ADVERTISEMENT

ಷೇರುಪೇಟೆಗೆ ಸಿಹಿ- ಕಹಿಯ ವರ್ಷ

ನರಸಿಂಹ ಬಿ
Published 30 ಡಿಸೆಂಬರ್ 2019, 12:31 IST
Last Updated 30 ಡಿಸೆಂಬರ್ 2019, 12:31 IST
   

ಅನಿಶ್ಚಿತೆಯ ನಡುವೆಯೂ 2019 ಷೇರುಪೇಟೆ ಹೂಡಿಕೆದಾರರ ಪಾಲಿಗೆ ಅತ್ಯಂತ ಮಹತ್ವದ ವರ್ಷ. 2018ರ ಡಿಸೆಂಬರ್‌ನಿಂದ 2019ರ ಡಿಸೆಂಬರ್‌ವರೆಗೆ ಸೆನ್ಸೆಕ್ಸ್ ಸುಮಾರು ಶೇ 17 ರಷ್ಟು ಗಳಿಕೆ ಕಂಡಿದೆ. ಸಂವೇದಿ ಸೂಚ್ಯಂಕ 30,000, 40,000, 41,000 ಹೀಗೆ ಹೊಸ ಮೈಲುಗಲ್ಲುಗಳನ್ನು ಸೃಷ್ಟಿಸಿ ದಾಖಲೆ ಬರೆದಿದೆ. ನಿಫ್ಟಿ ಸಹ ಶೇ 13 ರಷ್ಟು ಬೆಳವಣಿಗೆ ಸಾಧಿಸಿದ್ದು 12,293 ಅಂಶಗಳನ್ನು ತಲುಪಿ ಇತಿಹಾಸ ನಿರ್ಮಿಸಿದೆ.ಈ ಮೂಲಕ ಷೇರುಪೇಟೆ ಸೂಚ್ಯಂಕಗಳು 2 ವರ್ಷಗಳಲ್ಲಿ ಗರಿಷ್ಠ ಲಾಭಾಂಶ ದಾಖಲಿಸುವತ್ತ ಮುನ್ನಡೆದಿವೆ.

₹ 5 ಲಕ್ಷ ವರೆಗಿನ ಆದಾಯ ಹೊಂದಿರುವವರಿಗೆ ಸಂಪೂರ್ಣ ತೆರಿಗೆ ವಿನಾಯ್ತಿ, ಎರಡನೇ ಬಾರಿಗೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ, ಕಾರ್ಪೊರೇಟ್ ತೆರಿಗೆ ಕಡಿತ, ರೆಪೋ ದರ ಕಡಿತ, ಜಿಡಿಪಿ ದರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 4.5 ಕ್ಕೆ ಕುಸಿತ, ಅಮೆರಿಕ- ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಬ್ಯಾಂಕ್ ವಿಲೀನ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್‌ಬಿಎಫ್‌ಸಿ) ನಗದು ಕೊರತೆ, ದೂರಸಂಪರ್ಕ ವಲಯದಲ್ಲಿನ ಹಿನ್ನಡೆ, ವಾಹನ ಮಾರಾಟದಲ್ಲಿ ಮಂದಗತಿ, ಕೇಂದ್ರ ಸರ್ಕಾರಕ್ಕೆ ಆರ್‌ಬಿಐನಿಂದ ₹ 1.76 ಲಕ್ಷ ಕೋಟಿ ನಿಧಿ ವರ್ಗಾವಣೆ ಸೇರಿದಂತೆ ಹಲವು ವಿದ್ಯಮಾನಗಳು ಸೂಚ್ಯಂಕಗಳ ಏರಿಳಿತಕ್ಕೆ ಕಾರಣವಾಗಿವೆ.

ಮೋದಿ ನೇತೃತ್ವದ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕ ಬೆನ್ನಲ್ಲೇ ಸೆನ್ಸೆಕ್ಸ್ ಒಂದೇ ದಿನ 1,422 ಅಂಶಗಳ ಜಿಗಿತ ಕಂಡಿತು. ಕಾರ್ಪೊರೇಟ್ ತೆರಿಗೆ ಕಡಿತ ಘೋಷಣೆಯಾದಾಗ ಸೆಪ್ಟೆಂಬರ್ 20 ರಂದು ಸೆನ್ಸೆಕ್ಸ್ 3000 ಅಂಶಗಳ ಏರಿಕೆ ದಾಖಲಿಸಿದರೆ, ನಿಫ್ಟಿ 1000 ಅಂಶಗಳಷ್ಟು ಏರಿಕೆಯಾಯ್ತು. ಇನ್ನು ನಿಫ್ಟಿ (50) ಸೂಚ್ಯಂಕದಲ್ಲಿರುವ 50 ಪ್ರಮುಖ ಷೇರುಗಳ ಪೈಕಿ 29 ಷೇರುಗಳು ಈ ವರ್ಷ ಗಳಿಕೆ ಕಂಡಿವೆ. ಬಜಾಜ್ ಫೈನಾನ್ಸ್ , ಐಸಿಐಸಿಐ ಬ್ಯಾಂಕ್ ಮತ್ತು ಏರ್‌ಟೆಲ್‌ ಷೇರುಗಳು ಸೂಚ್ಯಂಕದ ಅಗ್ರ ಕ್ರಮಾಂಕದಲ್ಲಿದ್ದು ಕ್ರಮವಾಗಿ ಶೇ 56, ಶೇ 51 ಮತ್ತು ಶೇ 43 ರಷ್ಟು ಏರಿಕೆ ಕಂಡಿವೆ.

ADVERTISEMENT

ಲಾರ್ಜ್ ಕ್ಯಾಪ್ ಗಳಿಕೆ

ಷೇರುಪೇಟೆಯ ಒಟ್ಟಾರೆ ಬೆಳವಣಿಗೆ ಆಶಾದಾಯಕವಾಗಿ ಕಂಡರೂ ಬಹುಪಾಲು ಸಕಾರಾತ್ಮಕತೆಯು ಲಾರ್ಜ್ ಕ್ಯಾಪ್ (₹ 20,000 ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವಿರುವ ಕಂಪನಿ) ಕಂಪನಿಗಳಲ್ಲೇ ಕಂಡು ಬಂದಿದೆ.

ಮಿಡ್ ಕ್ಯಾಪ್ (₹ 5,000 ಕೋಟಿಯಿಂದ ₹ 20,000 ಕೋಟಿಯವರೆಗೆ ಮಾರುಕಟ್ಟೆ ಮಾಲ್ಯವಿರುವ ಕಂಪನಿ) ಮತ್ತು ಸ್ಮಾಲ್ ಕ್ಯಾಪ್
(₹ 5,000 ಕೋಟಿಗಿಂತ ಕಡಿಮೆ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ) ಕಂಪನಿಗಳಲ್ಲಿ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ. ಪ್ರಸಕ್ತ ವರ್ಷದಲ್ಲಿ ಬಿಎಸ್‌ಸಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 4 ಮತ್ತು
ಶೇ 8.99 ರಷ್ಟು ಕುಸಿದಿವೆ.

‌ಸೂಚ್ಯಂಕಗಳು ಸಾಗಿದ ಹಾದಿ

ಬಿಎಸ್‌ಇ ಸೆನ್ಸೆಕ್ಸ್: ಶೇ 17 ರಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ ಮುಂಚೂಣಿಯಲ್ಲಿ ನಿಲ್ಲುತ್ತದೆ. 30 ಪ್ರಮುಖ ಕಂಪನಿಗಳ ಷೇರುಗಳ ಪೈಕಿ ಒಂದು ವರ್ಷದ ಅವಧಿಯಲ್ಲಿ (2018ರ ಡಿಸೆಂಬರ್‌ನಿಂದ 2019ರ ಡಿಸೆಂಬರ್) ಸುಮಾರು 20 ಕಂಪನಿಗಳ ಷೇರುಗಳು ಉತ್ತಮ ಸಾಧನೆ ತೋರಿವೆ. ಬಜಾಜ್ ಫೈನಾನ್ಸ್ ಶೇ 61, ಏರ್‌ಟೆಲ್ ಶೇ 61, ಐಸಿಐಸಿಐ ಬ್ಯಾಂಕ್ ಶೇ 53, ರಿಲಯನ್ಸ್ ಇಂಡಸ್ಟ್ರೀಸ್ ಶೇ 41 ಮತ್ತು ಕೋಟಕ್ ಬ್ಯಾಂಕ್ ಶೇ 38.30 ರಷ್ಟು ಏರಿಕೆ ದಾಖಲಿಸಿವೆ. ಮತ್ತೊಂದೆಡೆ ಪ್ರಮುಖ ಕಂಪನಿಗಳಾದ ಮಹೀಂದ್ರಾ ಅಂಡ್ ಮಹೀಂದ್ರಾ ಶೇ 33 ರಷ್ಟು ಕುಸಿದಿದ್ದು, ಹಿರೋ ಮೋಟೊ ಕಾರ್ಪ್, ಒಎನ್‌ಜಿಸಿ, ಐಟಿಸಿ ಮತ್ತು ಟಾಟಾ ಸ್ಟೀಲ್ ಕ್ರಮವಾಗಿ ಶೇ 23, ಶೇ 15, ಶೇ 13 ಮತ್ತು ಶೇ 10 ರಷ್ಟು ಇಳಿಕೆ ದಾಖಲಿಸಿವೆ.

ಬಿಎಸ್‌ಇ ಮಿಡ್ ಕ್ಯಾಪ್: ಬಿಎಸ್‌ಇ ಮಿಡ್ ಕ್ಯಾಪ್ ಶೇ 2.31 ರಷ್ಟು ಕುಸಿದಿದೆ. ಇಂಡಿಯನ್ ಬ್ಯಾಂಕ್ ಶೇ 56 ರಷ್ಟು ಇಳಿಕೆಯಾಗಿದೆ, ಪಿಎನ್ ಬಿ ಹೌಸಿಂಗ್ ಫೈನಾನ್ಸ್ ಶೇ 54, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇ 49, ಗ್ಲೆನ್ ಮಾರ್ಕ್ ಫಾರ್ಮ್ ಶೇ 48 ಮತ್ತು ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಶೇ 43 ರಷ್ಟು ತಗ್ಗಿವೆ. ರಿಲಯನ್ಸ್ ನಿಪ್ಪಾನ್ ಶೇ 113 ರಷ್ಟು ಜಿಗಿದಿದೆ. ವರ್ಲ್ ಪೂಲ್ ಇಂಡಿಯಾ ಶೇ 75, ಅದಾನಿ ಟ್ರಾನ್ಸ್‌ಮಿಷನ್ ಶೇ 66 , ಇನ್ಫೊ ಎಡ್ಜ್ ಶೇ 64 ಮತ್ತು ಇಂದ್ರ ಪ್ರಸ್ಥ ಗ್ಯಾಸ್ ಶೇ 63 ರಷ್ಟು ಹೆಚ್ಚಳವಾಗಿವೆ.

ಬಿಎಸ್‌ಇ ಸ್ಮಾಲ್ ಕ್ಯಾಪ್: ಬಿಎಸ್‌ಇ ಸ್ಮಾಲ್ ಕ್ಯಾಪ್ ಈ ವರ್ಷ ಶೇ 7.48 ರಷ್ಟು ಕುಸಿದಿದೆ. ಕಾಕ್ಸ್ ಅಂಡ್ ಕಿಂಗ್ಸ್ ,ತಲ್ ವಲ್ಕರ್ಸ್, ಹೆಲ್ತ್ ಕ್ಲಬ್ಸ್, ಸಿಂಟೆಕ್ಸ್ ಪ್ಲಾಸ್ಟಿಕ್ಸ್, ಕ್ರಿಧಾನ್ ಇನ್ಫ್ರಾ ಶೇ 94 ರಿಂದ ಶೇ 99 ರಷ್ಟು ತಗ್ಗಿವೆ. ಅದಾನಿ ಗ್ರೀನ್ ಎನರ್ಜಿ ಶೇ 252, ಸೀಮೆಕ್ ಶೇ 136, ಜಂಪ್ ನೆಟ್ ವರ್ಕ್ಸ್ ಶೇ 136, ಮತ್ತು ಆವಾಸ್ ಫೈನಾನ್ಶಿಯರ್ಸ್‌ ಶೇ 134 ರಷ್ಟು ಜಿಗಿದಿವೆ.

ಪ್ರಮುಖ ಅಂಶಗಳು

* ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ
* ಕಾರ್ಪೊರೇಟ್ ತೆರಿಗೆ ಕಡಿತ
* ರೆಪೊ ದರ ಶೇ 1.35ರಷ್ಟು ಕಡಿತ
* ಜಿಡಿಪಿ ವೃದ್ಧಿ ದರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 6 ವರ್ಷಗಳ ಕನಿಷ್ಠ ಶೇ 4.5ಕ್ಕೆ ಕುಸಿತ‌
* ವಾಹನ ಮಾರಾಟ ಕುಸಿತ
* ಅಮೆರಿಕ – ಚೀನಾ ವ್ಯಾಪಾರ ಬಿಕ್ಕಟ್ಟು

2020ರ ಮುನ್ನೋಟ

ಈ ವರ್ಷ ಪೇಟೆಯಲ್ಲಿನ ಏರಿಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಲಾರ್ಜ್ ಕ್ಯಾಪ್ ಕಂಪನಿಗಳಿಗೆ ಸೀಮಿತವಾಗಿದೆ. ಹೂಡಿಕೆದಾರಲ್ಲಿ ವಿಶ್ವಾಸ ಮೂಡಿಸಲು ಸರ್ಕಾರ ಕೈಗೊಂಡ ಹಲವು ಕ್ರಮಗಳ ಪರಿಣಾಮ, ಪೇಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ದೇಶೀ ಮಾರುಕಟ್ಟೆ ಅಂತಹ ಸಾಧನೆ ಮಾಡಿಲ್ಲ. ಬರುವ ತ್ರೈಮಾಸಿಕಗಳಲ್ಲಿ ಕಂಪನಿಗಳ ಫಲಿತಾಂಶಗಳು ಚೇತರಿಕೆ ಕಾಣುವ ನಿರೀಕ್ಷೆಯಿದೆ. ಆರ್ಥಿಕ ಹಿಂಜರಿಕೆ ಇರುವ ಕಾರಣ ಮಾರುಕಟ್ಟೆ ಚೇತರಿಕೆಗೆ 2020 ರ ಬಜೆಟ್‌ನಲ್ಲೂ ಸರ್ಕಾರ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಹೀಗಿದ್ದರೂ ದಿಢೀರ್ ಏರಿಳಿತದ ಸಂದರ್ಭಗಳು ಇದ್ದೇ ಇವೆ ಎನ್ನುವುದನ್ನು ಕಡೆಗಣಿಸುವಂತಿಲ್ಲ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.