ನವದೆಹಲಿ: ದೇಶದ ಎರಡನೆಯ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರು ಹಿಂದಿನ ವರ್ಷದಲ್ಲಿ ತಮ್ಮ ಸಂಪತ್ತು ಮೌಲ್ಯವನ್ನು ₹ 3.73 ಲಕ್ಷ ಕೋಟಿಯಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಎಲಾನ್ ಮಸ್ಕ್, ಜೆಫ್ ಬೆಜಾಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಅವರ ಒಟ್ಟು ಸಂಪತ್ತು ಕಳೆದ ವರ್ಷದಲ್ಲಿ ಕಂಡ ಹೆಚ್ಚಳಕ್ಕಿಂತಲೂ ಜಾಸ್ತಿ ಎಂದು ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿಯು ಹೇಳಿದೆ.
ಈ ಪಟ್ಟಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿಸಿದ್ದಾರೆ. ಅವರ ಸಂಪತ್ತು ಮೌಲ್ಯ ಶೇಕಡ 24ರಷ್ಟು ಹೆಚ್ಚಳ ಕಂಡು, ₹ 7.84 ಲಕ್ಷ ಕೋಟಿಗೆ ತಲುಪಿದೆ. ಅದಾನಿ ಅವರ ಸಂಪತ್ತಿನ ಮೌಲ್ಯವು ₹ 6.17 ಲಕ್ಷ ಕೋಟಿ.
ಕಳೆದ ಹತ್ತು ವರ್ಷಗಳಲ್ಲಿ ಅಂಬಾನಿ ಅವರ ಸಂಪತ್ತು ಮೌಲ್ಯವು ಶೇ 400ರಷ್ಟು, ಅದಾನಿ ಅವರ ಸಂಪತ್ತು ಮೌಲ್ಯವು ಶೇ 1,830ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. ಎಚ್‌ಸಿಎಲ್ ಕಂಪನಿಯ ಶಿವ ನಾಡಾರ್ (3ನೆಯ ಸ್ಥಾನ), ಸೀರಂ ಇನ್‌ಸ್ಟಿಟ್ಯೂಟ್‌ನ ಸೈರಸ್ ಪೂನಾವಾಲಾ (4ನೆಯ ಸ್ಥಾನ) ಮತ್ತು ಉಕ್ಕು ಉದ್ಯಮಿ ಲಕ್ಷ್ಮೀ ಎನ್. ಮಿತ್ತಲ್ (5ನೆಯ ಸ್ಥಾನ) ಪಟ್ಟಿಯಲ್ಲಿ ಇರುವ ಇತರ ಪ್ರಮುಖರು.
ನವೀಕರಿಸಬಹುದಾದ ಇಂಧನ ಕಂಪನಿ ಅದಾನಿ ಗ್ರೀನ್ ಷೇರುಪೇಟೆಯಲ್ಲಿ ನೋಂದಣಿ ಆದ ನಂತರದಲ್ಲಿ ಗೌತಮ್ ಅದಾನಿ ಅವರ ಸಂಪತ್ತು ಮೌಲ್ಯವು ಸರಿಸುಮಾರು ಐದುಪಟ್ಟು ಹೆಚ್ಚಳವಾಗಿದೆ. ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್ ಅವರು ಶ್ರೀಮಂತರ ಪಟ್ಟಿಯಲ್ಲಿ ಹೊಸದಾಗಿ ಸ್ಥಾನ ಪಡೆದಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತದ ಶತಕೋಟ್ಯಧೀಶರ ಸಂಪತ್ತು ಮೌಲ್ಯದಲ್ಲಿ ಆಗಿರುವ ಹೆಚ್ಚಳವು ಸ್ವಿಟ್ಜರ್ಲೆಂಡ್ ದೇಶದ ಜಿಡಿಪಿಗೆ ಸಮ ಎಂದು ಹುರೂನ್ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರೆಹಮಾನ್ ಹೇಳಿದ್ದಾರೆ. ವಿಶ್ವದ ಶತಕೋಟ್ಯಧೀಶರ ಪೈಕಿ ಶೇಕಡ 8ರಷ್ಟು ಮಂದಿ ಭಾರತದಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.