ADVERTISEMENT

ಕರಾವಳಿ ಕುಸುರಿಯ ಸೊಗಡು

ಇದು ಬಂಗಾರದ ಹಬ್ಬ

ಕೋಡಿಬೆಟ್ಟು ರಾಜಲಕ್ಷ್ಮಿ
Published 6 ಮೇ 2019, 7:25 IST
Last Updated 6 ಮೇ 2019, 7:25 IST
ಕರಾವಳಿ ಕುಸುರಿಯ ಸೊಗಡು
ಕರಾವಳಿ ಕುಸುರಿಯ ಸೊಗಡು   

ಮಂಗಳೂರು ಶೈಲಿಯ ಚಿನ್ನಾಭರಣಗಳೆಂದರೆ ಕುಸುರಿ ಕೆಲಸಗಳು ಜಾಸ್ತಿ. ಧರಿಸಿದ ಆಭರಣವನ್ನೇ ನೋಡಿ ‘ನೀವು ಮಂಗಳೂರು ಕಡೆಯವರಾ?’ ಎಂದು ಪ್ರಶ್ನಿಸುವುದುಂಟು. ಕಡಿಮೆ ಚಿನ್ನದಲ್ಲಿ ಹೆಚ್ಚು ಕುಸುರಿ ಇರುವ ಆಭರಣಗಳು ಮಂಗಳೂರು–ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಕಾಣಸಿಗುತ್ತವೆ. ಬ್ಯಾರಿ, ಬಂಟ, ಬ್ರಾಹ್ಮಣ ಸಮುದಾಯದ ಆಭರಣಗಳೆಂದು ಗುರುತಿಸಿಕೊಂಡವು ಹಲವು ಇವೆ.

ಸಾಂಪ್ರದಾಯಿಕವಾಗಿ ಧರಿಸುವ ಸೊಂಟಪಟ್ಟಿ, ತೋಳಬಂದಿ, ವಿವಿಧ ರೀತಿಯ ಸರಗಳಿಗೆ ಹೆಚ್ಚು ಚಿನ್ನದ ಅಗತ್ಯವಿರುವುದರಿಂದ ಇವುಗಳನ್ನು ಹೆಚ್ಚಾಗಿ ಶ್ರೀಮಂತರ ಮನೆಯಲ್ಲಿ ಮಾತ್ರ ಕಾಣಬಹುದು. ನಿತ್ಯವೂ ಧರಿಸುವ ಕರಿಮಣಿ, ಉಂಗುರ ಮತ್ತು ಕಿವಿಯೋಲೆಗಳಲ್ಲಿ ಮಂಗಳೂರಿನ ಛಾಪು ಇರುವ ಹಲವು ಶೈಲಿಗಳಿವೆ. ಉದಾಹರಣೆಗೆ ಬಂಟ ಸಮುದಾಯದಲ್ಲಿ ನಿಶ್ಚಿತಾರ್ಥಕ್ಕೆ ಹಾಕುವ ಉಂಗುರವನ್ನು ‘ಒಡ್ಡಿಂಗಿಲ’ ಅನ್ನುತ್ತಾರೆ. ‘ವಿ’ ಆಕಾರದಲ್ಲಿ ಇರುವ ಈ ಉಂಗುರ ಧರಿಸಿದ್ದರೆ ನಿಶ್ಚಿತಾರ್ಥವಾಗಿದೆ ಎಂದು ಪರಿಗಣಿಸುವುದು ವಾಡಿಕೆ. ಇತ್ತೀಚೆಗೆ ಇತರರೂ ಈ ಸಂಪ್ರದಾಯವನ್ನು ಅನುಸರಿಸುತ್ತಾರೆ. ಒಡ್ಡಿಂಗಿಲವು ಸರಳವಾಗಿ ಇರುವುದೂ ಉಂಟು. ‘ವಿ’ ಆಕಾರದ ತುದಿಯಲ್ಲಿ ವಜ್ರವನ್ನು ಇರಿಸಿ ಮಾಡುವ, ಅಥವಾ ಹರಳುಗಳನ್ನೇ ಇರಿಸಿ ಮಾಡುವ ಉಂಗುರಗಳು ಇವೆ. ಖರ್ಚು ಮಾಡುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅಕ್ಕಸಾಲಿಗರು ವಿನ್ಯಾಸವನ್ನು ತೋರಿಸುತ್ತಾರೆ.

ಸರಳ ಕಪ್ಪು ಮಣಿಗಳ ಎರಡು ಎಳೆಯ ಕರಿಮಣಿ ‘ಮಂಗಳೂರು ಶೈಲಿ ಕರಿಮಣಿ’ ಎಂದೇ ಪ್ರಸಿದ್ಧ. ಮಂಗಳಸೂತ್ರಕ್ಕೆ ಆಡುಮಾತಿನಲ್ಲಿ ಕರಿಮಣಿ ಎಂದೇ ಹೇಳುತ್ತಾರೆ. ಸುಮಾರು 26ರಿಂದ 32 ಅಥವಾ 34 ಇಂಚುಗಳಷ್ಟು ಉದ್ದದ ಈ ಎರಡೆಳೆಯ ಸರವೆಂದರೆ ಕರಾವಳಿ ಮಹಿಳೆಯರಿಗೆ ಹೆಚ್ಚು ಪ್ರೀತಿ. ಬ್ರಹ್ಮಮುಡಿ, ಅಷ್ಟಪಟ್ಟಿ ಚಿನ್ನದ ಗುಂಡಿನ ಕರಿಮಣಿಗೆ ಅತೀ ಹೆಚ್ಚು ಚಿನ್ನದ ಅಗತ್ಯವಿದೆ. ದುಬಾರಿಯೂ ಹೌದು. ಈ ದುಬಾರಿ ಶೈಲಿಗಳ ನಡುವೆಯೂ ಹೆಚ್ಚು ಜನಪ್ರಿಯತೆ ಪಡದಿರುವುದು ಸರಳ ಎರಡೆಳೆಯ ಕರಿಮಣಿಯೇ.

ADVERTISEMENT

ಎರಡೆಳೆ ಕರಿಮಣಿ ಸರದ ತುದಿಯಲ್ಲಿ ತಮ್ಮ ಸಂಪ್ರದಾಯಕ್ಕೆ ಅನುಸಾರವಾಗಿ ಕೆಲವರು ಒಂದು ತಾಳಿ ಧರಿಸುತ್ತಾರೆ. ಮತ್ತೆ ಕೆಲವರು ಎರಡು ತಾಳಿ ಧರಿಸುತ್ತಾರೆ. ತಾಳಿಯೂ ಊಟದ ತಟ್ಟೆಯಾಕಾರದಲ್ಲಿರುವುದು ಮುಖ್ಯ. ಗೃಹಸ್ಥಾಶ್ರಮ ಪ್ರವೇಶಿಸಿದ ಮಹಿಳೆಯು ಮನೆಯಲ್ಲಿ ಎಲ್ಲರಿಗೂ ಅನ್ನ ಬಡಿಸುವ ಜವಾಬ್ದಾರಿ ಹೊಂದುತ್ತಾಳೆ ಎಂಬ ಸಂಕೇತವಾಗಿ ಈ ತಾಳಿಯನ್ನು ಧರಿಸುತ್ತಾರೆ. ಈ ತಾಳಿಯ ಅಕ್ಕಪಕ್ಕ ಎರಡು ಹವಳಗಳನ್ನೂ, ಎರಡು ಕಪ್ಪು ಮಣಿಯನ್ನೂ, ಮತ್ತೆರಡು ಚಿನ್ನದ ಗುಂಡುಗಳನ್ನೂ ಪೋಣಿಸುವುದು ಮುಖ್ಯ ಎಂಬ ನಂಬಿಕೆ ಹೆಚ್ಚಿನವರಲ್ಲಿದೆ. ಎರಡು ತಾಳಿ ಹಾಕಿಕೊಳ್ಳುವವರೂ ಒಂದು ಹವಳವನ್ನಾದರೂ ಪೋಣಿಸುತ್ತಾರೆ. ಒಟ್ಟಿನಲ್ಲಿ ಒಂದು ಚಿನ್ನದ ಸರಿಗೆಯಲ್ಲಿ ತಾಳಿ, ಚಿನ್ನದ ಗುಂಡು, ಹವಳ, ಕಪ್ಪು ಮಣಿ ಇದ್ದರೆ ಅದುವೇ ಮಂಗಳ ಸೂತ್ರ. ಉದ್ದನೆಯ ಸರ ಇಲ್ಲದೇ ಇದ್ದರೂ, ಇವಿಷ್ಟನ್ನು ಕೆಂಪು ನೂಲಿನಲ್ಲಿ ಕಟ್ಟಿ ಧರಿಸಿಕೊಳ್ಳುವುದನ್ನು ನೋಡುತ್ತೇವೆ.

ಕರಾವಳಿಯ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಸಂಪ್ರದಾಯಲ್ಲಿ ಮದುವೆಯಾದವರು ಮಂಗಳಸೂತ್ರ ಧರಿಸಬೇಕು ಎಂಬ ಶಾಸ್ತ್ರವೇನೂ ಇಲ್ಲ. ಆದರೆ ‘ಕರಿಮಣಿಯು ಮಹಿಳೆಗೆ ಹೆಚ್ಚು ಗೌರವ ಕೊಡುತ್ತದೆ’ ಎಂಬ ನಂಬಿಕೆಯು ಸಮಾಜದಲ್ಲಿ ಇರುವುದರಿಂದ ಎಲ್ಲ ಸಮುದಾಯದವರೂ ಕರಿಮಣಿ ಧರಿಸುತ್ತಾರೆ. ಇತರ ಸಮುದಾಯದವರು ತಾಳಿಯನ್ನು ಪೋಣಿಸುವ ಶೈಲಿಗೆ ಹೆಚ್ಚು ಆದ್ಯತೆ ಕೊಡುವುದಿಲ್ಲ. ಕ್ರಿಶ್ಚಿಯನ್ನರಾದರೆ ತಾಳಿಯ ಬದಲಿಗೆ ‘ಕುರ್ಸು’ (ಹೋಲಿ ಕ್ರಾಸ್‌) ಧರಿಸಿಕೊಂಡಿರುತ್ತಾರೆ. ಈ ಕುರ್ಸುಗಳ ಕುಸುರಿಯು ಆಕರ್ಷಕವಾಗಿರುತ್ತವೆ. ಚಿನ್ನದಲ್ಲಿಯೇ ಹೂ ಬಳ್ಳಿಗಳ ನಡುವೆ ತೂಗುವ ಕುರ್ಸು, ಹರಳಿನಲ್ಲಿಯೇ ಕೆತ್ತಿದ ಹೊಳೆವ ಕುರ್ಸು, ಎರಡು ಹಂಸಗಳು ಕೊಕ್ಕಿನಲ್ಲಿ ಹಿಡಿದಿರುವ ಕುರ್ಸು, ಪುಟಾಣಿ ಚಿನ್ನದ ಗೆಜ್ಜೆಯನ್ನು ನೇತಾಡಿಸಿಕೊಂಡ ಕುರ್ಸುನ್ನು ಕ್ರಿಶ್ಚಿಯನ್‌ ಮಹಿಳೆಯರು ಧರಿಸುತ್ತಾರೆ. ಈ ಪದಕಗಳನ್ನು ಇತರ ಸರಗಳಿಗೂ ಅಳವಡಿಸುವುದುಂಟು.

ಇತ್ತೀಚೆಗೆ ಗಿಡ್ಡನೆಯ ಒಂದೆಳೆಯ ಕರಿಮಣಿ ಸರ ಮತ್ತು ಬಿಳಿಹರಳಿನ ಪದಕವೇ ಫ್ಯಾಷನ್‌ ಆಗಿದೆ. ಮಂಗಳ ಸೂತ್ರದ ಪರಿಕಲ್ಪನೆಯಲ್ಲಿ ನಂಬಿಕೆ ಇರಿಸದ ಆಧುನಿಕ ಹುಡುಗಿಯರು ಇಂತಹ ಟ್ರೆಂಡಿ ಪದಕಗಳನ್ನು ಇಷ್ಟಪಡುತ್ತಾರೆ.

ಕಿವಿಯೋಲೆ ಮತ್ತೊಂದು ಸೆಳೆತ. ಕೆಂಪಿನ ಓಲೆ ಮತ್ತು ಬಿಳಿ ಹರಳಿನ ಓಲೆಗಳನ್ನು ಗೃಹಿಣಿಯರು ಇಷ್ಟಪಟ್ಟರೆ, ಲೋಲಾಕು, ಜುಮುಕಿ ಮತ್ತು ರಿಂಗ್‌ಗಳನ್ನು ಯುವತಿಯರು ಇಷ್ಟಪಡುತ್ತಾರೆ. ‘ಬಂದ್‌ಕುಡುಕ’ ಶೈಲಿಯಲ್ಲಿ ಮಾಡುವ ಓಲೆಗಳು ಕರಾವಳಿಯಲ್ಲಿ ಸಂಪ್ರದಾಯಸ್ಥರು ಹೆಚ್ಚು ಇಷ್ಟಪಡುತ್ತಾರೆ. ಅಂದರೆ ಏಳು ಹರಳುಗಳನ್ನು ಚಿನ್ನದಲ್ಲಿ ಮುಚ್ಚಿ ಮುಂಭಾಗ ಮಾತ್ರ ಆಕರ್ಷಕವಾಗಿ ಕಾಣುವಂತೆ ರಚಿಸಲಾಗುತ್ತದೆ. ಹೀಗೆ ಒಂಭತ್ತು ಹರಳು ಬಳಸಿಯೂ ಮಾಡಬಹುದು. ಈ ಓಲೆಯನ್ನು ನಿತ್ಯವೂ ಧರಿಸಿದರೆ ಹರಳುಗಳು ಕಪ್ಪಾಗುವುದಿಲ್ಲ. ಹಂಸದೋಲೆ, ಮಾವಿನೆಲೆಯ ಕುಸುರಿ ಇರುವ ಓಲೆಗಳನ್ನು ಹಿಂದಿನ ಕಾಲದ ಮಹಿಳೆಯರು ಹಾಕಿಕೊಳ್ಳುತ್ತಿದ್ದರು. ಈಗಿನ ಟ್ರೆಂಡೇನಿದ್ದರೂ ಜುಮುಕಿ ಮತ್ತು ವೈವಿಧ್ಯಮಯ ಹ್ಯಾಂಗಿಂಗ್‌.

ಕಿವಿಯ ಮೇಲ್ಭಾಗದಲ್ಲಿ ‘ಲವಂಗದ ಕಡ್ಡಿ’ ಎಂಬ ಆಭರಣವನ್ನು ಹಿರಿಯರು ಧರಿಸುವುದನ್ನು ಕಾಣಬಹುದು. ಕೇವಲ ಚಿನ್ನದಲ್ಲಿ ಮಾಡಿದ ಕಡ್ಡಿಯಂತಹ ಆಭರಣ ಇದು. ಕೆಲವರು ಕೆಂಪು ಹರಳೊಂದನ್ನು ಅಳವಡಿಸುವುದುಂಟು. ಈಗಿನವರೂ ಇದನ್ನು ಇನ್ನಷ್ಟು ಕಲಾತ್ಮಕ ರೀತಿಯಲ್ಲಿ ಧರಿಸುತ್ತಾರೆ. ಕಿವಿಯ ಮೇಲ್ಭಾಗದಲ್ಲಿ ಧರಿಸುವ ಮುತ್ತಿನ ಆಭರಣಕ್ಕೆ ‘ಮುಗುಳು’ ಎನ್ನುತ್ತಾರೆ. ಕೊಪ್ಪು ಎನ್ನುವುದೂ ಉಂಟು, ಮುಗುಳಿನಿಂದ ಕೂದಲಿನವರೆಗೆ ಜಾಲರಿಯಂತೆ ಸರವೊಂದನ್ನು ಹಾಕಿಕೊಳ್ಳುವುದು ವಾಡಿಕೆ. ಈಗಲೂ ಮದುವೆ ಸಂದರ್ಭದಲ್ಲಿ ಈ ಆಭರಣವನ್ನು ಕಾಣಬಹುದು.

ಕಿವಿಯಾಭರಣದ ವೈಭವ ಇರುವುದು ಬ್ಯಾರಿ ಸಮುದಾಯದಲ್ಲಿ. ಆಲಿಕತ್‌, ಕಾಯಿಲಂ, ಕೊಪ್ಪು, ಸರಪಳಿ, ಕುಡುಕ, ಆರುಲಿ, ಬೆಂಡೋಲೆ ಎಂಬ ಹಲವು ರೀತಿಯ ಬೃಹತ್‌ ಆಭರಣಗಳನ್ನು ಅವರು ಧರಿಸುತ್ತಾರೆ. ಬ್ಯಾರಿ ಶೈಲಿಯ ‘ಓಲೆ’ ಎಂದರೆ ಸುಮಾರು ಕಡಲೆ ಕಾಳಿನಷ್ಟು ಗಾತ್ರದ ಕಿವಿತೂತಿನೊಳಗೆ ತುರುಕಿದಂತೆ ಇರಿಸುವ ಆಭರಣ. ಅದಕ್ಕೆ ಅಂಡೆಯಾಲೀ ಫಿರ್ಕು ಆಗಲೀ ಏನೂ ಇರುತ್ತಿರಲಿಲ್ಲ. ಯಾವ ತಿರುಪೂ ಇಲ್ಲದ ಆಭರಣ. ಕಿವಿಯ ಮೇಲ್ಭಾಗದಲ್ಲಿಯೂ ಆರು ತೂತುಗಳನ್ನು ಮಾಡಿ ನಿಂಬೆಗಾತ್ರದ ರಿಂಗಿನಂತಹ ಆಭರಣವನ್ನು ಅವರು ಧರಿಸುತ್ತಾರೆ. ಅವು ಮುಖದ ಒಟ್ಟಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಮುಂದಲೆ, ಕೈ ಸರಪಳಿಗಳನ್ನು ಬ್ಯಾರಿ ಮಹಿಳೆಯರು ಹೆಚ್ಚು ಇಷ್ಟಪಡುತ್ತಿದ್ದರು.

ಆಭರಣಗಳ ಲೋಕ ಬ್ರಹ್ಮಾಂಡದಷ್ಟು ದೊಡ್ಡದಿದೆ. ಕರಾವಳಿಯಲ್ಲಿ ನೂರಾರು ಸಮುದಾಯಗಳು ಇರುವುದರಿಂದ ತಮ್ಮದೇ ಆದ ಅನನ್ಯತೆಯನ್ನು ಸಾರುವ ಆಭರಣಗಳನ್ನು ಈಗಲೂ ಜನರು ಇಷ್ಟಪಡುತ್ತಾರೆ. ‘ಕೆಕ್ಕಿ ಕೆಬಿಕ್ ದಾಲ ಪಾಡೊನು ಮಗಾ’ (ಕತ್ತು ಕಿವಿಗೆ ಏನಾದರೂ ಹಾಕ್ಕೊ ಮಗಾ) ಎನ್ನುವುದು ಕರಾವಳಿಯಲ್ಲಿ ಹಿರಿಯ ಹೆಂಗಸರು ಯುವತಿಯರಿಗೆ ಹೇಳುವ ಕಿವಿಮಾತು. ಹೆಣ್ಣಾದವಳಿಗೆ ಇವಿಷ್ಟನ್ನು ಮನೆಯವರು ಕಲ್ಪಿಸಲೇಬೇಕು ಎಂಬುದು ಹಿರಿಯರ ನಂಬಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.