ಒಡವೆಗಳ ಆಯ್ಕೆ ಈಗ ಕೇವಲ ಹೆಣ್ಣುಮಕ್ಕಳ ಅಲಂಕಾರದ ವಿಷಯವಾಗಿ ಉಳಿದಿಲ್ಲ. ತೂಕ, ವಿನ್ಯಾಸ, ಬಳಕೆಯ ಅವಕಾಶ, ಬೆಲೆ ಮತ್ತು ಗುಣಮಟ್ಟದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡೇ ಒಡವೆಗಳ ಆಯ್ಕೆಗೆ ಮುಂದಾಗಬೇಕಾಗುತ್ತದೆ. ಘನವಾದ (ಹೆವಿ) ಒಡವೆ ಬೇಕು, ಇಂತಿಷ್ಟು ಬೆಲೆಯದ್ದೇ ಆಗಬೇಕು ಎಂಬ ಎರಡೇ ಮಾನದಂಡ ಇಟ್ಟುಕೊಂಡವರಿಗೆ ಆ ಒಡವೆ ಹೂಡಿಕೆಯ ಆಯ್ಕೆ ಮತ್ತು ಆಪದ್ಧನವಷ್ಟೇ ಆದೀತು.
ತೂಕ, ವಿನ್ಯಾಸ, ಬಳಕೆಯ ಅವಕಾಶಗಳ ಲೆಕ್ಕಾಚಾರದೊಂದಿಗೆ ಒಡವೆ ಖರೀದಿಸುವುದು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಬಳಕೆಯ ಅವಕಾಶಗಳ ಬಗ್ಗೆ ಲೆಕ್ಕಾಚಾರ ಹಾಕುವವರು ‘ಮಲ್ಟಿ ಪರ್ಪಸ್’, ‘ಮಲ್ಟಿ ಯೂಸೇಜ್’, ‘ಟೂ ಇನ್ ಒನ್’, ‘ತ್ರೀ ಇನ್ ಒನ್’ ಮತ್ತು ‘ಯುನಿಸೆಕ್ಸ್’ ಎಂಬ ಮಾನದಂಡ ಇಟ್ಟುಕೊಳ್ಳಬೇಕು. ಇದರಲ್ಲಿ ಮೊದಲ ನಾಲ್ಕು, ಒಂದೇ ಒಡವೆಯನ್ನು ಒಂದಕ್ಕಿಂತ ಹೆಚ್ಚು ಬಗೆಯಲ್ಲಿ ಧರಿಸುವ ಅವಕಾಶವನ್ನು ಸೂಚಿಸುತ್ತವೆ. ಯುನಿಸೆಕ್ಸ್ ಎಂದರೆ ಗಂಡು, ಹೆಣ್ಣು ಇಬ್ಬರೂ ಧರಿಸಬಹುದಾದ ಒಡವೆ.
ಲಘು ಒಡವೆಗಳಲ್ಲಿ ಇಂಥ ಅವಕಾಶಗಳು ಇದ್ದರೂ ಒಡವೆಯ ಬಾಳಿಕೆಯ ದೃಷ್ಟಿಯಿಂದ ಸ್ವಲ್ಪ ಘನವಾದುದನ್ನೇ ಆರಿಸುವುದು ಸೂಕ್ತ. ಒಂದೇ ಒಡವೆಯನ್ನು ಎರಡೋ, ಮೂರೋ ಬಗೆಯಲ್ಲಿ ಧರಿಸುವ ಅವಕಾಶವೆಂದರೆ ಹೇಗೆ ಅಂತೀರಾ? ಎರಡೂ ಬದಿಯಲ್ಲಿ ಪ್ರತ್ಯೇಕ ವಿನ್ಯಾಸವಿರುವ ‘ರಿವರ್ಸಿಬಲ್’ ನೆಕ್‌ಲೇಸ್‌ಗಳು, ಕಿವಿಯೋಲೆಗಳು ಚಾಲ್ತಿಗೆ ಬಂದು ಕೆಲವು ವರ್ಷಗಳು ಕಳೆದಿವೆ. ಇದರಲ್ಲಿ ಆಯ್ಕೆ ಅವಕಾಶಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.
ಎರಡು ಬದಿಗೆ ಎರಡು ವಿನ್ಯಾಸ
ಬಾಸ್ಕೆಟ್ ಕಿವಿಯೋಲೆಯಲ್ಲಿ ಒಂದು ಬದಿ ಬೆಳ್ಳಿಯದ್ದೂ ಇನ್ನೊಂದು ಬದಿಯಲ್ಲಿ ಚಿನ್ನದ ವಿನ್ಯಾಸವನ್ನೂ ಮಾಡಲಾಗುತ್ತದೆ. ಒಂದು ಬದಿಗೆ ಮುತ್ತಿನ ಹರಳು, ಮತ್ತೊಂದು ಬದಿಗೆ ಹವಳ ಅಥವಾ ಇತರ ರತ್ನಗಳ ವಿನ್ಯಾಸ ಮಾಡಿಸುವುದೂ ಇದೆ. ಇದಕ್ಕೆ ಆಯಾ ರತ್ನವುಳ್ಳ ನೆಕ್‌ಲೇಸ್, ಉಂಗುರ ಮತ್ತು ಬಳೆ ಧರಿಸಿದರೆ ಒಂದೇ ಓಲೆಯಲ್ಲಿ ಎರಡು ಸಮಾರಂಭಗಳಲ್ಲಿ ಮಿಂಚಬಹುದು. ಒಂದೇ ದಿನ ಎರಡೋ ಮೂರೋ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾದಾಗ ಅದರಲ್ಲೂ ಪರವೂರಿಗೆ ಹೋಗಬೇಕಾದಾಗ ಈ ಬಗೆಯ ಒಡವೆಗಳನ್ನು ಧರಿಸುವುದು ಸುರಕ್ಷಿತವೂ ಹೌದು. ಒಯ್ಯಲೂ ಸುಲಭ.
ಎರಡು ಬದಿಗೆ ಎರಡು ವಿನ್ಯಾಸದ ಟ್ರೆಂಡ್ ಹೊಸದೇನಲ್ಲ. ಆದರೆ ಈಗ ಜುಮುಕಿ, ಲೋಲಕ್, ಲೋಲಕ್‌ನಲ್ಲಿಯೇ ಜುಮುಕಿ, ತೂಗುವ ಸರಪಳಿ ವಿನ್ಯಾಸದಲ್ಲಿ ಎರಡೋ ಮೂರೋ ಜುಮುಕಿ ಹೀಗೆ ಹಲವು ಆಯ್ಕೆಗಳಿವೆ. ಪರಿಕಲ್ಪನೆಗಳೂ ವಿಭಿನ್ನ. ಕಿವಿಯೋಲೆಗಳಲ್ಲಿ ಪ್ರತಿವರ್ಷ ಹೊಸ ಟ್ರೆಂಡ್‌ಗಳು ಮತ್ತು ಪರಿಕಲ್ಪನೆಗಳು ಪರಿಚಯಗೊಳ್ಳುತ್ತಲೇ ಇವೆ. ಪ್ರತಿ ಜುಮುಕಿಯ ಒಳಗಿನ ಹುಕ್‌ನಲ್ಲಿ ಮತ್ತೊಂದನ್ನು ಸಿಕ್ಕಿಸಿರುವ ಕಾರಣ ಆಯಾ ಸಂದರ್ಭಕ್ಕೆ ತಕ್ಕುದಾಗಿ ಜುಮುಕಿ ಅಥವಾ ಲೋಲಕ್ ಧರಿಸಬೇಕು ಎಂದು ಯೋಚಿಸಿದರಾಯಿತು. ಎಲ್ಲ ಜುಮುಕಿಗಳನ್ನು ತೆಗೆದಿರಿಸಿ ಬರಿಯ ಹ್ಯಾಂಗಿಂಗ್ಸ್‌ನಂತೆ ಧರಿಸಿದರೆ ನಿಮ್ಮದೇ ಟ್ರೆಂಡ್ ಸೃಷ್ಟಿಸಿದಂತೆಯೂ ಆದೀತು.
ನೆಕ್‌ಲೇಸ್, ಬ್ರೇಸ್‌ಲೆಟ್ ಮತ್ತು ಕಿವಿಯೋಲೆಗಳಲ್ಲಿ ಮಲ್ಟಿಪಲ್ ಯೂಸೇಜ್ (ಬಹುವಿಧ ಆಯ್ಕೆ) ಅವಕಾಶಗಳು ಹೆಚ್ಚು ಇವೆ. ನೆಕ್‌ಲೇಸ್‌ನ ಚೈನ್ ಕಳಚಿ ಬ್ರೇಸ್‌ಲೆಟ್ ಆಗಿ ಬಳಸುವ, ಎರಡು ಕಿವಿಯೋಲೆಗಳನ್ನು ಜೋಡಿಸಿ ನೆಕ್‌ಲೇಸ್‌ಗೆ ಪದಕವಾಗಿ ಬಳಸುವುದು ಯಾರಿಗೆ ತಾನೇ ಇಷ್ಟವಾಗದು? ಹೀಗಾಗಿ ಈ ವಿನ್ಯಾಸಗಳಿಗೆ ಈಗ ಹೆಚ್ಚು ಬೇಡಿಕೆ ಇದೆ. ಆ್ಯಂಟಿಕ್ ನೆಕ್‌ಲೇಸ್‌ನ ನವಿಲು ವಿನ್ಯಾಸದ ಪದಕವನ್ನೋ, ವಜ್ರದ ನೆಕ್‌ಲೇಸ್‌ನ ಮಧ್ಯದ ಪದಕವನ್ನಷ್ಟೇ ಉಳಿಸಿ ತೂಗುವ ಇನ್ನೊಂದು ಪದಕವನ್ನು ಕಳಚಿ ಬ್ರೇಸ್‌ಲೆಟ್ ಮಾಡುವ ಉಪಾಯ ಎಷ್ಟು ಚೆನ್ನಾಗಿರುತ್ತದೆ! ಪೊಲ್ಕಿ ವಿನ್ಯಾಸದ ಕಿವಿಯೋಲೆಗಳೂ ಇದಕ್ಕೆ ಒಗ್ಗುತ್ತವೆ. ಸ್ಕ್ರೂನಂತಿರುವ ಕಿವಿಯೋಲೆಯ ಕಡ್ಡಿಯನ್ನು (ಬ್ರಿಜ್) ಕಳಚಿ ಎರಡರಲ್ಲಿರುವ ಹುಕ್‌ಗಳಿಂದ ಜೋಡಿಸಿದರೆ ಅತ್ಯಾಕರ್ಷಕವಾದ ಪೊಲ್ಕಿ ಪೆಂಡೆಂಟ್ ಸಿದ್ಧ!
ಆಯಾ ಸಂದರ್ಭದಲ್ಲಿ ಧರಿಸಿದ ಉಡುಪಿನ ಬಣ್ಣ ಮತ್ತು ವಿನ್ಯಾಸಕ್ಕೆ ತಕ್ಕಂತೆ ಒಡವೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ತುಂಬು ಕತ್ತಿನ ರವಿಕೆ ಅಥವಾ ಉಡುಪು ಧರಿಸಿದ್ದರೆ ಓಲೆ, ಬಳೆ/ಬ್ರೇಸ್‌ಲೆಟ್, ಉಂಗುರ ಮಾತ್ರ ಸಾಕಾಗುತ್ತದೆ. ಹಾಗಾಗಿ ನೆಕ್‌ಲೇಸನ್ನು ಬ್ರೇಸ್‌ಲೆಟ್‌ನಂತೆ ಹಾಕಿಕೊಳ್ಳಿ ಎಂಬ ಪರಿಕಲ್ಪನೆಯೇ ತುಂಬ ಸುಂದರವಾಗಿದೆ.
ಹಲವು ಎಳೆಗಳ ಹಾರವೂ ಬಹೂಪಯೋಗಿ ಆಗಬಹುದು. ಪ್ರತಿ ಎಳೆಯನ್ನೂ ಬೇರೆ ಬೇರೆ ಬಗೆಯಲ್ಲಿ, ಬೇರೆ ಬೇರೆ ಹರಳು ಅಥವಾ ರತ್ನಗಳಿಂದ ವಿನ್ಯಾಸ ಮಾಡಿಸಿ ಬಟ್ಟೆಯ ಬಣ್ಣಕ್ಕೆ ಹೊಂದುವ ಎಳೆಯನ್ನಷ್ಟೇ ಧರಿಸಿ. ಮಿಶ್ರ ಬಣ್ಣದ ಉಡುಗೆ ಅಥವಾ ಸೀರೆ ಉಟ್ಟರೆ ಅದಕ್ಕೆ ಹೊಂದುವ ಇಲ್ಲವೇ ಕಾಂಟ್ರಾಸ್ಟ್ ಬಣ್ಣದ ಎಳೆಗಳನ್ನು ಜೋಡಿಸಿ ಧರಿಸಿ. ಉಂಗುರಗಳಲ್ಲೂ ಇಂತಹ ಚಮತ್ಕಾರ ಮಾಡಲಾಗುತ್ತಿದೆ. ಒಂದು ಉಂಗುರ ಒಂದೇ ಬೆರಳಿಗೆ ಎಂಬುದು ಹಳೆ ಸ್ಟೈಲು. ಈಗ ಎರಡೋ ಮೂರೋ ಬೆರಳಿಗೆ ಒಂದೇ ಉಂಗುರ.
ಮಲ್ಟಿ ಪರ್ಪಸ್ ಅಥವಾ ಮಲ್ಟಿ ಯೂಸೇಜ್ ಹಾರಗಳನ್ನು ಮಹಿಳೆಯರಂತೆ ಪುರುಷರೂ ಧರಿಸಬಹುದು. ಇದು ಯೂನಿಸೆಕ್ಸ್ ಪರಿಕಲ್ಪನೆ. ಒಂದೇ ಒಡವೆಯನ್ನು ಧರಿಸಿ ಬೇಜಾರಾಗಿದೆ ಎಂದು ಬೇಜಾರು ಮಾಡಿಕೊಳ್ಳುವ ಬದಲು ಒಂದೇ ಒಡವೆಯನ್ನು ಬೇರೆ ಬೇರೆ ಬಗೆಯಲ್ಲಿ ಧರಿಸುವ ಜಾಣ್ಮೆ ಮೆರೆಯಬಹುದು.
ಕಡಿಮೆ ತೂಕದ ಒಡವೆಗಳ ಜಮಾನ
ಒಡವೆ ಎಂದರೆ ಘನವಾಗಿರಬೇಕು ಎಂಬ ಪರಿಕಲ್ಪನೆ ಈಗ ಇಲ್ಲ. ವಿನ್ಯಾಸ ಭರ್ಜರಿಯಾಗಿರಬೇಕು ಎಂಬುದಷ್ಟೇ ಹೆಚ್ಚಿನವರ ಬಯಕೆ. ಕಡಿಮೆ ತೂಕದ ಒಡವೆಗಳ ಜಮಾನ ಶುರುವಾಗಿ ನಾಲ್ಕೈದು ವರ್ಷಗಳಾಗಿವೆ. ಆದರೆ ಬೇಡಿಕೆ ಕುಂದಿಲ್ಲ. ಇದು, ಹೊಸತನಗಳಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ.
ಕೆಲ ವರ್ಷಗಳ ಹಿಂದೆ, ಲಘು ಒಡವೆ ಎಂದರೆ ‘ಕೂರ್ಗ್ ಹಾರ’ ಎಂಬ ಅಭಿಪ್ರಾಯ ಸಾಮಾನ್ಯವಾಗಿತ್ತು. ಆದರೆ, ಈಗ ವಿನ್ಯಾಸದಲ್ಲಿ ಭರ್ಜರಿಯಾಗಿರುವ, ಆದರೆ ಕಡಿಮೆ ತೂಕದ ಆಭರಣಗಳ ಆಯ್ಕೆ ಅವಕಾಶ ಹೇರಳವಾಗಿದೆ. ಕೂರ್ಗ್ ಹಾರಗಳು ಮಣಿಯ ಆಕಾರ ಮತ್ತು ಚಿತ್ತಾರದಿಂದ ಮನಸೂರೆಗೊಳ್ಳುವಂತಿರುತ್ತವೆ.
ಪುರುಷರು ಮತ್ತು ಮಹಿಳೆಯರು ಧರಿಸಬಹುದಾದ ಸರಪಳಿಯಂತಹ ಚೈನ್‌ಗಳು ನೋಡಲು ಅಬ್ಬಾ ಅನಿಸುವಂತಿರುತ್ತವೆ. ಆದರೆ ತೂಕ ಅತ್ಯಂತ ಕಡಿಮೆ ಇರುತ್ತದೆ. ಒಳಗೆ ಟೊಳ್ಳಾಗಿರುವ ಗುಂಡುಗಳ ಹಾರ (ಬಾಲ್ ಚೈನ್), ಕೂರ್ಗ್ ಹಾರ, ಮೋಹನ ಮಾಲೆಗಳೂ ಮೋಹಕವಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.