ಹೊಸ ವರ್ಷದ ಹೊಸ್ತಿಲಿನಲ್ಲಿ ನಾವಿದ್ದೇವೆ. 2023-24ನೇ ಆರ್ಥಿಕ ವರ್ಷವು 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ. ಅಂದರೆ ಪ್ರಸಕ್ತ ಸಾಲಿನಲ್ಲಿ ತೆರಿಗೆ ಉಳಿಸಲು ನಿಮಗಿರುವ ಸಮಯಾವಕಾಶ ಕೇವಲ 3 ತಿಂಗಳು.
ಈಗಾಗಲೇ, ನಿಮ್ಮ ಉದ್ಯೋಗದಾತ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಿಂದ ತೆರಿಗೆ ಉಳಿತಾಯದ ವಿವರವನ್ನು ಕೊಡಿ ಎಂಬ ಸಂದೇಶವೂ ಬಂದಿರುತ್ತದೆ. ಈ ಹೊತ್ತಿನಲ್ಲಿ ಕಾನೂನಿನ ಅನ್ವಯ ನ್ಯಾಯಸಮ್ಮತವಾಗಿ ತೆರಿಗೆ ಉಳಿಸಲು ಯಾವೆಲ್ಲಾ ಅವಕಾಶಗಳಿವೆ; ಬನ್ನಿ ತಿಳಿಯೋಣ.
ತೆರಿಗೆಗೆ ಒಳಪಡುವ ಆದಾಯ ಎಷ್ಟು?:
ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆಗೆ ಒಳಪಡುವ ಆದಾಯ ಎಷ್ಟು ಎನ್ನುವುದನ್ನು ತಿಳಿಯುವುದರ ಮೂಲಕ ಆದಾಯ ತೆರಿಗೆ ಉಳಿತಾಯದ ಪ್ರಕ್ರಿಯೆ ಶುರುವಾಗುತ್ತದೆ. ಉದ್ಯೋಗದಿಂದ ಬರುವ ಆದಾಯ, ಬಾಡಿಗೆಯಿಂದ ಬರುವ ಆದಾಯ, ವೃತ್ತಿಪರ ಆದಾಯ, ಕ್ಯಾಪಿಟಲ್ ಗೇನ್ಸ್, ಡಿವಿಡೆಂಟ್ ಆದಾಯ ಹೀಗೆ ಒಟ್ಟು ಆದಾಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಉದಾಹರಣೆಗೆ ತೆರಿಗೆಗೆ ಒಳಪಡುವ ಒಟ್ಟು ಆದಾಯ ₹10 ಲಕ್ಷ ಎಂದುಕೊಳ್ಳೋಣ. ಇದರಲ್ಲಿ ₹50 ಸಾವಿರವನ್ನು ಸ್ಟ್ಯಾಂಡರ್ಡ್ ಡಿಡೆಕ್ಷನ್ ಅಡಿ ಕಡಿತಗೊಳಿಸಬಹುದು. ಸ್ಟ್ಯಾಂಡರ್ಡ್ ಡಿಡೆಕ್ಷನ್ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗೆ ಅನ್ವಯಿಸುತ್ತದೆ. ಮನೆ ಬಾಡಿಗೆ ಭತ್ಯೆ (HRA), ಮರುಪಾವತಿ (Reimbursement) ಸೇರಿ ಒಂದು ಲಕ್ಷ ರೂಪಾಯಿಯನ್ನು ಕಡಿತ ಮಾಡೋಣ. ಸೆಕ್ಷನ್ 80ಸಿ ಮತ್ತು 80ಡಿ ಅಡಿಯಲ್ಲಿ ₹2 ಲಕ್ಷ ಉಳಿತಾಯ ಮಾಡಿದ್ದೀರಿ ಎಂದುಕೊಳ್ಳೋಣ. ಹೀಗೆ ಮಾಡಿದಾಗ ತೆರಿಗೆಗೆ ಒಳಪಡುವ ನಿಮ್ಮ ಆದಾಯ ₹6.5 ಲಕ್ಷ ಆಗುತ್ತದೆ.
ಈ ಲೆಕ್ಕಾಚಾರದ ಪ್ರಕಾರ ಸೆಸ್ ಒಳಗೊಂಡು ₹44,200 ಪಾವತಿಸಬೇಕಾಗುತ್ತದೆ. ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಈ ಅಂದಾಜು ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಉಳಿತಾಯಕ್ಕೆ ಹೆಚ್ಚಿನ ಆಯ್ಕೆಗಳಿಲ್ಲ. ಆದರೆ, ತೆರಿಗೆ ಪ್ರಮಾಣ ಕಡಿಮೆಯಿದೆ. ಹೊಸ ತೆರಿಗೆ ಪದ್ಧತಿಯಿಂದ ಹಳೆಯ ತೆರಿಗೆ ಪದ್ಧತಿಗೆ ಮತ್ತು ಹಳೆಯ ತೆರಿಗೆ ಪದ್ಧತಿಯಿಂದ ಹೊಸ ತೆರಿಗೆ ಪದ್ಧತಿಗೆ ವರ್ಗವಾಗಲು ನಿಮಗೆ ಅವಕಾಶವಿದೆ. ಆದರೆ, ಅದಕ್ಕೆ ಕೆಲ ನಿಬಂಧನೆಗಳಿವೆ.
ತೆರಿಗೆ ಉಳಿಸಲು ಇರುವ ಪ್ರಮುಖ ಅವಕಾಶಗಳು:
ಹಲವು ಖರ್ಚುಗಳಿಗೆ ಮತ್ತು ಹೂಡಿಕೆಗಳಿಗೆ ತೆರಿಗೆ ಉಳಿಸುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆಯು ಕಲ್ಪಿಸುತ್ತದೆ. ಅವುಗಳಲ್ಲಿ ಪ್ರಮುಖ ಎಂದರೆ ಮನೆ ಬಾಡಿಗೆ ಭತ್ಯೆ, ಕಾರ್ಮಿಕರ ಭವಿಷ್ಯ ನಿಧಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಪ್ರಯಾಣ ವೆಚ್ಚ, ಪುಸ್ತಕ ಮತ್ತು ಪತ್ರಿಕೆ ಖರೀದಿ ವೆಚ್ಚ, ಟೆಲಿಫೋನ್–ಮೊಬೈಲ್ ವೆಚ್ಚ, ಫುಡ್ ಕೂಪನ್, ರಜೆ ಸಮಯದ ಪ್ರಯಾಣ ವೆಚ್ಚ (ಎಲ್‌ಟಿಎ) ಮತ್ತು ಇತ್ಯಾದಿ. ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ನಿಮ್ಮ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗವನ್ನು ಸಂಪರ್ಕಿಸಬಹುದು.
ಹೂಡಿಕೆಗಳ ಮೂಲಕ ತೆರಿಗೆ ಉಳಿಸಿ:
1. ವಿವಿಧ ಹೂಡಿಕೆಗಳಿಗೆ ವಿನಾಯಿತಿ, ಸೆಕ್ಷನ್ 80ಸಿ:
ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಜೀವ ವಿಮೆ ಪ್ರೀಮಿಯಂ, ಯುಲಿಪ್ ಪ್ಲಾನ್, ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ), 5 ವರ್ಷದ ಅವಧಿಯ ನಿಶ್ಚಿತ ಠೇವಣಿ (ಎಫ್.ಡಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಕ್ಕಳ ಶಾಲೆಯ ಬೋಧನಾ ಶುಲ್ಕ, ಮನೆ ಸಾಲದ ಮೇಲಿನ ಅಸಲು ಪಾವತಿಗೆ ಈ ವಿನಾಯಿತಿ ಪಡೆಯಬಹುದು.
2. ಎನ್‌ಪಿಎಸ್ ಹೂಡಿಕೆಗೆ ವಿನಾಯಿತಿ, ಸೆಕ್ಷನ್ 80ಸಿಸಿಡಿ (1) ಮತ್ತು ಸೆಕ್ಷನ್ 80 ಸಿಸಿಡಿ (1ಬಿ):
ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿ ಈ ಅನುಕೂಲ ಪಡೆಯಬಹುದು. ನಿಮ್ಮ ವೇತನದ ಶೇ 10ರಷ್ಟು ವಿನಾಯಿತಿ ಪಡೆಯಲು ಅವಕಾಶವಿದೆ. ಸ್ವಂತ ಉದ್ಯೋಗಿಗಳಿಗೆ ಶೇ 20ರಷ್ಟು ವಿನಾಯಿತಿ ಸಿಗುತ್ತದೆ. 80ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ₹50 ಸಾವಿರದ ವರೆಗಿನ ಎನ್‌ಪಿಎಸ್ ಹೂಡಿಕೆಗೆ ವಿನಾಯಿತಿ ಇದೆ.
3. ಆರೋಗ್ಯ ವಿಮೆಗೆ ವಿನಾಯಿತಿ, ಸೆಕ್ಷನ್ 80ಡಿ:
ಈ ಸೆಕ್ಷನ್ ಅಡಿಯಲ್ಲಿ ಕುಟುಂಬಕ್ಕೆ (ಸ್ವಂತಕ್ಕೆ, ಪತ್ನಿ, ಮಕ್ಕಳಿಗೆ) ಪಡೆಯುವ ಆರೋಗ್ಯ ವಿಮೆಗೆ ₹25 ಸಾವಿರದ ವರೆಗೆ ವಿನಾಯಿತಿ ಇದೆ. ಇದಲ್ಲದೆ ಮುನ್ನೆಚ್ಚರಿಕಾ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರೆ ₹5 ಸಾವಿರದ ವರೆಗೆ ವಿನಾಯಿತಿ ಪಡೆಯಬಹುದು. ಆದರೆ, ಅದು ₹25 ಸಾವಿರದ ಮಿತಿಯೊಳಗೆ ಇರಲಿದೆ. 60 ವರ್ಷ ಮೇಲ್ಪಟ್ಟ ಪೋಷಕರಿಗೆ ವಿಮೆ ಮಾಡಿಸಿದ್ದರೆ ₹50 ಸಾವಿರದ ವರೆಗೆ ತೆರಿಗೆ ಅನುಕೂಲವಿದೆ. ಒಂದೊಮ್ಮೆ ಆರೋಗ್ಯ ವಿಮೆ ಇಲ್ಲ. ಆದರೆ, ವೈದ್ಯಕೀಯ ವೆಚ್ಚದ ಬಿಲ್‌ಗಳಿವೆ ಎಂದಾದರೆ ₹50 ಸಾವಿರದ ವರೆಗೆ ಅದಕ್ಕೂ ವಿನಾಯಿತಿ ಪಡೆಯಬಹುದು.
4. ಶಿಕ್ಷಣ ಸಾಲಕ್ಕೆ ವಿನಾಯಿತಿ, ಸೆಕ್ಷನ್ 80ಇ:
ಸ್ವಂತಕ್ಕೆ, ಪತ್ನಿ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರೆ ನಿಗದಿತ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಡ್ಡಿಯ ಮೇಲೆ ವಿನಾಯಿತಿ ಸಿಗುತ್ತದೆ.
5. ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ:
ಗೃಹ ಸಾಲದ ಅಸಲು ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಸಿಗುತ್ತದೆ. ಆದರೆ, ಒಟ್ಟಾರೆ 80ಸಿ ಮಿತಿ ₹1.5 ಲಕ್ಷವನ್ನು ಇದು ಮೀರುವಂತಿಲ್ಲ. ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 24 ಅಡಿಯಲ್ಲಿ ₹2 ಲಕ್ಷದ ವರೆಗೆ ವಿನಾಯಿತಿ ಸಿಗುತ್ತದೆ.
(ಚಾರ್ಟರ್ಡ್ ಅಕೌಂಟೆಂಟ್)
ಉತ್ತಮ ಗಳಿಕೆ ತಂದುಕೊಟ್ಟ ಷೇರುಪೇಟೆ
2023ರಲ್ಲಿ ಷೇರುಪೇಟೆ ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಟ್ಟಿದೆ. ಡಿಸೆಂಬರ್ 29ರಂದು ಕೊನೆಗೊಂಡ ವಾರದಲ್ಲಿ ಸೂಚ್ಯಂಕಗಳು ಪುಟಿದೆದ್ದಿವೆ.
72,240 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.60ರಷ್ಟು ಗಳಿಸಿಕೊಂಡಿದೆ. 21,731 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.78ರಷ್ಟು ಹೆಚ್ಚಳ ಕಂಡಿದೆ. ಒಟ್ಟಾರೆ 2023ನೇ ವರ್ಷದಲ್ಲಿ ಕ್ರಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಹೂಡಿಕೆದಾರರಿಗೆ ಶೇ 18.7 ಮತ್ತು ಶೇ 20ರಷ್ಟು ಗಳಿಕೆ ತಂದುಕೊಟ್ಟಿವೆ.
2024ರಲ್ಲಿ ಬಡ್ಡಿದರ ಇಳಿಕೆಯಾಗಬಹುದು ಎಂಬ ಆಶಾವಾದ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಸಕಾರಾತ್ಮಕತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಗಿವೆ.
ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಟೆಲಿಕಮ್ಯೂನಿಕೇಷನ್ , ಬಿಎಸ್ಇ ಆಟೊ ಮತ್ತು ಬಿಎಸ್ಇ ಮೆಟಲ್ ತಲಾ ಶೇ 4ರಷ್ಟು ಗಳಿಕೆ ಕಂಡಿವೆ. ಎಫ್‌ಎಂಸಿಜಿ ಸೂಚ್ಯಂಕ ಶೇ 3ರಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ ಬಿಎಸ್ಇ ಐ.ಟಿ ಸೂಚ್ಯಂಕ ಶೇ 0.5ರಷ್ಟು ಕುಸಿದಿದೆ. ಇನ್ನು ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹8,648.96 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹666.06 ಕೋಟಿ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದ್ದಾರೆ.
ಏರಿಕೆ–ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಟಾಟಾ ಕನ್ಸ್ಯೂಮರ್ ಪ್ರಾಡೆಕ್ಟ್ಸ್, ಹಿಂಡಾಲ್ಕೋ ಇಂಡಸ್ಟ್ರೀಸ್, ಟಾಟಾ ಮೋಟರ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಸ್ ಟವರ್ಸ್ ಮತ್ತು ಗೇಲ್ ಗಳಿಕೆ ಕಂಡಿವೆ. ಜೊಮಾಟೊ, ಅದಾನಿ ವಿಲ್ಮರ್, ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಮತ್ತು ಎಬಿಬಿ ಇಂಡಿಯಾ ಕುಸಿತ ಕಂಡಿವೆ.
ಮುನ್ನೋಟ: ಸದ್ಯದಲ್ಲೇ ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಜನವರಿ ಎರಡನೇ ವಾರದಲ್ಲಿ ಇನ್ಫೊಸಿಸ್, ಟಿಸಿಎಸ್, ಎಚ್‌ಸಿಎಲ್, ವಿಪ್ರೋ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.
ಉಳಿದಂತೆ ಬಡ್ಡಿದರ ಇಳಿಕೆ ನಿರೀಕ್ಷೆ, ವಿದೇಶಿ ಹೂಡಿಕೆದಾರರ ನಿರ್ಣಯಗಳು ಸೇರಿ ಪ್ರಮುಖ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.