ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳಿಗೆ ಖಾತೆದಾರರು ಇನ್ಮುಂದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಮಾಹಿತಿ ಕೊಡುವುದು ಕಡ್ಡಾಯ ಎಂದು ಕೇಂದ್ರ ಹಣಕಾಸು ಇಲಾಖೆ ಶುಕ್ರವಾರ ಆದೇಶ ಮಾಡಿದೆ.
ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನಾ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಂತಹ ಸಣ್ಣ ಉಳಿತಾಯ ಖಾತೆದಾರರು ಸೆಪ್ಟೆಂಬರ್ 30ರೊಳಗೆ ತಮ್ಮ ಆಧಾರ್ ಹಾಗೂ ಪ್ಯಾನ್ ನಂಬರ್ ಅನ್ನು ಜೋಡಿಸುವುದು ಅಥವಾ ಅಪ್ಡೇಟ್ ಮಾಡುವುದು ಕಡ್ಡಾಯ ಎಂದು ಹೇಳಿದೆ.
ಸಣ್ಣ ಉಳಿತಾಯದಾರರ ಕೆವೈಸಿ ಹಾಗೂ ಪಾರದರ್ಶಕ ವ್ಯವಹಾರಗಳಿಗೆ ಈ ಕ್ರಮ ಅನುಕೂಲ ಆಗಲಿದೆ ಎಂದು ಹೇಳಿದೆ.
ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸುವ ಕೊನೆಯ ದಿನಾಂಕವನ್ನು 2023ರ ಜೂನ್ 30ರವರಗೆ ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಆದೇಶ ಮಾಡಿದ ನಂತರ ಮತ್ತೊಂದು ಮಹತ್ವದ ಈ ಆದೇಶ ಹೊರಬಿದ್ದಿದೆ.
ಈ ಮೊದಲು ಮಾರ್ಚ್ 31 ಆಧಾರ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಜೋಡಿಸಲು ಕಡೆಯ ದಿನವಾಗಿತ್ತು.
ಆದರೆ, ಇದೀಗ ಗುಡುವು ಮತ್ತೆ ವಿಸ್ತರಣೆಯಾಗಿರುವುದರಿಂದ ₹1000 ಶುಲ್ಕದೊಂದಿಗೆ ಜೂನ್ 30ರವರಗೆ ಆಧಾರ್ ಸಂಖ್ಯೆಯನ್ನು ಪ್ಯಾನ್‌ಗೆ ಲಿಂಕ್ ಮಾಡಬಹುದು.
ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು.
023-24ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಅದರ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ (ಎನ್‌ಎಸ್‌ಸಿ) ನೀಡಲಾಗುತ್ತಿದ್ದ ಬಡ್ಡಿ ಶೇ 7.0 ನಿಂದ ಶೇ 7.7ಕ್ಕೆ ಏರಿಕೆಯಾಗಿದೆ. ಮಾಸಿಕ ಆದಾಯ ಖಾತೆ ಯೋಜನೆಗೆ ಶೇ 7.1 ರಿಂದ ಶೇ 7.4ಕ್ಕೆ ಬಡ್ಡಿಯನ್ನು ಹೆಚ್ಚಿಸಲಾಗಿದೆ. ಐದು ವರ್ಷಗಳ ಠೇವಣಿಗೆ ಈಗ ಅಸ್ತಿತ್ವದಲ್ಲಿರುವ ಶೇ 7.0 ಬದಲಿಗೆ ಶೇ 7.5ರಷ್ಟು ಬಡ್ಡಿ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.