ಬೆಂಗಳೂರು: ಗೌತಮ್ ಅದಾನಿ ಸೇರಿದಂತೆ ತನ್ನ ನಿರ್ದೇಶಕರ ವಿರುದ್ಧ ಅಮೆರಿಕ ನ್ಯಾಯ ಮತ್ತು ಭದ್ರತೆ ಹಾಗೂ ವಿನಿಮಯ ಆಯೋಗವು ಹೊರಿಸಿರುವ ವಂಚನೆ ಹಾಗೂ ಲಂಚ ಆರೋಪ ಸುಳ್ಳು ಎಂದು ‘ಅದಾನಿ ಗ್ರೀನ್’ ಹೇಳಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕಂಪನಿ, ‘ನಿರ್ದೇಶಕರ ಮೇಲಿನ ಆರೋಪಗಳು ಆಧಾರ ರಹಿತವಾಗಿದ್ದು, ಅವುಗಳನ್ನು ನಿರ್ಲಕ್ಷಿಸಬೇಕು’ ಎಂದು ಹೇಳಿದೆ. ಅಲ್ಲದೆ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.
‘ಇವುಗಳು ಆರೋಪ ಮಾತ್ರವಾಗಿದ್ದು, ಸಾಬೀತಾಗದ ಹೊರತು ಅವರನ್ನು ನಿರಪರಾಧಿಗಳೆಂದು ಭಾವಿಸಲಾಗುತ್ತದೆ’ ಎಂದು ಅಮೆರಿಕ ನ್ಯಾಯ ಇಲಾಖೆಯ ಹೇಳಿಕೆಯನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಿ ಕಾನೂನು ಪ್ರಕ್ರಿಯೆಗಳ ಮೊರೆ ಹೋಗುವುದಾಗಿ ತಿಳಿಸಿದೆ.
‘ಅದಾನಿ ಸಮೂಹವು ಯಾವಾಗಲೂ ತನ್ನ ಕಾರ್ಯಾಚರಣೆಯಲ್ಲಿ, ಆಡಳಿತ, ಪಾರದರ್ಶಕತೆ ಮತ್ತು ನಿಯಂತ್ರಣಗಳ ಉನ್ನತ ಮಾನದಂಡಗಳನ್ನು ಸದಾ ಕಾಪಾಡಿಕೊಂಡು ಬಂದಿದೆ. ನಾವು ಕಾನೂನು ಪಾಲಿಸುವ ಸಂಸ್ಥೆಯಾಗಿದ್ದು, ಎಲ್ಲಾ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ ಎಂದು ನಮ್ಮ ಪಾಲುದಾರರಿಗೆ, ಉದ್ಯೋಗಿಗಳಿಗೆ ನಾವು ಭರವಸೆ ನೀಡುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಈ ಬಗ್ಗೆ ಸಂಸ್ಥೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪವು ಇವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.