ಮುಂಬೈ: ಅದಾನಿ ಸಮೂಹದ ಕಂಪನಿಗಳ ವಹಿವಾಟಿನ ಮೇಲೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿಯ ಬೀರಿರುವ ನಕಾರಾತ್ಮಕ ಪರಿಣಾಮವು ಸೋಮವಾರವೂ ಮುಂದುವರಿದಿದೆ.
ಸೋಮವಾರದ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ (ಶೇ 4.21), ಅಂಬುಜಾ ಸಿಮೆಂಟ್ಸ್ (ಶೇ 1.65) ಮತ್ತು ಎಸಿಸಿ (ಶೇ 1.10) ಷೇರುಗಳು ಮಾತ್ರವೇ ಗಳಿಕೆ ಕಂಡವು. ಇನ್ನುಳಿದ ಏಳು ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು. ಮೂರು ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ₹ 5.56 ಲಕ್ಷ ಕೋಟಿಯಷ್ಟು ಕರಗಿದೆ.
ಮೂರು ದಿನಗಳ ವಹಿವಾಟಿನಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರು ಶೇ 10.93ರಷ್ಟು, ಎಸ್‌ಬಿಐ ಶೇ 9.42 ಮತ್ತು ಎಲ್‌ಐಸಿ ಷೇರು ಶೇ 6.52ರಷ್ಟು ಇಳಿಕೆ ಕಂಡಿವೆ.
ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಅದಾನಿ ಸಮೂಹವು ಭಾನುವಾರ ಪ್ರತಿಕ್ರಿಯೆ ನೀಡಿದೆ. ಅದಾನಿ ಸಮೂಹ ನೀಡಿರುವ ಪ್ರತಿಕ್ರಿಯೆಯು ಸಮೂಹದ ಕಂಪನಿಗಳ ಷೇರುಗಳ ಮೇಲೆ ಮತ್ತು ಒಟ್ಟಾರೆಯಾಗಿ ಷೇರುಪೇಟೆಯ ಮೇಲೆ ಮಿಶ್ರ ಪರಿಣಾಮ ಬೀರಿತು. ಹೂಡಿಕೆದಾರರಲ್ಲಿ ಆತಂಕ ಮನೆಮಾಡಿರುವುದರಿಂದ ಮಧ್ಯಮಾವಧಿಯಲ್ಲಿ ವಹಿವಾಟು ಇದೇ ರೀತಿಯಲ್ಲಿ ಅಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಐ.ಟಿ., ತೈಲ ಷೇರು ಗಳಿಕೆ: ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.
ಕೇಂದ್ರ ಬಜೆಟ್ ಮತ್ತು ಅಮೆರಿಕದ ಫೆಡರಲ್ ರಿಸರ್ವ್‌ನ ಹಣಕಾಸು ನೀತಿಯ ಘೋಷಣೆ ಆಗಲಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ವಹಿವಾಟು ನಡೆಸಿದರು. ಹೀಗಿದ್ದರೂ ಐ.ಟಿ., ತೈಲ ಮತ್ತು ಹಣಕಾಸು ವಲಯದ ಷೇರುಗಳು ಚೇತರಿಕೆ ಹಾದಿಗೆ ಮರಳಿದವು.
ಸೆನ್ಸೆಕ್ಸ್‌ನಲ್ಲಿ ಬಜಾಜ್ ಫೈನಾನ್ಸ್ ಷೇರು ಶೇ 4.61ರಷ್ಟು ಗರಿಷ್ಠ ಏರಿಕೆ ಕಂಡಿತು. ಐ.ಟಿ. ವಿಭಾಗದಲ್ಲಿ ಎಚ್‌ಸಿಎಲ್ ಟೆಕ್ ಕಂಪನಿಯ ಷೇರು ಂಔಲ್ಯ ಶೇ 1.85ರಷ್ಟು ಹೆಚ್ಚಾಯಿತು. ಅದೇ ರೀತಿ ಇನ್ಫೊಸಿಸ್, ಟಿಸಿಎಸ್ ಷೇರು ಮೌಲ್ಯವೂ ಹೆಚ್ಚಾಯಿತು.
ಸೆನ್ಸೆಕ್ಸ್ 169 ಅಂಶ ಏರಿಕೆ ಕಂಡರೆ, ನಿಫ್ಟಿ 44 ಅಂಶ ಹೆಚ್ಚಾಯಿತು. ಬ್ರೆಂಟ್ ಕಚ್ಚಾ ತೈಲ ದರ ಶೇ 0.25ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 86.44 ಡಾಲರ್‌ಗೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.