ADVERTISEMENT

ಬಂಡವಾಳ ಮಾರುಕಟ್ಟೆ | ಎಂ.ಎಫ್‌: ಡಿವಿಡೆಂಡ್‌ ಲೆಕ್ಕಾಚಾರ ಹೇಗೆ?

ಕಾವ್ಯ ಡಿ.
Published 22 ಸೆಪ್ಟೆಂಬರ್ 2024, 21:11 IST
Last Updated 22 ಸೆಪ್ಟೆಂಬರ್ 2024, 21:11 IST
<div class="paragraphs"><p>Mutual Funds</p></div>

Mutual Funds

   

ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ 20 ಮಾದರಿಯ ಪ್ರಮುಖ ಫಂಡ್‌ಗಳಿವೆ. ಈ ಪೈಕಿ ಈಗ ಡಿವಿಡೆಂಡ್ ಯೀಲ್ಡ್‌ ಮ್ಯೂಚುವಲ್ ಫಂಡ್‌ಗಳು ಹೆಚ್ಚು ಸುದ್ದಿಯಲ್ಲಿವೆ. ಡಿವಿಡೆಂಡ್ ಯೀಲ್ಡ್ ಫಂಡ್‌ಗಳು ಕಳೆದ ಐದು ವರ್ಷದ ಅವಧಿಯಲ್ಲಿ ವಾರ್ಷಿಕ ಸರಾಸರಿ ಶೇ 25ರಷ್ಟು ಗಳಿಕೆ ತಂದುಕೊಟ್ಟಿದ್ದರೆ, ಮೂರು ವರ್ಷದ ಲೆಕ್ಕಾಚಾರದಲ್ಲಿ ಶೇ 21.97ರಷ್ಟು ಗಳಿಕೆ ನೀಡಿವೆ. 

ಇನ್ನು ಒಂದು ವರ್ಷದ ಗಳಿಕೆ ನೋಡಿದಾಗ ಡಿವಿಡೆಂಡ್ ಯೀಲ್ಡ್ ಫಂಡ್‌ಗಳು ಶೇ 42.38ರಷ್ಟು ಲಾಭ ಕೊಟ್ಟಿವೆ. ಕಳೆದ ಐದು, ಮೂರು ಮತ್ತು ಒಂದು ವರ್ಷದ ಲೆಕ್ಕಾಚಾರದಲ್ಲಿ ನೋಡಿದಾಗ ಡಿವಿಡೆಂಡ್ ಯೀಲ್ಡ್ ಫಂಡ್‌ಗಳು ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್‌ಗಳನ್ನು ಹೊರತುಪಡಿಸಿ ಇನ್ನುಳಿದ ಪ್ರಮುಖ ಮ್ಯೂಚುವಲ್ ಫಂಡ್ ಮಾದರಿಗಳನ್ನು ಹಿಂದಿಕ್ಕಿವೆ.

ADVERTISEMENT

ವ್ಯಾಲ್ಯೂ ಓರಿಯಂಟೆಂಡ್, ಮಲ್ಟಿಕ್ಯಾಪ್, ಫ್ಲೆಕ್ಸಿ ಕ್ಯಾಪ್, ಲಾರ್ಜ್
ಆ್ಯಂಡ್‌ ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್, ಇಎಲ್ಎಸ್ಎಸ್ ಮಾದರಿಯ ಫಂಡ್‌ಗಳು ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳಿಗಿಂತ ಹೂಡಿಕೆದಾರರಿಗೆ ಕಡಿಮೆ ಲಾಭ ಒದಗಿಸಿವೆ. ಹಾಗಾದರೆ, ಈ ಡಿವಿಡೆಂಡ್ ಯೀಲ್ಡ್ ಫಂಡ್‌ಗಳೆಂದರೆ ಏನು? ಈ ಫಂಡ್‌ಗಳಲ್ಲಿ ಹೂಡಿಕೆದಾರರಿಗೆ ಡಿವಿಡೆಂಟ್ (ಲಾಭಾಂಶ) ಹಂಚಿಕೆಯಾಗುತ್ತಾ? ಹೂಡಿಕೆ ಮಾಡುವುದು ಹೇಗೆ? ಬನ್ನಿ ತಿಳಿಯೋಣ.

ಡಿವಿಡೆಂಡ್ ಯೀಲ್ಡ್ ಫಂಡ್ಸ್ ಅಂದರೆ ಏನು?: ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರ ಶೇ 65ರಷ್ಟು ಮೊತ್ತವನ್ನು ಕಡ್ಡಾಯವಾಗಿ ಅತಿಹೆಚ್ಚು ಡಿವಿಡೆಂಡ್ ಕೊಡುವ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕು. ಸದ್ಯ ಈ ಡಿವಿಡೆಂಡ್ ಯೀಲ್ಡ್ ಫಂಡ್ ವರ್ಗದಲ್ಲಿ ಎಚ್‌ಡಿಎಫ್‌ಸಿ, ಐಸಿಐಸಿಐ ಪ್ರೂಡೆನ್ಶಿಯಲ್, ಎಸ್ಐಬಿ, ಯುಟಿಐ, ಎಲ್‌ಐಸಿ, ಆದಿತ್ಯ ಬಿರ್ಲಾ ಸನ್ ಲೈಫ್, ಬರೋಡಾ ಬಿಎನ್‌ಬಿ ಪರಿಬಾಸ್, ಸುಂದರಂ ಮತ್ತು ಟೆಂಪಲ್ ಟನ್ ಇಂಡಿಯಾ ಈಕ್ವಿಟಿಗೆ ಸೇರಿದ ಒಟ್ಟು 10 ಫಂಡ್‌ಗಳಿವೆ.

ಈ 10 ಫಂಡ್‌ಗಳು ₹31 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮೊತ್ತವನ್ನು ನಿರ್ವಹಣೆ ಮಾಡುತ್ತಿವೆ. ಎಸ್ಐಬಿ ಡಿವಿಡೆಂಡ್ ಯೀಲ್ಡ್ ಫಂಡ್ ಅತಿದೊಡ್ಡ ಫಂಡ್ ಆಗಿದ್ದು ಹೂಡಿಕೆದಾರರ ಸುಮಾರು ₹9,500 ಕೋಟಿಯನ್ನು ನಿರ್ವಹಿಸುತ್ತಿದೆ. ಈಗ ಡಿವಿಡೆಂಡ್ ಅಂದರೆ ಏನು ಎನ್ನುವ ವಿಚಾರಕ್ಕೆ ಬರೋಣ.

ಷೇರು ಹೂಡಿಕೆ ಮಾಡಿದಾಗ ಹೂಡಿಕೆದಾರರಿಗೆ ಎರಡು ರೀತಿಯ ಗಳಿಕೆ ಸಿಗುತ್ತದೆ. ಒಂದನೆಯದ್ದು ಷೇರಿನ ಬೆಲೆ ಏರಿಕೆಯಾಗುತ್ತಾ ಸಾಗಿದಂತೆ ಅದರಿಂದ ಸಿಗುವ ಗಳಿಕೆ. ಮತ್ತೊಂದು ಡಿವಿಡೆಂಡ್. ಕಂಪನಿ ತಾನು ಗಳಿಸಿದ ಲಾಭದಲ್ಲಿ ಒಂದಷ್ಟು ಪಾಲನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡುತ್ತದೆ. ಇದನ್ನು ಡಿವಿಡೆಂಡ್ ಎನ್ನಲಾಗುತ್ತದೆ.

ಕೆಲ ಕಂಪನಿಗಳು ನಿಯಮಿತವಾಗಿ ಡಿವಿಡೆಂಡ್ ಕೊಡುತ್ತಾ ಸಾಗುತ್ತವೆ. ಯಾವ ಕಂಪನಿ ಹೆಚ್ಚು ಡಿವಿಡೆಂಡ್ ಕೊಡುತ್ತದೆ ಎನ್ನುವುದನ್ನು ತಿಳಿಯಲು ನಿರ್ದಿಷ್ಟ ಷೇರಿನ ಡಿವಿಡೆಂಡ್ ಯೀಲ್ಡ್ ಅನುಪಾತ ನೋಡಬೇಕಾಗುತ್ತದೆ. ಕಂಪನಿಯೊಂದು ಷೇರುದಾರರಿಗೆ ಪಾವತಿಸುವ ಡಿವಿಡೆಂಡ್ ಜೊತೆಗೆ ನಿರ್ದಿಷ್ಟ ಷೇರಿನ ಬೆಲೆಯನ್ನು ಭಾಗಿಸಿ ನೂರರೊಂದಿಗೆ ಗುಣಿಸಿದಾಗ ಡಿವಿಡೆಂಡ್ ಯೀಲ್ಡ್ ಎಷ್ಟು ಎನ್ನುವುದು ತಿಳಿಯುತ್ತದೆ.

ಈ ಸೂತ್ರ ಬಳಸಿಕೊಂಡು (ಕಂಪನಿ ಪಾವತಿಸಿದ ಡಿವಿಡೆಂಡ್ ಮೊತ್ತ/ ಷೇರಿನ ಬೆಲೆ x 100= ಡಿವಿಡೆಂಡ್ ಯೀಲ್ಡ್ ರೇಷಿಯೊ) ಡಿವಿಡೆಂಡ್ ಯೀಲ್ಡ್ ಲೆಕ್ಕಾಚಾರ ಮಾಡಬಹುದು. ನಿರ್ದಿಷ್ಟ ಕಂಪನಿಯ ಷೇರು ಹೆಚ್ಚು ಡಿವಿಡೆಂಡ್ ಕೊಡುತ್ತಿದೆಯೋ ಇಲ್ಲವೋ ಎನ್ನುವುದನ್ನು ತಿಳಿಯಲು ಅದೇ ವಲಯದ ಬೇರೆ ಕಂಪನಿಗಳ ಜೊತೆ ತಾಳೆ ಹಾಕಿ ನೋಡಬೇಕಾಗುತ್ತದೆ. ಇಷ್ಟೆಲ್ಲಾ ಮಾಡಲು ಕಷ್ಟವಾಗುತ್ತದೆ ಎನ್ನುವವರು ಹೆಚ್ಚು ಡಿವಿಡೆಂಡ್ ಕೊಡುವ ಷೇರುಗಳ ಮೇಲೆ ಹೂಡಿಕೆ ಮಾಡುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳನ್ನು ಹೂಡಿಕೆಗೆ ಪರಿಗಣಿಸಬಹುದು.

ಏಕೆಂದರೆ ಕಡ್ಡಾಯವಾಗಿ ಹೂಡಿಕೆದಾರರ ಶೇ 65ರಷ್ಟು ಮೊತ್ತವನ್ನು ಡಿವಿಡೆಂಡ್ ಯೀಲ್ಡ್ ಫಂಡ್‌ಗಳು ಹೆಚ್ಚು ಡಿವಿಡೆಂಡ್ ಕೊಡುವ ಷೇರುಗಳ ಮೇಲೆ ಹಾಕಬೇಕಾಗುತ್ತದೆ. ಆದರೆ, ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ತಮ್ಮ ಹೂಡಿಕೆದಾರರಿಗೆ ಡಿವಿಡೆಂಡ್‌ನಿಂದ ಬಂದ ಲಾಭ ಹಂಚಿಕೆ ಮಾಡುತ್ತವೆಯೇ? ಬನ್ನಿ ಮುಂದೆ ತಿಳಿಯೋಣ.

ಡಿವಿಡೆಂಡ್ ಅನ್ನು ಹೂಡಿಕೆದಾರರಿಗೆ ಹಂಚುತ್ತವೆಯೇ?: ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ತಾವು ಹೂಡಿಕೆ ಮಾಡಿರುವ ವಿವಿಧ ಷೇರುಗಳಿಂದ ಡಿವಿಡೆಂಡ್ (ಲಾಭಾಂಶ) ಪಡೆದುಕೊಂಡಾಗ ಆ ಹಣವನ್ನು ನೇರವಾಗಿ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ವರ್ಗಾಯಿಸುವುದಿಲ್ಲ. ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ಅದನ್ನು ನಗದಿನ ರೂಪದಲ್ಲಿ ಅಥವಾ ಕಡಿಮೆ ರಿಸ್ಕ್ ಇರುವ ಡೆಟ್ ಹೂಡಿಕೆಗಳಲ್ಲಿ ಇರಿಸುತ್ತವೆ. ಆದರೆ, ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ.

ಡಿವಿಡೆಂಡ್ ಯೀಲ್ಡ್ ಫಂಡ್‌ನ ಮ್ಯಾನೇಜರ್ ಹೂಡಿಕೆಗೆ ಒಳ್ಳೆಯ ಅವಕಾಶಗಳನ್ನು ಕಂಡಾಗ ನಗದಿನ ರೂಪದಲ್ಲಿರುವ ಡಿವಿಡೆಂಡ್ ಹಣವನ್ನು ಮತ್ತೆ ಉತ್ತಮ ಗಳಿಕೆ ಕೊಡುವ ಷೇರುಗಳ ಮೇಲೆ ಹೂಡಿಕೆ ಮಾಡುತ್ತಾರೆ. ಹೀಗೆ ಮಾಡಿದಾಗ ಹೂಡಿಕೆದಾರರ ದುಡ್ಡು ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. 

ಅಂದರೆ, ಡಿವಿಡೆಂಡ್ ಮೊತ್ತವನ್ನು ಮತ್ತೆ ಹೂಡಿಕೆ ಮಾಡುವುದರಿಂದ ಇಲ್ಲಿ ಡಿವಿಡೆಂಡ್ ಯೀಲ್ಡ್ ಫಂಡ್‌ನಲ್ಲಿ ಹೂಡಿಕೆ ಮಾಡಿದವರಿಗೆ ಪರೋಕ್ಷವಾಗಿ ಲಾಭವಾಗುತ್ತದೆ. ಷೇರು ಹೂಡಿಕೆ ಮಾಡಿದಾಗ ಡಿವಿಡೆಂಡ್‌ನ ಗಳಿಕೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವ ರೀತಿ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಡಿವಿಡೆಂಡ್ ಗಳಿಕೆ ನೇರವಾಗಿ ಹೂಡಿಕೆದಾರನಿಗೆ ಲಭಿಸುವುದಿಲ್ಲ. ಆದರೆ, ಡಿವಿಡೆಂಡ್ ದುಡ್ಡಿನ ಮರು ಹೂಡಿಕೆಯಿಂದ ಇಲ್ಲಿ ಹೂಡಿಕೆದಾರನಿಗೆ ಲಾಭ ದಕ್ಕುತ್ತದೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ದಾಖಲೆ ಗಳಿಕೆ ಕಂಡ ಸೂಚ್ಯಂಕಗಳು

ಸತತ ಎರಡನೇ ವಾರವೂ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಓಟ ಮುಂದುವರಿಸಿವೆ. ಸೆಪ್ಟೆಂಬರ್ 20ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ದಾಖಲೆ ಮಟ್ಟದ ಏರಿಕೆ ಕಂಡಿವೆ. 84544 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.99ರಷ್ಟು ಗಳಿಸಿಕೊಂಡಿದೆ. 25790 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.71ರಷ್ಟು ಜಿಗಿದಿದೆ. ಅಮೆರಿಕದಲ್ಲಿ ಬಡ್ಡಿದರ ಇಳಿಕೆ ಘೋಷಣೆ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ಭಾರತದಲ್ಲೂ ಮುಂಬರುವ ದಿನಗಳಲ್ಲಿ ಬಡ್ಡಿದರ ಇಳಿಕೆ ನಿರೀಕ್ಷೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 5.22 ಬ್ಯಾಂಕ್ ಶೇ 3.84 ಫೈನಾನ್ಸ್ ಶೇ 3.63 ಆಟೊ ಶೇ 2.21 ಎನರ್ಜಿ ಶೇ 1.4 ಎಫ್ಎಂಸಿಜಿ ಶೇ 1.22 ಲೋಹ ಶೇ 0.33ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಮಾಧ್ಯಮ ಶೇ 2.67 ಮಾಹಿತಿ ತಂತ್ರಜ್ಞಾನ ಶೇ 2.59 ಫಾರ್ಮಾ ಶೇ 1.79 ಅನಿಲ ಮತ್ತು ತೈಲ ಶೇ 1.44 ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.03ರಷ್ಟು ಕುಸಿದಿವೆ. ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 7.74 ಐಸಿಐಸಿಐ ಬ್ಯಾಂಕ್ ಶೇ 7.18 ನೆಸ್ಲೆ ಇಂಡಿಯಾ ಶೇ 6.59 ಎನ್‌ಟಿಪಿಸಿ ಶೇ 5.71 ಶ್ರೀರಾಮ್ ಫೈನಾನ್ಸ್ ಶೇ 5.43 ಎಲ್ ಆ್ಯಂಡ್‌ ಟಿ ಶೇ 5.03 ಏರ್‌ಟೆಲ್ ಶೇ 4.76 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 4.71 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4.61 ಮತ್ತು ಹೀರೊ ಮೋಟೊಕಾರ್ಪ್‌ ಶೇ 3.77ರಷ್ಟು ಗಳಿಸಿಕೊಂಡಿವೆ. ಟಿಸಿಎಸ್ ಶೇ 5.15 ಗ್ರಾಸಿಮ್ ಇಂಡಸ್ಟ್ರಿಸ್ ಶೇ 4.09 ಬಿಪಿಸಿಎಲ್ ಶೇ 3.1 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 2.81 ವಿಪ್ರೊ ಶೇ 2.15 ಟಾಟಾ ಮೋಟರ್ಸ್ ಶೇ 2.11 ಇನ್ಫೊಸಿಸ್ ಶೇ 1.84 ಒಎನ್‌ಜಿಸಿ ಶೇ 1.83 ಟೆಕ್ ಮಹೀಂದ್ರ ಶೇ 1.71 ಮತ್ತು ಡಾ.ರೆಡ್ಡೀಸ್ ಶೇ 1.59ರಷ್ಟು ಕುಸಿತ ಕಂಡಿವೆ. ಮುನ್ನೋಟ: ಅಕ್ಟೋಬರ್‌ನಿಂದ ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ. ಹೂಡಿಕೆದಾರರು ಅತ್ತ ದೃಷ್ಟಿ ಹರಿಸಿದ್ದಾರೆ. ಇನ್ನು ಅಕ್ಟೋಬರ್ 7ರಿಂದ 9ರ ವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ಇದೆ. ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿದರ ಇಳಿಕೆ ತೀರ್ಮಾನ ಕೈಗೊಂಡಿರುವ ಬೆನ್ನಲ್ಲೇ ಆರ್‌ಬಿಐ ಮುಂದಿನ ನಡೆ ಏನು ಎನ್ನುವ ಕುತೂಹಲವಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.