ADVERTISEMENT

ವಿದ್ಯುತ್‌ಚಾಲಿತ ವಾಹನ: ₹10 ಸಾವಿರ ಕೋಟಿ

ಪಿಟಿಐ
Published 1 ಮಾರ್ಚ್ 2019, 18:26 IST
Last Updated 1 ಮಾರ್ಚ್ 2019, 18:26 IST
ವಿದ್ಯುತ್‌ ಚಾಲಿತ ಕಾರ್‌
ವಿದ್ಯುತ್‌ ಚಾಲಿತ ಕಾರ್‌   

ನವದೆಹಲಿ: ವಿದ್ಯುತ್‌ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆ ಉತ್ತೇಜಿಸುವ 2ನೆ ಹಂತದ ₹ 10 ಸಾವಿರ ಕೋಟಿ ಮೊತ್ತದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಈ ವರ್ಷದ ಏಪ್ರಿಲ್‌ನಿಂದ ಮುಂದಿನ ಮೂರು ವರ್ಷಗಳವರೆಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಸದ್ಯಕ್ಕೆ ಚಾಲ್ತಿಯಲ್ಲಿ ಇರುವ, ವಿದ್ಯುತ್‌ ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಮತ್ತು ಬಳಕೆಯನ್ನು ತ್ವರಿತಗೊಳಿಸುವ (ಎಫ್‌ಎಎಂಇ) ಯೋಜನೆಯ ವಿಸ್ತೃತ ಕಾರ್ಯಕ್ರಮ ಇದಾಗಿದೆ. ಮೊದಲ ಕಾರ್ಯಕ್ರಮವನ್ನು 2015ರ ಏಪ್ರಿಲ್‌ನಿಂದ ಜಾರಿಗೆ ತರಲಾಗಿತ್ತು. ಇದಕ್ಕಾಗಿ ₹ 895 ಕೋಟಿ ನೆರವು ನೀಡಲಾಗಿತ್ತು.

‘ವಿದ್ಯುತ್‌ ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ಬಳಕೆಯನ್ನು ತ್ವರಿತಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಂತಹ ವಾಹನಗಳ ಖರೀದಿಗೆ ಉತ್ತೇಜನ ನೀಡುವುದು, ಚಾರ್ಜಿಂಗ್‌ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಹಣಕಾಸು ನೆರವು ಕಲ್ಪಿಸಿಕೊಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ADVERTISEMENT

ಸಮೂಹ ಸಾರಿಗೆ ವ್ಯವಸ್ಥೆಯ ವಿದ್ಯುತ್ತೀಕರಣ, ರಾಜ್ಯ ಮತ್ತು ನಗರಗಳ ಸಾರಿಗೆ ನಿಗಮಗಳಿಗೆ ವಿದ್ಯುತ್‌ ಚಾಲಿತ ಬಸ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲೂ ಉದ್ದೇಶಿಸಲಾಗಿದೆ.

ಸಾರ್ವಜನಿಕ ಸಾರಿಗೆ ಉದ್ದೇಶಕ್ಕೆ ಬಳಸುವ ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುವುದು. ದ್ವಿಚಕ್ರ ವಾಹನ ವಿಷಯದಲ್ಲಿ ಖಾಸಗಿ ವಾಹನಗಳ ಬಳಕೆ ಉತ್ತೇಜಿಸಲು ಗಮನ ನೀಡಲಾಗುವುದು.

ಈ ಕಾರ್ಯಕ್ರಮದಡಿ 10 ಲಕ್ಷ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ, 5 ಲಕ್ಷ ತ್ತಿಚಕ್ರ ವಾಹನ, 55 ಸಾವಿರ ನಾಲ್ಕು ಚಕ್ರದ ವಾಹನ ಮತ್ತು 7 ಸಾವಿರ ಬಸ್‌ಗಳಿಗೆ ನೆರವು ನೀಡಲು ಉದ್ದೇಶಿಸಲಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಿಸಲು ಮತ್ತು ಇಂಧನ ಸುರಕ್ಷತೆ ಹೆಚ್ಚಿಸಲೂ ಈ ಕಾರ್ಯಕ್ರಮ ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.