ್ಪಾರ್ಕ್, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರುಗಳು ಮಧ್ಯಮ ಶ್ರೇಣಿಯಲ್ಲಿ ಶೇ 7 ರಿಂದ ಶೇ 9.5 ರಷ್ಟು ಗಳಿಸಿಕೊಂಡಿವೆ.
ಇಳಿಕೆ: ನಿಫ್ಟಿಯಲ್ಲಿ ಯೆಸ್ ಬ್ಯಾಂಕ್, ಏರ್‌ಟೆಲ್, ಎಚ್‌ಸಿಎಲ್ ಟೆಕ್, ಝೀ, ಟಿಸಿಎಸ್ ಶೇ 2.4 ರಿಂದ ಶೇ 17 ರಷ್ಟು ಕುಸಿದಿವೆ. ಮಧ್ಯಮ ಶ್ರೇಣಿಯಲ್ಲಿ ದೀವಾನ್ ಹೌಸಿಂಗ್, ರಿಲಯನ್ಸ್ ಕ್ಯಾಪಿಟಲ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್, ಅಪೋಲೊ ಹಾಸ್ಪಿಟಲ್ಸ್ , ರಿಲಯನ್ಸ್ ಇನ್ಫ್ರಾ, ಒಬೆರಾಯ್ ರಿಯಾಲ್ಟಿ ಶೇ 6.5 ರಿಂದ ಶೇ 14 ರ ವರೆಗೆ ಕುಸಿದಿವೆ.
ಪ್ರಮುಖ ಬೆಳವಣಿಗೆಗಳು: ಮ್ಯೂಚುವಲ್ ಫಂಡ್ ಅಸೋಸಿಯೇಷನ್ ನೀಡಿರುವ ದತ್ತಾಂಶದಂತೆ ನವೆಂಬರ್‌ನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆದಾರರ ಸಂಖ್ಯೆಯಲ್ಲಿ ಶೇ 78 ರಷ್ಟು ಕಡಿಮೆಯಾಗಿದೆ.
ಗ್ರಾಹಕ ಬೆಲೆ ಸೂಚ್ಯಂಕ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಉತ್ಪಾದನೆ ಸತತ ಎರಡನೇ ತಿಂಗಳು ಕುಸಿದಿದೆ.
ಐಪಿಒ: ಪ್ರಿನ್ಸ್ ಪೈಪ್ಸ್ ಕಂಪನಿಯು ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ₹ 500 ಕೋಟಿ ಸಂಗ್ರಹಿಸುತ್ತಿದೆ. ಡಿ. 18 ರಂದು ಐಪಿಒ ಆರಂಭಗೊಳ್ಳಲಿದೆ, ಬೆಲೆಪಟ್ಟಿಯು ಪ್ರತಿ ಷೇರಿಗೆ ₹ 177- 178 ಎಂದು ನಿಗದಿ ಮಾಡಲಾಗಿದೆ.
ಮುನ್ನೋಟ: ಸಗಟು ಮಾರಾಟ ದರ ಸೂಚ್ಯಂಕದ ದತ್ತಾಂಶ, ಕೈಗಾರಿಕೋದ್ಯಮಿಗಳ ಜತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಪೂರ್ವ ಚರ್ಚೆ, ಈ ವಾರ ಹೊರ ಬೀಳಲಿರುವ ಆರ್‌ಬಿಐ ಹಣಕಾಸು ಸಮಿತಿಯ ಪ್ರಮುಖ ಸಂಗತಿಗಳು, ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅಧಿಕಾರ ಸ್ವೀಕಾರ ಸೇರಿ ಹಲವು ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ.
(ಲೇಖಕ, ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.