ನವದೆಹಲಿ: ಭಾರತೀಯ ವಾಯುಪಡೆಗೆ ತೇಜಸ್ ಎಂಕೆ–1ಎ ಸರಣಿಯ 97 ಲಘು ಯುದ್ಧ ವಿಮಾನಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್), ಕೇಂದ್ರ ರಕ್ಷಣಾ ಸಚಿವಾಲಯವು ಟೆಂಡರ್ ನೀಡಿದೆ.
ಈ ಟೆಂಡರ್‌ನ ಒಟ್ಟು ಮೊತ್ತವು ₹67 ಸಾವಿರ ಕೋಟಿ ಆಗಿದೆ. ಶತ್ರುಗಳ ಮೇಲೆ ಆಕ್ರಮಣಕಾರಿ ವಾಯು ದಾಳಿ ನಡೆಸುವಲ್ಲಿ ಸ್ವದೇಶಿ ನಿರ್ಮಿತ ತೇಜಸ್ ವಿಮಾನವು ಮುಂಚೂಣಿಯಲ್ಲಿದೆ. ವಾಯುಪಡೆಯ ಕಾರ್ಯಾಚರಣೆ ಗಳಲ್ಲಿ ಇದರ ಪಾತ್ರ ಹೆಚ್ಚಿದೆ. ಅಲ್ಲದೆ, ಶತ್ರುವಿನ ಪಾಳೆಯ, ಆಯಕಟ್ಟಿನ ನೆಲೆಗಳನ್ನು ಪತ್ತೆಹಚ್ಚಲು ಇದು ನೆರವಾಗಲಿದೆ. ನೌಕಾಪಡೆಯ ಕಾರ್ಯಾಚರಣೆಯಲ್ಲೂ ಈ ವಿಮಾನವು ಅದ್ವಿತೀಯ ಪಾತ್ರ ನಿರ್ವಹಿಸಲಿದೆ.
ಭಾರತೀಯ ವಾಯುಪಡೆಗೆ ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ರಕ್ಷಣಾ ಖರೀದಿ ಪರಿಷತ್ತು (ಡಿಎಸಿ) ಕಳೆದ ನವೆಂಬರ್ ನಲ್ಲಿಯೇ ಒಪ್ಪಿಗೆ ನೀಡಿತ್ತು. ಅಲ್ಲದೆ, ಸುಖೋಯ್–30 ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲು ಎಚ್ಎಎಲ್‌ಗೆ ಅನುಮೋದನೆ ಯನ್ನೂ ನೀಡಿದೆ.
ತೇಜಸ್ ಎಂಕೆ–1ಎ ಸರಣಿಯ ಮೊದಲ ಲಘು ಯುದ್ಧ ವಿಮಾನವು (ಎಲ್‌ಎ5033) ಇತ್ತೀಚೆಗೆ ಎಚ್‌ಎಎಲ್ ವಾಯುನೆಲೆಯಲ್ಲಿ ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.