ADVERTISEMENT

13.5 ಕೋಟಿ ಜನ ಬಡತನದಿಂದ ಹೊರಕ್ಕೆ; ನೀತಿ ಆಯೋಗದ ವರದಿಯಲ್ಲಿ ಉಲ್ಲೇಖ

ಕೇರಳದಲ್ಲಿ ಬಡತನ ಅತ್ಯಂತ ಕಡಿಮೆ

ಪಿಟಿಐ
Published 17 ಜುಲೈ 2023, 15:30 IST
Last Updated 17 ಜುಲೈ 2023, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2015–16ರಿಂದ 2019–21ರ ನಡುವಿನ ಅವಧಿಯಲ್ಲಿ ದೇಶದಲ್ಲಿ 13.5 ಕೋಟಿ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗದ ವರದಿಯೊಂದು ಹೇಳಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟವನ್ನು ಮಾನದಂಡಗಳನ್ನಾಗಿ ಇರಿಸಿಕೊಂಡು ವರದಿಯು ಈ ಮಾತು ಹೇಳಿದೆ.

ಉತ್ತರ ಪ್ರದೇಶ, ಬಿಹಾರ, ಒಡಿಶಾ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಡವರ ಸಂಖ್ಯೆಯು ತೀವ್ರಗತಿಯಲ್ಲಿ ಕಡಿಮೆಯಾಗಿದೆ. ರಾಷ್ಟ್ರೀಯ ಬಹುಆಯಾಮಗಳ ಬಡತನ ಸೂಚ್ಯಂಕದ (ಎಂಪಿಐ) ಎರಡನೆಯ ವರದಿಯ ಪ್ರಕಾರ, ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನವು ತೀವ್ರಗತಿಯಲ್ಲಿ ಕಡಿಮೆಯಾಗಿದೆ.

ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ ಅವರು ಈ ವರದಿಯನ್ನ ಬಿಡುಗಡೆ ಮಾಡಿದ್ದಾರೆ.

ADVERTISEMENT

ನೈರ್ಮಲ್ಯ ಸುಧಾರಣೆ, ಪೌಷ್ಟಿಕಾಂಶಯುಕ್ತ ಆಹಾರ ಲಭ್ಯತೆ, ಅಡುಗೆ ಅನಿಲ ಲಭ್ಯತೆ, ಹಣಕಾಸಿನ ಒಳಗೊಳ್ಳುವಿಕೆ, ಕುಡಿಯುವ ನೀರಿನ ಪೂರೈಕೆ ಮತ್ತು ವಿದ್ಯುತ್ ಪೂರೈಕೆಯಲ್ಲಿ ಸರ್ಕಾರವು ಕೈಗೊಂಡ ಕ್ರಮಗಳು ಬಡತನ ಕಡಿಮೆಯಾಗಲು ಕಾರಣ ಎಂದು ವರದಿ ಹೇಳಿದೆ.

ಬಹುಆಯಾಮಗಳ ಬಡತನವನ್ನು ಕನಿಷ್ಠಪಕ್ಷ ಅರ್ಧದಷ್ಟು ತಗ್ಗಿಸಬೇಕು ಎಂಬ ಗುರಿಯನ್ನು 2030ರ ಗಡುವಿಗೆ ಮೊದಲೇ ತಲುಪುವ ಹಾದಿಯಲ್ಲಿ ಭಾರತ ಇದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ.

ವರದಿಯ ಪ್ರಕಾರ ಕೇರಳ ರಾಜ್ಯದಲ್ಲಿ ಬಡವರ ಪ್ರಮಾಣವು ಅತ್ಯಂತ ಕಡಿಮೆ (ಶೇ 0.55) ಇದೆ. ಬಿಹಾರದಲ್ಲಿ ಬಡವರ ಪ್ರಮಾಣ ದೇಶದಲ್ಲೇ ಅತಿಹೆಚ್ಚು (ಶೇ 33.76).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.