ನವದೆಹಲಿ: ಬಿಕ್ಯು ಪ್ರೈಮ್ ಡಿಜಿಟಲ್ ಮೀಡಿಯಾವನ್ನು ನಡೆಸುತ್ತಿರುವ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ (ಕ್ಯುಬಿಎಂಎಲ್) ಸಂಪೂರ್ಣ ಒಡೆತನ ಹೊಂದಲು ಅದಾನಿ ಸಮೂಹದ ಮುಂದಡಿ ಇಟ್ಟಿದೆ. ಈಗಾಗಲೇ ಶೇ 49ರಷ್ಟು ಷೇರುಪಾಲನ್ನು ಹೊಂದಿರುವ ಸಮೂಹವು ಇನ್ನುಳಿದ ಶೇ 51ರಷ್ಟು ಷೇರುಗಳನ್ನು ಸಹ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.
ಕ್ಯುಬಿಎಂಎಲ್‌ನಲ್ಲಿ ಇರುವ ಶೇ 51ರಷ್ಟು ಷೇರುಗಳನ್ನು ಖರೀದಿಸುವ ಒಪ್ಪಂದಕ್ಕೆ ಬರಲಾಗಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ ಗುರುವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ಆದರೆ ಷೇರು ಖರೀದಿಯ ಮೊತ್ತವನ್ನು ಬಹಿರಂಗಪಡಿಸಿಲ್ಲ.
ಅದಾನಿ ಸಮೂಹವು ಕ್ಯುಬಿಎಂಎಲ್‌ನಲ್ಲಿ ಶೇ 49ರಷ್ಟು ಷೇರುಗಳನ್ನು ₹47.84 ಕೋಟಿಗೆ ಈ ಹಿಂದೆಯೇ ಖರೀದಿಸಿದೆ. ಬಿಕ್ಯು ಪ್ರೈಮ್‌ಗೆ ಈ ಮೊದಲು ಬ್ಲೂಮ್‌ಬರ್ಗ್ ಕ್ವಿಂಟ್ ಎನ್ನುವ ಹೆಸರಿತ್ತು. ಅಮೆರಿಕದ ಬ್ಲೂಮ್‌ಬರ್ಗ್ ಮೀಡಿಯಾ ಮತ್ತು ರಾಘವ್ ಬಹ್ಲ್ ಒಡೆತನದ ಕ್ವಿಂಟಿಲಿಯನ್ ಮೀಡಿಯಾದ ಜಂಟಿ ಸಂಸ್ಥೆ ಇದಾಗಿತ್ತು. ಆದರೆ, ಕಳೆದ ವರ್ಷದ ಮಾರ್ಚ್‌ನಲ್ಲಿ ಜಂಟಿ ಪಾಲುದಾರಿಕೆಯಿಂದ ಬ್ಲೂಮ್‌ಬರ್ಗ್ ಹೊರಬಂದಿದೆ.
ಕಳೆದ ಡಿಸೆಂಬರ್‌ನಲ್ಲಿ ಅದಾನಿ ಸಮೂಹವು ಎನ್‌ಡಿಟಿವಿಯ ಶೇ 65ರಷ್ಟು ಷೇರುಪಾಲನ್ನು ಖರೀದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.