ನವದೆಹಲಿ: ಜನಸಾಮಾನ್ಯರಿಗೆ ಹೊಸ ವರ್ಷದ ಕೊಡುಗೆಯಾಗಿ, ಕೇಂದ್ರ ಸರ್ಕಾರವು 23 ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಗಳನ್ನು (ಜಿಎಸ್‌ಟಿ) ಕಡಿತಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಸಿನಿಮಾ ಟಿಕೆಟ್, ಟೆಲಿವಿಷನ್, ಮಾನಿಟರ್ ಸೇರಿದಂತೆ ಆಯ್ದ ಸರಕುಗಳಿಗೆ ಗ್ರಾಹಕರು ಇನ್ನು ಮುಂದೆ ಕಡಿಮೆ ತೆರಿಗೆ ಪಾವತಿಸಬಹುದಾಗಿದೆ. ಹೊಸ ದರಗಳು ಮಂಗಳವಾರದಿಂದಲೇ (ಜ. 1) ಜಾರಿಗೆ ಬಂದಿವೆ.
ಗರಿಷ್ಠ ಪ್ರಮಾಣದ ತೆರಿಗೆ ಮಟ್ಟವಾದ ಶೇ 28ರ ದರಗಳಲ್ಲಿ ಬದಲಾವಣೆ ಮಾಡಲಾಗಿತ್ತು. ವಿಲಾಸಿ, ಆರೋಗ್ಯಕ್ಕೆ ಹಾನಿಕರ ಎಂದು ಪರಿಭಾವಿಸಲಾದ ಉತ್ಪನ್ನಗಳು, ಸಿಮೆಂಟ್, ದೊಡ್ಡ ಪರದೆಯ ಟಿವಿ, ಏರ್ ಕಂಡೀಷನರ್ ಮತ್ತು ಡಿಷ್‌ವಾಷರ್ಸ್‌ಗಳಿಗೆ ಮಾತ್ರ ಗರಿಷ್ಠ ಮಟ್ಟದ ದರಗಳನ್ನು ಸೀಮಿತಗೊಳಿಸಲಾಗಿದೆ.
ಗಿಯರ್ ಬಾಕ್ಸ್, ಬಳಸಿದ ಟೈರ್, ಲಿಥಿಯಂ ಐಯಾನ್ ಬ್ಯಾಟರಿಗಳ ಪವರ್ ಬ್ಯಾಂಕ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ಕ್ಯಾಮೆರಾ ರಿಕಾರ್ಡರ್ ಮತ್ತಿತರ ಸರಕುಗಳ ಮೇಲಿನ ತೆರಿಗೆಗಳನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸಲಾಗಿದೆ.
₹ 100ರವರೆಗಿನ ಸಿನಿಮಾ ಟಿಕೆಟ್‌ನ ತೆರಿಗೆಯನ್ನು ಶೇ 18 ರಿಂದ ಶೇ 12ಕ್ಕೆ ಹಾಗೂ ₹ 100ಕ್ಕಿಂತ ಹೆಚ್ಚಿನ ಮೊತ್ತದ ಟಿಕೆಟ್‌ಗೆ ಶೇ 28 ರಿಂದ ಶೇ 18ಕ್ಕೆ ಇಳಿಸಲಾಗಿದೆ.
ಅಂಗವಿಕಲರು ಬಳಸುವ ವಾಹನಗಳ ಬಿಡಿಭಾಗಗಳ ಮೇಲಿನ ಶೇ 28ರ ದರವನ್ನು ಶೇ 5ಕ್ಕೆ ಇಳಿಸಲಾಗಿದೆ. ಸರಕು ಸಾಗಿಸುವ ವಾಹನಗಳಥರ್ಡ್‌ಪಾರ್ಟಿ ವಿಮೆ ಪ್ರೀಮಿಯಂ ಮೇಲಿನ ತೆರಿಗೆಯನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲಾಗಿದೆ. ವಿಶೇಷ ವಿಮಾನದಲ್ಲಿ ಯಾತ್ರೆ ಕೈಗೊಳ್ಳುವುದಕ್ಕೆ ಶೇ 5ರಷ್ಟು ಜಿಎಸ್‌ಟಿ ಅನ್ವಯಗೊಳ್ಳಲಿದೆ.
ಊರುಗೋಲು, ನೈಸರ್ಗಿಕ ಬಿರಡೆ, ಹಾರುಬೂದಿಯ ಇಟ್ಟಂಗಿ, ಅಮೃತಶಿಲೆ ಮೇಲಿನ ತೆರಿಗೆಯನ್ನುಶೇ 5ಕ್ಕೆ ತಗ್ಗಿಸಲಾಗಿದೆ.ಮ್ಯೂಸಿಕ್ ಬುಕ್ಸ್, ಮತ್ತು ಪ್ರಧಾನಮಂತ್ರಿ ಜನಧನ ಯೋಜನೆಯಡಿ ಆರಂಭಿಸಲಾಗುವ ಸಾಮಾನ್ಯ ಉಳಿತಾಯ ಖಾತೆಗೆ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.