ನವದೆಹಲಿ: ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹4.20 ಕೋಟಿ ಬಂಪರ್ ಲಾಭಾಂಶ ಲಭಿಸಿದೆ.
ಏಕಾಗ್ರ, ನಾರಾಯಣಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಹಾಗೂ ಅಪರ್ಣಾ ಕೃಷ್ಣನ್ ಅವರ ಪುತ್ರ.
ಕಳೆದ ಮಾರ್ಚ್‌ನಲ್ಲಿ ನಾರಾಯಣಮೂರ್ತಿ ಅವರು ತಮ್ಮ ಮೊಮ್ಮಗನಿಗೆ ₹240 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಕಂಪನಿಯ ಫಲಿತಾಂಶ ಪ್ರಕಟವಾಗಿದ್ದು, ಪ್ರತಿ ಷೇರಿಗೆ ₹28 ಲಾಭಾಂಶ ಘೋಷಿಸಲಾಗಿದೆ.
ಹಾಗಾಗಿ, ಏಕಾಗ್ರಗೆ ಇಷ್ಟು ಮೊತ್ತದ ಲಾಭಾಂಶ ಸಿಕ್ಕಿದೆ. ದೇಶದ ಎರಡನೇ ಅತಿದೊಡ್ಡ ಐ.ಟಿ ಕಂಪನಿಯಾದ ಇನ್ಫೊಸಿಸ್‌ನಲ್ಲಿ ಷೇರು ಹೊಂದುವ ಮೂಲಕ ಈ ಮಗು ಕೋಟ್ಯಧಿಪತಿಗಳ ಸಾಲಿಗೆ ಸೇರ್ಪಡೆಯಾಗಿದೆ.
ಪ್ರತಿ ಷೇರಿಗೆ ₹20 ಅಂತಿಮ ಲಾಭಾಂಶ ಹಾಗೂ ಹೆಚ್ಚುವರಿಯಾಗಿ ₹8 ವಿಶೇಷ ಲಾಭಾಂಶ ನೀಡಲು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯು ನಿರ್ಧರಿಸಿದೆ.
ಮೇ 31ರಂದು ನಡೆಯುವ ಕಂಪನಿಯ ವಾರ್ಷಿಕ ಸಭೆಯಲ್ಲಿ ಇಷ್ಟು ಲಾಭಾಂಶ ವಿತರಣೆಗೆ ಅನುಮೋದನೆ ಪಡೆಯಲಿದ್ದು, ಜುಲೈ 1ರಂದು ವಿತರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಅವರಿಗೆ ಏಕಾಗ್ರ ಮೂರನೇ ಮೊಮ್ಮಗು. ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.