ಮನಿಲಾ: ‘ಕೊರೊನಾ–2’ ವೈರಸ್ ಪಿಡುಗು ಸೃಷ್ಟಿಸಿರುವ ಆರ್ಥಿಕ ಸಂಕಷ್ಟದಿಂದಾಗಿ ಜಾಗತಿಕ ಆರ್ಥಿಕತೆಗೆ ₹ 300 ಲಕ್ಷ ಕೋಟಿ ಮೊತ್ತದ ಹೊರೆ ಬೀಳಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಂದಾಜಿಸಿದೆ.
ಅಮೆರಿಕ, ಯುರೋಪ್ ಒಕ್ಕೂಟ ಸೇರಿದಂತೆ ವಿಶ್ವದ ಪ್ರಮುಖ ಆರ್ಥಿಕತೆಗಳಿಗೆ ಕೊರೊನಾ ಭಾರಿ ಆಪತ್ತು ತಂದೊಡ್ಡಿದೆ. ಇದರಿಂದಾಗಲಿರುವ ನಷ್ಟದ ಹೊರೆಯು ವಿಶ್ವದ ಒಟ್ಟು ಉತ್ಪಾದನೆಯ ಶೇ 5ರಷ್ಟು ಇರಲಿದೆ. ಅಂತಿಮವಾಗಿ ನಷ್ಟದ ಸಾಧ್ಯತೆಯು ಈ ಶತಮಾನದಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇರಲಿದೆ ಎಂದು ‘ಎಡಿಬಿ’ ತಿಳಿಸಿದೆ.
ಸದ್ಯಕ್ಕೆ ಮಾಡಿರುವ ನಷ್ಟದ ಹೊರೆಯ ಪ್ರಮಾಣ ತಪ್ಪಾಗಿರಬಹುದು. ಕೊರೊನಾ ದಿಗ್ಬಂಧನದಿಂದಾಗಿ ಉದ್ಭವಿಸಿರುವ ಸಾಮಾಜಿಕ ಬಿಕ್ಕಟ್ಟು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿನ ನಷ್ಟ ಸಾಧ್ಯತೆಯನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ. ಕೊರೊನಾ ಕಾರಣಕ್ಕೆ ಪ್ರಮುಖ ದೇಶಗಳಲ್ಲಿ ಜಾರಿಯಲ್ಲಿ ಇರುವ ದಿಗ್ಬಂಧನದ ಅವಧಿ ಅಲ್ಪಾವಧಿಯದಾಗಿದ್ದರೆ ನಷ್ಟದ ಪ್ರಮಾಣವು ಕಡಿಮೆಯಾಗಿರಲಿದೆ.
ಹಣಕಾಸು ಸಂಕಷ್ಟದ ತೀವ್ರತೆ ತಗ್ಗಿಸಲು ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಸರ್ಕಾರಗಳು ಕಾರ್ಯಪ್ರವೃತ್ತವಾಗಿವೆ. ಉತ್ತೇಜನಾ ಕೊಡುಗೆ ಮತ್ತು ಹಣಕಾಸು ನೀತಿ ಸಡಿಲಿಕೆಯಿಂದ ಆರ್ಥಿಕತೆಗೆ ₹ 375 ಲಕ್ಷ ಕೋಟಿ ಮೊತ್ತದ ನೆರವು ಘೋಷಿಸಿವೆ. ಈ ಭರಪೂರ ನೆರವಿನ ಹೊರತಾಗಿಯೂ ಕೊರೊನಾ ಬಿಕ್ಕಟ್ಟು ಜಾಗತಿಕ ಆರ್ಥಿಕತೆ ಮೇಲೆ ದೀರ್ಘಾವಧಿಯಲ್ಲಿ ಬೀರಬಹುದಾದ ಪರಿಣಾಮಗಳ ಬಗ್ಗೆ ಷೇರುಪೇಟೆ ವಹಿವಾಟುದಾರರಲ್ಲಿ ಆತಂಕ ಮನೆ ಮಾಡಿದೆ. ಅಂತಿಮ ಪರಿಣಾಮವು ಅಂದಾಜಿಗಿಂತ ಭೀಕರವಾಗಿರಲಿದೆ. ಆರ್ಥಿಕ ವೃದ್ಧಿ ದರವಂತೂ ತ್ವರಿತವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ.
ವಿಶ್ವದಾದ್ಯಂತ ಕೋಟ್ಯಂತರ ಜನರು ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಆರ್ಥಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಪ್ರತಿಯೊಂದು ದೇಶದ ಆರ್ಥಿಕ ವೃದ್ಧಿ ದರ ಕುಸಿಯಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2020–21) ಏಷ್ಯಾದ ವೃದ್ಧಿ ದರವು ಶೇ 2.2ರಷ್ಟಾಗಲಿದೆ. 1998ರಲ್ಲಿ ಉಂಟಾಗಿದ್ದ ಏಷ್ಯಾದ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ವೃದ್ಧಿ ದರ ಶೇ 1.7ರಷ್ಟಿತ್ತು.
ಪಿಡುಗು ನಿಯಂತ್ರಣಕ್ಕೆ ಬಂದರೂ ಅನಿಶ್ಚಿತತೆಯಂತೂ ಮುಂದುವರೆಯಲಿದೆ. ಹೀಗಾಗಿ ಸಂಭವನೀಯ ತೀವ್ರ ಸ್ವರೂಪದ ಹಣಕಾಸು ತಲ್ಲಣ ಮತ್ತು ಬಿಕ್ಕಟ್ಟನ್ನು ಹಗುರವಾಗಿ ಪರಿಗಣಿಸಲಿಕ್ಕಾಗದು ಎಂದು ‘ಎಡಿಬಿ’ಯ ಮುಖ್ಯ ಆರ್ಥಿಕ ತಜ್ಞ ವಸುಯುಕಿ ಸವಾಡಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.