ADVERTISEMENT

ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆ ಆರಂಭ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:25 IST
Last Updated 26 ಫೆಬ್ರುವರಿ 2024, 15:25 IST
ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು 
ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು    

ಬೆಂಗಳೂರು: ರಾಜ್ಯದಲ್ಲಿ ಎಕ್ಸಿಸ್‌ ಬ್ಯಾಂಕ್‌ನ 21 ಹೊಸ ಶಾಖೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಗರದಲ್ಲಿ ಸೋಮವಾರ ಉದ್ಘಾಟಿಸಿದರು.

ರಾಜ್ಯದಲ್ಲಿ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 324ಕ್ಕೇರಿದೆ. ಬೆಂಗಳೂರು, ಉಡುಪಿ, ವಿಜಯಪುರ, ಹಾವೇರಿ, ಹಾಸನ, ಕೊಪ್ಪಳ, ತುಮಕೂರು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲಾ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೊಸ ಶಾಖೆಗಳು ಕಾರ್ಯಾರಂಭ ಮಾಡಿವೆ. ಎಕ್ಸಿಸ್‌ ಬ್ಯಾಂಕ್‌ 1,525ಕ್ಕೂ ಹೆಚ್ಚು ಎಟಿಎಂಗಳನ್ನು ಹೊಂದಿದೆ. 

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಮಿತಾಭ್ ಚೌಧರಿ ಮಾತನಾಡಿ, ‘ರಾಜ್ಯವು ನೂರಾರು ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಿಗಳಿಗೆ ನೆಲೆಯಾಗಿದೆ. ಬ್ಯಾಂಕ್‌ ಹೆಚ್ಚಿನ ಗ್ರಾಹಕರನ್ನು ತಲುಪಲು ರಾಜ್ಯದಲ್ಲಿ ಈ ಹೊಸ ಶಾಖೆಗಳನ್ನು ಆರಂಭಿಸಿದೆ’ ಎಂದರು.

ADVERTISEMENT

ಈ ಪೈಕಿ 9 ಶಾಖೆಗಳು ಮಹಾನಗರಗಳಲ್ಲಿ ಕಾರ್ಯಾರಂಭ ಮಾಡಿವೆ. ನಾಲ್ಕು ಶಾಖೆಗಳು ಜಿಲ್ಲಾ ಕೇಂದ್ರಗಳಲ್ಲಿ, ಅರೆ ನಗರ ಪ್ರದೇಶದಲ್ಲಿ ಮೂರು ಶಾಖೆಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಎರಡು ಮತ್ತು ಮೂರು ಶಾಖೆಗಳನ್ನು ಬ್ಯಾಂಕ್‌ಗಳು ಇಲ್ಲದಿರುವ ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಶಾಖೆಗಳಿಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಗ್ರೂಪ್ ಎಕ್ಸಿಕ್ಯೂಟಿವ್ ರವಿ ನಾರಾಯಣ್‌ ಮಾತನಾಡಿ, ಈ ಶಾಖೆಗಳ ಉದ್ಘಾಟನೆಯು ಬ್ಯಾಂಕ್‌ನ ವ್ಯವಹಾರಗಳನ್ನು ಸಶಕ್ತಗೊಳಿಸಲು, ಆರ್ಥಿಕ ಸೇರ್ಪಡೆಗೆ ಅನುಕೂಲ ಕಲ್ಪಿಸಲಿವೆ ಎಂದರು.

ಬ್ಯಾಂಕ್‌ ಕರ್ನಾಟಕದ ಆರ್ಥಿಕ ಬೆಳವಣಿಗೆ, ಸಮುದಾಯದ ಅಭಿವೃದ್ಧಿ ಮತ್ತು ಪರಿಸರದ ಸುಸ್ಥಿರತೆಗೆ ಉತ್ತೇಜನ ನೀಡಲು ಬದ್ಧವಾಗಿದೆ. ಬ್ಯಾಂಕ್ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಶಾಖೆಯ ವಹಿವಾಟು ಶೇ 92ರಷ್ಟು ಡಿಜಿಟಲ್ ಪ್ಲಾಟ್‌ಫಾರ್ಮ್‌ ಮೂಲಕ ನಡೆಯುತ್ತದೆ. ಇದರಿಂದ ಕಾಗದದ ಬಳಕೆಯಲ್ಲಿ ಗಣನೀಯ ಇಳಿಕೆ ಮತ್ತು ಪರಿಸರ ಸಂರಕ್ಷಣೆಗೆ ಗಮನಾರ್ಹ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಐ.ಟಿ, ಬಿ.ಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಪ್ರಿಯಾಂಕ್ ಖರ್ಗೆ, ಎಕ್ಸಿಸ್‌ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಸುಬ್ರತ್‌ ಮೊಹಂತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.