ಮುಂಬೈ: ಗುಜರಾತ್ ಮೂಲದ ಎಜಿಬಿ ಶಿಪ್‌ಯಾರ್ಡ್ ಕಂಪನಿಯ ₹22,842 ಕೋಟಿ ವಂಚನೆಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಧಿಕಾರದಲ್ಲಿದ್ದಾಗ ನಡೆದಿದೆ. 2005ರಿಂದ 2012ರ ನಡುವೆ ವಂಚನೆ ಹಗರಣ ಆಗಿರುವುದಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಮಂಗಳವಾರ ಹೇಳಿದೆ.
ಎಜಿಬಿ ಶಿಪ್‌ಯಾರ್ಡ್ ಕಂಪನಿಯಿಂದ ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳಿಗೆ ಆಗಿದೆ ಎನ್ನಲಾದ ₹ 22 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಮೊದಲ ದೂರು ದಾಖಲಿಸಲು ಐದು ವರ್ಷ ತೆಗೆದುಕೊಂಡಿದ್ದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಮರ್ಥಿಸಿಕೊಂಡಿದ್ದರು. ವಂಚನೆಯನ್ನು ಪತ್ತೆ ಮಾಡಲು ಮಾಮೂಲಿಗಿಂತಲೂ ಕಡಿಮೆ ಸಮಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ದಾಖಲೆಗಳು ಹಾಗೂ ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ ವಂಚನೆ ಹಗರಣವು '2005ರಿಂದ 2012ರ ನಡುವೆ ಆಗಿದೆ' ಎಂದು ಸಿಬಿಐ ಹೇಳಿದೆ. ಅಂದರೆ, ಹಗರಣವು 18 ವರ್ಷಗಳಷ್ಟು ಹಳೆಯದು ಎಂಬುದು ಈಗ ಬಹಿರಂಗವಾಗಿದೆ.
ಎಜಿಬಿ ಶಿಪ್‌ಯಾರ್ಡ್ ಕಂಪನಿಯು ಎಸ್‌ಬಿಐನೊಂದಿಗೆ 2001ರಿಂದಲೂ ವ್ಯವಹಾರ ನಡೆಸುತ್ತಿದ್ದು, ಕಂಪನಿಗೆ ನೀಡಿದ್ದ ಸಾಲವು ಅನುತ್ಪಾದಕ (ಎನ್‌ಪಿಎ) ಆಗಿರುವುದನ್ನು 2013ರ ನವೆಂಬರ್ 30ರಂದು ಘೋಷಿಸಿತ್ತು ಎಂದು ಸಿಬಿಐ ಹೇಳಿದೆ.
ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚನೆ ಎಸಗಿದ ಆರೋಪದ ಅಡಿಯಲ್ಲಿ ಎಬಿಜಿ ಶಿಪ್‌ಯಾರ್ಡ್ ಲಿಮಿಡೆಟ್, ಅದರ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಶ್ ಅಗರ್ವಾಲ್ ವಿರುದ್ಧ ಸಿಬಿಐ ಈಚೆಗೆ ಪ್ರಕರಣ ದಾಖಲಿಸಿಕೊಂಡಿದೆ.
ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಸೇರಿದಂತೆ 28 ಬ್ಯಾಂಕ್‌ಗಳಿಂದ 2005ರಿಂದ 2012ರ ನಡುವೆ ಬಹುತೇಕ ಹಣ ಬಿಡುಗಡೆಯಾಗಿದೆ. ವಂಚನೆಯ ಮೊತ್ತ ₹22,842 ಕೋಟಿಯಷ್ಟಿದೆ. ಕೆಲವು ರಾಜ್ಯ ಸರ್ಕಾರಗಳು ತನಿಖೆಗೆ ಸಮ್ಮತಿ ನೀಡದ ಕಾರಣದಿಂದಾಗಿ ಬ್ಯಾಂಕ್ ವಂಚನೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದು ಮತ್ತಷ್ಟು ಸವಾಲಿನದಾಗಿದೆ ಎಂದು ಸಿಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.