ADVERTISEMENT

ಅದಾನಿ ಷೇರು ಹಗರಣ: ಹೂಡಿಕೆದಾರರಿಗೆ 'ಸಮಾಧಾನದಿಂದ ಇರಿ' ಎಂದ ಸೆಬಿ

ರಾಯಿಟರ್ಸ್
Published 12 ಆಗಸ್ಟ್ 2024, 6:05 IST
Last Updated 12 ಆಗಸ್ಟ್ 2024, 6:05 IST
ಸೆಬಿ
ಸೆಬಿ    

ಮುಂಬೈ: ಹೂಡಿಕೆದಾರರು ಸಮಾಧಾನದಿಂದ ಇರಿ, ಹಿಂಡೆನ್‌ಬರ್ಗ್‌ನಂತಹ ವರದಿಗಳಿಗೆ ಪ್ರತಿಕ್ರಿಯಿಸುವ ಮೊದಲು ಶ್ರದ್ಧೆಯಿಂದ ನಿಮ್ಮ ಕಾರ್ಯ ಮುಂದುವರಿಸಿ ಎಂದು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

ಅದಾನಿ ಷೇರು ಹಗರಣದ ಕುರಿತು ಕಳೆದ ವರ್ಷ ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್‌, ಇದೀಗ ಆ ಪ್ರಕರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಮತ್ತು ಅವರ ಪತಿ ಧವಲ್‌ ಬುಚ್‌ ಪಾತ್ರವಿದೆ ಎಂದು ಆರೋಪಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಿಯಂತ್ರಕವು, ಅದಾನಿ ಸಮೂಹದ ವಿರುದ್ಧ ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸಲಾಗಿದೆ. 24ರಲ್ಲಿ 23 ತನಿಖೆಗಳು 2024ರ ಮಾರ್ಚ್‌ನಲ್ಲೇ ಪೂರ್ಣಗೊಂಡಿವೆ. ಉಳಿದ ಒಂದು ತನಿಖೆ ನಡೆಯುತ್ತಿದೆ. ಪ್ರಗತಿಯಲ್ಲಿರುವ ಯಾವುದೇ ತನಿಖೆ ಅಥವಾ ಕ್ರಮಗಳ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸೆಬಿ ನಿಯಮಗಳು ಅನುಮತಿಸುವುದಿಲ್ಲ ಎಂದು ಹೇಳಿದೆ.

ADVERTISEMENT

ಮುಖ್ಯಸ್ಥರನ್ನೂ ಸಮರ್ಥಿಸಿಕೊಂಡಿದ್ದು, ಮಾಧವಿ ಬುಚ್‌ ಅವರು ತಾವು ಮಾಡಿರುವ ಹೂಡಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ. ಹಿಂಡೆನ್‌ಬರ್ಗ್‌ ಆರೋಪಗಳನ್ನು ಸ್ವತಃ ಅಲ್ಲಗಳೆದಿದ್ದಾರೆ ಎಂದಿದೆ.

ಬರ್ಮುಡಾ ಮೂಲದ ಗ್ಲೋಬಲ್‌ ಆಪರ್ಚುನಿಟೀಸ್‌ ಫಂಡ್‌, ಅದಾನಿ ಗ್ರೂಪ್‌ನ ಷೇರುಗಳ ವ್ಯವಹಾರ ನಡೆಸುತ್ತದೆ. ಇದರಲ್ಲಿ ಅವರು 2015ರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ಹೇಳಿದೆ. ಆದರೆ, ಈ ಹಿಂಡೆನ್‌ಬರ್ಗ್ ಉಲ್ಲೇಖಿಸಿರುವ ಹೂಡಿಕೆಗಳು ತಾವು ಸೆಬಿಗೆ ನೇಮಕವಾಗುವ ಮುನ್ನ ಮಾಡಿದವುಗಳು ಎಂದು ಬುಚ್‌ ಹೇಳಿದ್ದಾರೆ.

ಸೆಬಿಯ ಪೂರ್ಣಕಾಲಿಕ ಸದಸ್ಯೆಯಾಗಿ 2017ರಲ್ಲಿ ನೇಮಕವಾದ ಬುಚ್‌ ಅವರು, 2022ರ ಮಾರ್ಚ್‌ನಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಹಿಂಡೆನ್‌ಬರ್ಗ್ ಆರೋಪ ಏನು?
ಅದಾನಿ ಷೇರು ಹಗರಣದ ಬಗ್ಗೆ 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ್ದ ಹಿಂಡೆನ್‌ಬರ್ಗ್‌, ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂಬ ಗಂಭೀರ ಆರೋಪ ಮಾಡಿತ್ತು.

ವಾಸ್ತವಾಂಶ ತಿರುಚಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸೆಬಿಯು, ಇದೇ ಜುಲೈನಲ್ಲಿ ಶೋಕಾಸ್‌ ನೋಟಿಸ್‌ ನೀಡಿತ್ತು. ಇದರ ಬೆನ್ನಲ್ಲೇ ಹಿಂಡೆನ್‌ಬರ್ಗ್‌ ಮತ್ತೊಂದು ಆರೋಪ ಮಾಡಿದೆ.  

ಉದ್ಯಮಿ ಗೌತಮ್‌ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಬುಚ್‌ ದಂಪತಿಯ ಪಾಲುದಾರಿಕೆ ಇದೆ. ಅದಾನಿಯವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ಶೆಲ್‌ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಶನಿವಾರ (ಆಗಸ್ಟ್‌ 10ರಂದು) ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.