ನವದೆಹಲಿ: ‘ವಂಚನೆಯನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಮರೆಮಾಚಲು ಸಾಧ್ಯವಿಲ್ಲ’ ಎಂದು ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹಕ್ಕೆ ತಿರುಗೇಟು ನೀಡಿದೆ. ಸಂಸ್ಥೆಯು ತನ್ನ ವಿರುದ್ಧ ಸಿದ್ಧಪಡಿಸಿರುವ ವರದಿಯು ‘ಭಾರತದ ಮೇಲಿನ ದಾಳಿ’ ಎಂದು ಅದಾನಿ ಸಮೂಹವು ಭಾನುವಾರ 413 ಪುಟಗಳ ಪ್ರತಿಕ್ರಿಯೆಯಲ್ಲಿ ಹೇಳಿತ್ತು. ಇದಕ್ಕೆ ಉತ್ತರವಾಗಿ ಸಂಸ್ಥೆಯು ಸೋಮವಾರ ಈ ಹೇಳಿಕೆ ನೀಡಿದೆ.
ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯ ವರದಿಯು ‘ಪರಿಣಾಮಗಳ ಬಗ್ಗೆ ಅರಿವಿದ್ದು ಭಾರತದ ಮೇಲೆ, ಅದರ ಸಂಸ್ಥೆಗಳ ಮೇಲೆ ಹಾಗೂ ಬೆಳವಣಿಗೆಯ ಮೇಲೆ ನಡೆಸಿರುವ ದಾಳಿ’ ಎಂದು ಅದಾನಿ ಸಮೂಹವು ಭಾನುವಾರ ಹೇಳಿತ್ತು.
ಅದಾನಿ ಸಮೂಹವು ‘ನಿರೀಕ್ಷಿಸಿದ ರೀತಿಯಲ್ಲಿಯೇ ಗಮನವನ್ನು ಮಹತ್ವದ ವಿಷಯಗಳಿಂದ ತಿರುಗಿಸಲು ಯತ್ನಿಸಿದೆ, ರಾಷ್ಟ್ರೀಯತೆಯ ಸಂಕಥನವನ್ನು ಮುಂದಕ್ಕೆ ತರಲು ಯತ್ನಿಸಿದೆ’ ಎಂದು ಸಂಸ್ಥೆ ಹೇಳಿದೆ. ಅದಾನಿ ಸಮೂಹವು ತನ್ನ ಭಾರಿ ಬೆಳವಣಿಗೆ ಹಾಗೂ ತನ್ನ ಅಧ್ಯಕ್ಷ ಗೌತಮ್ ಅದಾನಿ ಅವರ ಯಶಸ್ಸನ್ನು ದೇಶದ ಯಶಸ್ಸಿನ ಜೊತೆ ಬೆಸೆಯಲು ಪ್ರಯತ್ನ ಮಾಡಿದೆ ಎಂದು ಹಿಂಡನ್‌ಬರ್ಗ್ ಅಭಿಪ್ರಾಯಪಟ್ಟಿದೆ.
‘ಈ ವಿಚಾರದಲ್ಲಿ ನಾವು ಸಹಮತ ಹೊಂದಿಲ್ಲ. ಸ್ಪಷ್ಟವಾಗಿ ಹೇಳಬೇಕು ಎಂದಾದರೆ, ಭಾರತವು ಶಕ್ತಿಶಾಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದೆ. ಅದು ಪ್ರವರ್ಧಮಾನಕ್ಕೆ ಬರುತ್ತಿರುವ ಸೂಪರ್‌ಪವರ್ ದೇಶ. ಅದಕ್ಕೆ ಒಳ್ಳೆಯ ಭವಿಷ್ಯವಿದೆ. ಭಾರತದ ಭವಿಷ್ಯವನ್ನು ಅದಾನಿ ಸಮೂಹವು ಹಿಂದಕ್ಕೆ ಎಳೆದು ನಿಲ್ಲಿಸಿದೆ ಎಂಬುದು ನಮ್ಮ ನಂಬಿಕೆ. ಸಮೂಹವು ತನ್ನ ಮೇಲೆ ಭಾರತದ ಧ್ವಜವನ್ನು ಹೊದ್ದುಕೊಂಡು, ದೇಶವನ್ನು ವ್ಯವಸ್ಥಿತವಾಗಿ ಲೂಟಿ ಮಾಡುತ್ತಿದೆ’ ಎಂದು ಕಿಡಿಕಾರಿದೆ.
‘ನಮ್ಮ ವರದಿಯು ಅದಾನಿ ಸಮೂಹಕ್ಕೆ ನಿರ್ದಿಷ್ಟವಾಗಿ 88 ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸಮೂಹವು 62 ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಉತ್ತರಿಸಲು ವಿಫಲವಾಗಿದೆ. ಸಮೂಹವು ಪ್ರಶ್ನೆಗಳನ್ನು ವಿಭಾಗವಾರು ವರ್ಗೀಕರಣ ಮಾಡಿಕೊಂಡು, ಅವುಗಳಿಗೆ ಅಸ್ಪಷ್ಟ ವಿವರಣೆ ನೀಡಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.