ನವದೆಹಲಿ (ಪಿಟಿಐ): 2019–20ನೇ ಹಣಕಾಸು ವರ್ಷದ ಭಾರತದ ಆರ್ಥಿಕ ವೃದ್ಧಿ ದರವನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಶೇ 5.1ರಷ್ಟಕ್ಕೆ ತಗ್ಗಿಸಿದೆ.
ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚದಿರುವ, ಕೃಷಿ ಉತ್ಪಾದನೆ ಕಡಿಮೆಯಾಗಿ ಗ್ರಾಮೀಣ ಪ್ರದೇಶದ ಜನರ ಸಂಕಟ ಉಲ್ಬಣಗೊಂಡಿರುವ ಮತ್ತು ಸಾಲದ ಲಭ್ಯತೆ ಕಡಿಮೆಯಾಗಿರುವ ಕಾರಣಕ್ಕೆ ವೃದ್ಧಿ ದರವನ್ನು ಈ ಮೊದಲಿನ ಅಂದಾಜು ಶೇ 6.5ರ ಬದಲಿಗೆ ಶೇ 5.1ಕ್ಕೆ ಇಳಿಸಲಾಗಿದೆ.
ಹಣಕಾಸು ವರ್ಷದ ಮೊದಲಾರ್ಧದಲ್ಲಿ ಉಪಭೋಗ ಪ್ರಮಾಣವು ಶೇ 4.1ರಷ್ಟು ಮತ್ತು ಬಂಡವಾಳ ಹೂಡಿಕೆಯು ಶೇ 2.5ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ವರ್ಷದ ಮೊದಲ 6 ತಿಂಗಳಲ್ಲಿನ ವೃದ್ಧಿ ದರವು ಶೇ 4.8ಕ್ಕೆ ಇಳಿಯಲಿದೆ.
ಕೇಂದ್ರ ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳಿಂದ 2020–21ನೇ ಹಣಕಾಸು ವರ್ಷದಲ್ಲಿ ದೇಶಿ ಆರ್ಥಿಕತೆಯಲ್ಲಿ ಸ್ಥಿರತೆ ಕಂಡು ಬರಲಿದೆ. ವೃದ್ಧಿ ದರವು ಶೇ 6.5ಕ್ಕೆ ಮರಳುವ ನಿರೀಕ್ಷೆ ಇದೆ ಎಂದೂ ‘ಎಡಿಬಿ’ ಅಂದಾಜಿಸಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ 2018ರಲ್ಲಿ ಉದ್ಭವಿಸಿದ ನಗದು ಬಿಕ್ಕಟ್ಟಿನಿಂದಾಗಿ ಹಣಕಾಸು ವಲಯದಲ್ಲಿ ಸಾಲ ಮರುಪಾವತಿ ಸಮಸ್ಯೆ ಉದ್ಭವಿಸಿದೆ. ಹೊಸ ಸಾಲ ನೀಡಿಕೆ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಹೊಸ ಉದ್ಯೋಗ ಅವಕಾಶಗಳು ನಿಧಾನ ಗತಿಯಲ್ಲಿ ಹೆಚ್ಚಳಗೊಳ್ಳುತ್ತಿವೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆಯೂ ಕಡಿಮೆಯಾಗುತ್ತಿದೆ. ಕೃಷಿ ಉತ್ಪಾದನೆ ಕಡಿಮೆಯಾಗಿ ಗ್ರಾಮೀಣ ಪ್ರದೇಶದ ಸಂಕಷ್ಟ ತೀವ್ರಗೊಂಡಿದೆ. ಹೀಗಾಗಿ ಈ ಹಣಕಾಸು ವರ್ಷದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳವು ಶೇ 5.1ರಷ್ಟು ಇರಲಿದೆ ಎಂದು ಬ್ಯಾಂಕ್, 2019ರ ಸಾಲಿನ ಏಷ್ಯಾದ ಅಭಿವೃದ್ಧಿ ಮುನ್ನೋಟ ಪರಿಷ್ಕೃತ ವರದಿಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿಯೂ ಬ್ಯಾಂಕ್ ವೃದ್ಧಿ ದರವನ್ನು ಅದಕ್ಕೂ ಮುಂಚಿನ ಶೇ 7ರಿಂದ ಶೇ 6.5ಕ್ಕೆ ತಗ್ಗಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇತ್ತೀಚೆಗೆ ವೃದ್ಧಿ ದರವನ್ನು ಶೇ 6.1 ರಿಂದ ಶೇ 5ಕ್ಕೆ ಪರಿಷ್ಕರಿಸಿದೆ.
ಸಂಸ್ಥೆ ಮತ್ತುಜಿಡಿಪಿ ವೃದ್ಧಿಯ ಪರಿಷ್ಕೃತ ಅಂದಾಜು (%)
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ; 7 ರಿಂದ 6.1
ಭಾರತೀಯ ರಿಸರ್ವ್ ಬ್ಯಾಂಕ್; 6 ರಿಂದ 5
ಏಷ್ಯಾ ಅಭಿವೃದ್ಧಿ ಬ್ಯಾಂಕ್; 6.1 ರಿಂದ 5.1
ಮೂಡೀಸ್ ಇನ್‌ವೆಸ್ಟರ್ಸ್ ಸರ್ವಿಸ್; 5.8 ರಿಂದ 5.6
ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್; 5.8
ವಿಶ್ವಬ್ಯಾಂಕ್; 6.0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.