ADVERTISEMENT

ಅದಾನಿಯಿಂದ ಮಾಧ್ಯಮವೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ₹1.3 ಲಕ್ಷ ಕೋಟಿ ಹೂಡಿಕೆ

ಪಿಟಿಐ
Published 25 ಜೂನ್ 2024, 9:38 IST
Last Updated 25 ಜೂನ್ 2024, 9:38 IST
<div class="paragraphs"><p>ಗೌತಮ್ ಅದಾನಿ</p></div>

ಗೌತಮ್ ಅದಾನಿ

   

ಅಹಮದಾಬಾದ್: ‘ಅದಾನಿ ಸಮೂಹವು ತನ್ನದೇ ಒಡೆತನದ ಹಲವು ಕಂಪನಿಗಳಲ್ಲಿ 2025ರಲ್ಲಿ ₹1.3ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ. 7ರಿಂದ 10 ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡುವ ಈ ಹಿಂದಿನ ತನ್ನ ಯೋಜನೆಗಿಂತಲೂ ಇದು ದ್ವಿಗುಣ ಮೊತ್ತದ್ದಾಗಿದೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜುಗೆಶಿಂದರ್‌ ಸಿಂಗ್ (ರಾಬ್ಬೀ) ಮಂಗಳವಾರ ತಿಳಿಸಿದ್ದಾರೆ.

‘ಹೂಡಿಕೆಯಲ್ಲಿ ಇಂಧನ, ವಿಮಾನ ನಿಲ್ದಾಣ, ಸರಕು ಸಾಗಣೆ, ಸಿಮೆಂಟ್, ಮಾಧ್ಯಮ ಕ್ಷೇತ್ರಗಳು ಸೇರಿವೆ. ಇದರಲ್ಲಿ ಶೇ 70ರಷ್ಟು ಹಣವನ್ನು ಆಂತರಿಕ ಸಂಪನ್ಮೂಲದಿಂದ ಕ್ರೋಡೀಕರಿಸಲಾಗಿದೆ. ಉಳಿದದ್ದು ಸಾಲದ ಮೂಲಕ ಪಡೆಯಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

‘ಕಂಪನಿ ಈವರೆಗೂ ಪಡೆದಿರುವ 3ರಿಂದ 4 ಶತಕೋಟಿ ಡಾಲರ್‌ ಸಾಲವನ್ನು ಈ ವರ್ಷ ಮರು ಪಾವತಿಸಲಿದ್ದು, ಹೆಚ್ಚುವರಿಯಾಗಿ ಒಂದು ಶತಕೋಟಿ ಅಮೆರಿಕನ್ ಡಾಲರ್ ಸಾಲವನ್ನು ಪಡೆಯಲಾಗುವುದು. ಜತೆಗೆ ಹೊಸ ಹೂಡಿಕೆದಾರರನ್ನು ಸೆಳೆಯುವ ಮೂಲಕ ವಾರ್ಷಿಕ 2ರಿಂದ 2.5 ಶತಕೋಟಿ ಡಾಲರ್‌ ಬಂಡವಾಳ ಹೆಚ್ಚಿಸುವ ಯೋಜನೆ ಹೊಂದಲಾಗಿದೆ’ ಎಂದಿದ್ದಾರೆ.

‘ಈವರೆಗೂ ಹೊಂದಿರುವ ಯೋಜನೆಗಳನ್ನು 2024ರೊಳಗೆ ಪೂರ್ಣಗೊಳಿಸಲಾಗುವುದು. ಇದರಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಅದಾನಿ ಗ್ರೀನ್‌ನ 6ರಿಂದ 7 ಗಿಗಾವಾಟ್‌ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಸೌರ ಶಕ್ತಿ ಉತ್ಪಾದನಾ ಸಾಧನಗಳ ತಯಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಹೆಚ್ಚಿಸಲಾಗುವುದು. ಮುಂಬೈನ ಹೊಸ ವಿಮಾನ ನಿಲ್ದಾಣ ಯೋಜನೆಯನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಇವೆಲ್ಲದರಿಂದ ಕಂಪನಿಯ ಮೂಲ ಬಂಡವಾಳ ಸದ್ಯ ಇರುವುದಕ್ಕಿಂತ 2025ರಲ್ಲಿ ಶೇ 40ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮುಂದಿನ ಕೆಲ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಕ್ಷೇತ್ರಗಳಾದ ನವೀಕರಿಸುವ ಇಂಧನ, ಗ್ರೀನ್ ಹೈಡ್ರೊಜೆನ್, ವಿಮಾನ ನಿಲ್ದಾಣ ಹಾಗೂ ಮೂಲಸೌಕರ್ಯಗಳತ್ತ ಗಮನ ಹರಿಸಲಾಗುವುದು’ ಎಂದು ಜುಗೆಶಿಂದರ್‌ ಸಿಂಗ್ ಹೇಳಿದ್ದಾರೆ.

‘ಈ ಹೂಡಿಕೆಯಲ್ಲೂ ಶೇ 70ರಷ್ಟನ್ನು ಹಸಿರು ಇಂಧನ ಕ್ಷೇತ್ರಗಳಾದ ನವೀಕರಿಸಬಹುದಾದ ಇಂಧನ, ಗ್ರೀನ್ ಹೈಡ್ರೊಜೆನ್, ಗ್ರೀನ್ ಎವಾಕ್ಯುಯೇಷನ್‌ ಕ್ಷೇತ್ರಗಳಲ್ಲಿ ಇರಲಿದೆ. ಶೇ 30ರಷ್ಟನ್ನು ವಿಮಾನ ನಿಲ್ದಾಣ ಹಾಗೂ ಬಂದರು ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು. ಅದಾನಿ ಸಮೂಹವು ಸದ್ಯ ತೆರಿಗೆ ಹೊರತುಪಡಿಸಿ ಶೇ 45ರಷ್ಟು ಲಾಭವನ್ನು ದಾಖಲಿಸಿದೆ. 2024ರಲ್ಲಿ ₹82,917 ಕೋಟಿ ಲಾಭಗಳಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

ಶಾಲೆ ಹಂತದಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯಮ ಆರಂಭಿಸಿದ ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಅವರು ಬಂದರು, ಇಂಧನ, ವಿಮಾನ ನಿಲ್ದಾಣ, ಗಣಿ, ನವೀಕರಿಸಬಹುದಾದ ಇಂಧನ, ಅನಿಲ, ಡಾಟಾ ಸೆಂಟರ್, ಮಾಧ್ಯಮ ಹಾಗೂ ಸಿಮೆಂಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಸದ್ಯ ವಿಶ್ವದ ಅತ್ಯಂತ ಶ್ರೀಮಂತರ ಅಗ್ರ ಪಟ್ಟಿಯಲ್ಲಿ ಸ್ಥಾನ ಹೊಂದಿದ್ದಾರೆ. ಪ್ರಯಾಣಿಕ ವಿಮಾನ ವಿಭಾಗದಲ್ಲಿ ಶೇ 25ರಷ್ಟು ಹಾಗೂ ಕಾರ್ಗೊ ವಿಮಾನ ಕ್ಷೇತ್ರದಲ್ಲಿ ಶೇ 40ರಷ್ಟು ಪಾಲನ್ನು ಹೊಂದಿದ್ದಾರೆ. ಬಂದರು ಕ್ಷೇತ್ರದಲ್ಲಿ ದೇಶದ ಮಾರುಕಟ್ಟೆ ಶೇ 30ರಷ್ಟು ಪಾಲನ್ನು ಹೊಂದಿದ್ದಾರೆ. ಕಂಪನಿಯು ಗುಜರಾತ್‌ನ ಖಾವ್ಡಾ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ ಆರಂಭಿಸುತ್ತಿದ್ದು ಇದರ ಗಾತ್ರ 530 ಚದರ ಕಿಲೋಮೀಟರ್ ಆಗಿದೆ’ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.