ADVERTISEMENT

ಮಾರುಕಟ್ಟೆಗೆ ಮಾವು;ಬೆಲೆ ದುಬಾರಿ

ಅಪೂಸ್‌ ಹಣ್ಣು ಕೆ.ಜಿಗೆ ₹400ರಿಂದ ₹500 ದರ; ಖರೀದಿಗೆ ಜನರ ಹಿಂದೇಟು

ಹುಚ್ಚೇಶ್ವರ ಅಣ್ಣಿಗೇರಿ
Published 28 ಮಾರ್ಚ್ 2019, 19:46 IST
Last Updated 28 ಮಾರ್ಚ್ 2019, 19:46 IST
ಗದುಗಿನ ಜನತಾ ಬಜಾರ್‌ಗೆ ಬಂದಿರುವ ಮಾವಿನ ಹಣ್ಣು
ಗದುಗಿನ ಜನತಾ ಬಜಾರ್‌ಗೆ ಬಂದಿರುವ ಮಾವಿನ ಹಣ್ಣು   

ಗದಗ: ಇಲ್ಲಿನ ಮಾರುಕಟ್ಟೆಗೆ ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಆವಕ ಪ್ರಾರಂಭವಾಗಿದ್ದು, ದುಬಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಅಪೂಸ್‌, ಕಲ್ಮಿ, ಬದಾಮಿ (ಅಲ್ಫಾನ್ಸೋ), ಮಲ್ಗೂಬಾ ತಳಿಯ ಮಾವಿನ ಹಣ್ಣುಗಳು ಕಳೆದೊಂದು ವಾರದಿಂದ ನಗರದ ಮಾರುಕಟ್ಟೆಗೆ ಬರುತ್ತಿವೆ. ರಸಪೂರಿ ಹಣ್ಣು ಸಹ ಗೋದಾಮಿನಲ್ಲಿ ದಾಸ್ತಾನಾಗಿದೆ. ಇಲ್ಲಿನ ಜನತಾ ಬಜಾರನಲ್ಲಿ ವ್ಯಾಪಾರಿಗಳು ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಬಹು ಬೇಡಿಕೆ ಇರುವ ಅಪೂಸ್‌ ತಳಿಯ ಮಾವಿನ ಹಣ್ಣಿಗೆ ಸದ್ಯ ಕೆ.ಜಿಗೆ ₹400ರಿಂದ ₹500ರವರೆಗೆ ದರ ಇದೆ.

ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು, ಸ್ಥಳೀಯವಾಗಿ ಮಾರುಕಟ್ಟೆಗೆ ಆವಕವಾಗುವ ಬದಾಮಿ ತಳಿಗೆ ಕೆ.ಜಿಗೆ ₹150ರಿಂದ ₹200ವರೆಗೆ ಬೆಲೆ ಇದೆ. ನಗರದಲ್ಲಿ ಮಾವಿನ ಹಣ್ಣುಗಳನ್ನು ಕೆ.ಜಿ ಲೆಕ್ಕಕ್ಕಿಂತ ಹೆಚ್ಚಾಗಿ ಡಜನ್‌ ಲೆಕ್ಕದಲ್ಲಿ ಖರೀದಿಸುತ್ತಾರೆ. ಒಂದು ಡಜನ್‌ ಅಪೂಸ್‌ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು ₹600ರಿಂದ ₹800 ದರ ಹೇಳುತ್ತಿದ್ದಾರೆ.

ADVERTISEMENT

ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದ ಮಾವು, ಈ ಬಾರಿ ಮಾರ್ಚ್‌ ಅಂತ್ಯದಲ್ಲೇ ಪ್ರಾರಂಭದಲ್ಲೇ ಮಾರುಕಟ್ಟೆಗೆ ಬಂದಿದೆ. ಮಳೆ ಕೊರತೆಯಿಂದಾಗಿ ಇಳುವರಿಯೂ ಕುಸಿದಿದೆ. ಗದುಗಿನ ಹುಲಕೋಟಿ, ಕುರ್ತಕೋಟಿ, ರೋಣ, ಮುಂಡರಗಿ, ಡಂಬಳ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ. ಬದಾಮಿ (ಅಲ್ಫಾನ್ಸೋ), ದಶೇರಿ, ತೋತಾಪುರಿ, ಮಲ್ಲಿಕಾ ತಳಿಯ ಮಾವು ಬೆಳೆಯಲಾಗಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆಯಾಗಿದೆ. ಮಳೆಯ ಕೊರತೆ, ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಕಾಡಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಕಲ್ಮಿ, ಸಿಂಧೂರ, ಬದಾಮಿ, ಮಲ್ಲಿಕಾ, ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗುತ್ತಿದೆ. ಒಂದು ಡಜನ್‌ ಮಾವಿನ ಹಣ್ಣು ಕೆಜಿಗೆ ₹200 ರಿಂದ 250 ರವರೆಗೆ ಮಾರಾಟ ಮಾಡಲಾಗುತ್ತಿದೆ.

*ಮಾವಿನ ಸೀಜನ್‌ ಈಗಷ್ಟೇ ಆರಂಭವಾಗಿದೆ. ಸದ್ಯ ಆವಕ ಕಡಿಮೆ ಇದ್ದು, ಬೆಲೆ ಹೆಚ್ಚಿದೆ. ಪ್ರತಿ ದಿನ ಸರಾಸರಿ 20 ಡಜನ್‌ ಹಣ್ಣುಗಳು ಮಾರಾಟವಾಗುತ್ತಿವೆ

–ಮೌಲಾಸಾಬ್ ನದಾಫ್, ಹಣ್ಣಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.