ನವದೆಹಲಿ: ಅಫ್ಗಾನಿಸ್ತಾನದ ಅನಿಶ್ಚಿತತೆಯು ಆ ದೇಶದೊಂದಿಗೆ ಭಾರತದ ವ್ಯಾಪಾರದ ಮೇಲೂ ಭಾರಿ ಪರಿಣಾಮ ಬೀರಲಿದೆ ಎಂದು ರಫ್ತು ವಹಿವಾಟುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
‘ಅಫ್ಗಾನಿಸ್ತಾನದ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ರಫ್ತುದಾರರು ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ವಿಶೇಷವಾಗಿ ಪಾವತಿಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕಿದೆ. ಇದಕ್ಕಾಗಿ ಅವರು ಸಾಲ ವಿಮೆಯನ್ನು ಪಡೆದುಕೊಳ್ಳಬಹುದು’ ಎಂದು ಭಾರತೀಯ ರಫ್ತುದಾರರ ಸಂಘಟನೆಯ ಒಕ್ಕೂಟದ (ಎಫ್‌ಐಇಒ) ಪ್ರಧಾನ ನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.
‘ಅಫ್ಗಾನಿಸ್ತಾನದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆಯು ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಆ ದೇಶದ ಜತೆ ವ್ಯಾಪಾರ ಕಡಿಮೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.
ದ್ವಿಪಕ್ಷೀಯ ವ್ಯಾಪಾರದಲ್ಲಿ ಗಣನೀಯ ಕುಸಿತವಾಗಲಿದೆ ಎಂದು ಎಫ್‌ಐಇಒ ಮಾಜಿ ಅಧ್ಯಕ್ಷ ಮತ್ತು ದೇಶದ ಮುಂಚೂಣಿಯಲ್ಲಿರುವ ರಫ್ತುದಾರರಾಗಿರುವ ಎಸ್.ಕೆ.ಸರಫ್ ಅಭಿಪ್ರಾಯಪಟ್ಟಿದ್ದಾರೆ.
‘ಎಲ್ಲ ವ್ಯಾಪಾರವನ್ನೂ ನಾವು ಕಳೆದುಕೊಳ್ಳಲಾರೆವು. ಯಾಕೆಂದರೆ ಅವರಿಗೆ ನಮ್ಮ ಕೆಲವು ಉತ್ಪನ್ನಗಳ ಅವಶ್ಯಕತೆಯಿದೆ’ ಎಂದೂ ಅವರು ಹೇಳಿದ್ದಾರೆ.
ಕಾಬೂಲ್ ನಗರವು ತಾಲಿಬಾನ್ ವಶವಾಗುವ ಮುನ್ನ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದು, ದೇಶವು ರಾಜಕೀಯ ಅನಿಶ್ಚಿತತೆಗೆ ಸಿಲುಕಿದೆ.
ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುವುದರಿಂದ ನಿರ್ದಿಷ್ಟ ಸಮಯದವರೆಗೆ ಆ ದೇಶದ ಜತೆಗಿನ ವ್ಯಾಪಾರ ಸಂಪೂರ್ಣ ಸ್ಥಗಿತಗೊಳ್ಳಬಹುದು ಎಂದು ಎಫ್‌ಐಇಒ ಉಪಾಧ್ಯಕ್ಷ ಖಾಲೀದ್ ಖಾನ್ ಹೇಳಿದ್ದಾರೆ.
‘ಅಫ್ಗಾನಿಸ್ತಾನಕ್ಕೆ ರಫ್ತು ಮಾಡಲು ವಾಯುಮಾರ್ಗವೇ ಏಕೈಕ ದಾರಿಯಾಗಿದೆ. ಅದೀಗ ಅಸ್ತವ್ಯಸ್ತಗೊಂಡಿದೆ. ಅನಿಶ್ಚಿತತೆಯು ತೊಲಗಿದ ಬಳಿಕವಷ್ಟೇ ವ್ಯಾಪಾರ ಸಾಧ್ಯ’ ಎಂದು ಖಾನ್ ಹೇಳಿದ್ದಾರೆ.
ಅಫ್ಗಾನಿಸ್ತಾನಕ್ಕೆ ಭಾರತವು ನೀಡುತ್ತಿರುವ ನೆರವು ದೇಶೀಯ ಉತ್ಪನ್ನಗಳಿಗೆ ಅಲ್ಲಿ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಿಂದಾಗಿ ಇವೆಲ್ಲವೂ ಸ್ಥಗಿತಗೊಳ್ಳಲಿದೆ ಎಂದು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಷಯದ ಪ್ರಾಧ್ಯಾಪಕ ಬಿಸ್ವಜಿತ್ ಧಾರ್ ಹೇಳಿದ್ದಾರೆ.
ಇದೀಗ ಆಫ್ಗನ್‌ಗೆ ರಫ್ತು ಮಾಡಲು ಖಾಸಗಿ ರಫ್ತುದಾರರು ಮೂರನೇ ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗಬಹುದು ಎಂದು ‘ಭಾರತೀಯ ಪ್ಲಾಸ್ಟಿಕ್ ರಫ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷ ಅರವಿಂದ್ ಗೋಯೆಂಕಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.