ನವದೆಹಲಿ: 2,000 ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶವಾಗುವಂತೆ ಬೆಂಗಳೂರಿನಲ್ಲಿ ಅತ್ಯಾಧುನಿಕ ಕಚೇರಿ ಹೊಂದಿರುವ ಕ್ಯಾಂಪಸ್ ನಿರ್ಮಾಣ ಮಾಡಲಿದ್ದೇವೆ ಎಂದು ಸಾಫ್ಟ್‌ವೇರ್ ಕ್ಷೇತ್ರದ ಪ್ರಮುಖ ಕಂಪನಿ ಅಡೋಬ್ ಸೋಮವಾರ ಘೋಷಿಸಿದೆ.
ಅಮೆರಿಕ ಬಿಟ್ಟರೆ ಭಾರತವು ಅಡೋಬ್ ಕಂಪನಿಯ ಅತಿ ದೊಡ್ಡ ಹಬ್ ಆಗಿದೆ. ದೇಶದಲ್ಲಿ ಅಡೋಬ್ ಕಂಪನಿಯ ಐದು ಕ್ಯಾಂಪಸ್‌ಗಳಿದ್ದು, ಇವುಗಳಲ್ಲಿ 7,800ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
‘ಅಡೋಬ್ ಕಂಪನಿಯು ಭಾರತದಲ್ಲಿ 25 ವರ್ಷಗಳ ಹಿಂದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಿದೆ. ಇಲ್ಲಿನ ನಮ್ಮ ತಂಡಗಳು ಜಾಗತಿಕ ಮಟ್ಟದಲ್ಲಿ ಹೊಸಹೊಸ ಆವಿಷ್ಕಾರಕ್ಕೆ ಮಾರ್ಗಸೂಚಿ ರೂಪಿಸುತ್ತವೆ. ಹಾಗೂ, ಕ್ರಾಸ್ ಕ್ಲೌಡ್ ತಂತ್ರಜ್ಞಾನವನ್ನು ಮುನ್ನಡೆಸುತ್ತವೆ‘ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ಅಭಿಜ್ಞಾನ್ ಮೋದಿ ತಿಳಿಸಿದರು
‘ಡಿಜಿಟಲ್ ಕಲಿಕೆ ಮತ್ತು ಮುದ್ರಣ ವ್ಯವಹಾರದಲ್ಲಿ ಪ್ರಮುಖವಾಗಿ ದೇಶದಲ್ಲಿನ ಅಡೋಬ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಕ್ಲೌಡ್ ಡಾಕ್ಯುಮೆಂಟ್‌ನಂಥ ಉತ್ಪನ್ನಗಳ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಕ್ಲೌಡ್ ತಂತ್ರಜ್ಞಾನದ ಅನುಭವದಿಂದ ಅಪ್ಲಿಕೇಶನ್‌ಗಳ ಮೂಲಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನೊಂದಿಗೆ (AI) ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಮರುರೂಪಿಸಲಾಗುವುದು‘ ಎಂದು ಅಭಿಜ್ಞಾನ್ ವಿವರಿಸಿದರು.
ಬೆಂಗಳೂರಿಗೆ ನಮ್ಮ ಹೊಸ ಕಚೇರಿಯ ವಿಸ್ತರಣೆಯು ಭಾರತದಲ್ಲಿ ಅಡೋಬ್‌ನ ಮುಂದಿನ ಅಧ್ಯಾಯದ ಗುರುತರ ಭಾಗವಾಗಿದೆ‘ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.