ADVERTISEMENT

ಮತ್ತೆ 50 ವಿಮಾನಗಳಿಗೆ ಬಾಂಬ್‌ ಬೆದರಿಕೆ; ₹600 ಕೋಟಿ ನಷ್ಟ

ಪಿಟಿಐ
Published 23 ಅಕ್ಟೋಬರ್ 2024, 0:08 IST
Last Updated 23 ಅಕ್ಟೋಬರ್ 2024, 0:08 IST
   

ನವದೆಹಲಿ: ವಿಮಾನಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿರುವುದು ಮುಂದುವರಿದಿದ್ದು, ಮಂಗಳವಾರ ಒಂದೇ ದಿನ ಮತ್ತೆ 50 ವಿಮಾನಗಳಿಗೆ ಬೆದರಿಕೆಗಳು ಬಂದಿವೆ.

ಕಳೆದ 9 ದಿನಗಳಲ್ಲಿ 170 ವಿಮಾನಗಳಿಗೆ ಬಂದಿರುವ ಬೆದರಿಕೆ ಯಿಂದ ವಿಮಾನ ಯಾನ ಸಂಸ್ಥೆಗಳಿಗೆ ಅಂದಾಜು ₹600 ಕೋಟಿ ನಷ್ಟ ಆಗಿದೆ ಎಂದು ದೇಶೀಯ ವಿಮಾನಯಾನ ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡಿದ್ದ ಇಬ್ಬರು ಅಧಿಕಾರಿಗಳು ‘ಪಿಟಿಐ’ಗೆ ತಿಳಿಸಿದ್ದಾರೆ.

ದೇಶೀಯ ವಿಮಾನಯಾನದಲ್ಲಿ ಒಂದು ವಿಮಾನಕ್ಕೆ ಸುಮಾರು ₹ 1.5 ಕೋಟಿ ಮತ್ತು ಅಂತರರಾಷ್ಟ್ರೀಯ ವಿಮಾನಯಾನದಲ್ಲಿ ಒಂದು ವಿಮಾನಕ್ಕೆ ಸುಮಾರು ₹5 ಕೋಟಿಯಿಂದ
₹5.50 ಕೋಟಿ ವೆಚ್ಚವಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು ₹600 ಕೋಟಿ ನಷ್ಟವನ್ನು ಅವರು ಅಂದಾಜಿಸಿದ್ದಾರೆ.

ADVERTISEMENT

ಇಂಧನ ಮತ್ತು ವಿಮಾನ ನಿಲ್ದಾಣದ ಪಾರ್ಕಿಂಗ್ ಶುಲ್ಕಗಳಂತಹ ನೇರ ವೆಚ್ಚಗಳ ಹೊರತಾಗಿ, ಇಂತಹ ಅಡೆತಡೆಗಳಿಂದಾಗಿ ಫ್ಲೈಟ್ ನೆಟ್‌ವರ್ಕ್‌ನ ಮೇಲೆ ಒಟ್ಟಾರೆ ಪರಿಣಾಮ ಬೀರುವಂತಹ ಪರೋಕ್ಷ ವೆಚ್ಚಗಳೂ ಇವೆ. ಹಾಗಾಗಿ, ನಷ್ಟದ ಅಂದಾಜು ಇನ್ನೂ ಹೆಚ್ಚಿರಬಹುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಸೋಮವಾರ ರಾತ್ರಿಯಿಂದ ಬಂದಿರುವ ಬೆದರಿಕೆ ಸಂದೇಶಗಳ ಸಂಖ್ಯೆ 24 ತಾಸುಗಳಲ್ಲಿ 80ಕ್ಕೆ ತಲುಪಿದೆ. ಏರ್ ಇಂಡಿಯಾ ಮತ್ತು ಇಂಡಿಗೊದ ತಲಾ 13 ವಿಮಾನಗಳು, ಆಕಾಸಾ ಏರ್‌ನ 12ಕ್ಕೂ ಹೆಚ್ಚು ವಿಮಾನಗಳು ಹಾಗೂ ವಿಸ್ತಾರಾದ 11 ವಿಮಾನಗಳಿಗೆ ಮಂಗಳವಾರ ಬಾಂಬ್ ಬೆದರಿಕೆಯ ಸಂದೇಶಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಗೊ ಸಂಸ್ಥೆಯ 13 ವಿಮಾನ ಗಳಿಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದ್ದು, ಇದರಲ್ಲಿ ಬೆಂಗಳೂರು–ಲಖನೌ, ಕೋಲ್ಕತ್ತ–ಬೆಂಗಳೂರು ನಡುವೆ ಸಂಚರಿಸಬೇಕಿದ್ದ ವಿಮಾನಗಳು ಸೇರಿವೆ ಎಂದು ಇಂಡಿಗೊ ವಕ್ತಾರರು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಂಗಳವಾರ ಕೆಲವು ವಿಮಾನ ಗಳಿಗೆ ಭದ್ರತಾ ಎಚ್ಚರಿಕೆಗಳು ಬಂದಿವೆ. ಸ್ಥಳೀಯ ಅಧಿಕಾರಿಗಳ ಸಮನ್ವಯದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಸಂಸ್ಥೆಯು ತೆಗೆದುಕೊಂಡಿದೆ’ ಎಂದು ಆಕಾಸಾ ಏರ್ ವಕ್ತಾರರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಏರ್ ಇಂಡಿಯಾ, ಇಂಡಿಗೊ ಮತ್ತು ವಿಸ್ತಾರಾದ ತಲಾ 10 ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಜಿದ್ದಾಕ್ಕೆ ಹೋಗುವ ಇಂಡಿಗೊದ ಮೂರು ವಿಮಾನಗಳನ್ನು ಸೌದಿ ಅರೇಬಿಯಾದ ರಿಯಾದ್‌ ಮತ್ತು ಕತಾರ್‌ನ ದೋಹಾ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.