ADVERTISEMENT

ಸರ್ಕಾರಿ ತೈಲ ಕಂಪನಿಗಳ ಲಾಭ ಕುಸಿತ

ಪಿಟಿಐ
Published 4 ಆಗಸ್ಟ್ 2024, 15:45 IST
Last Updated 4 ಆಗಸ್ಟ್ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಭಾರತೀಯ ತೈಲ ನಿಗಮ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಎಚ್‌ಪಿಸಿಎಲ್‌) ಲಾಭದ ಪ್ರಮಾಣವು ಶೇ 90ರಷ್ಟು ಕುಸಿದಿದೆ.

ಉತ್ಪಾದನಾ ವೆಚ್ಚ ಕಡಿಮೆಯಾದಾಗ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸಲಿಲ್ಲ. ಈ ಹಿಂದಿನ ವರ್ಷದಲ್ಲಿ ಆಗಿರುವ ನಷ್ಟ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಇಂಧನ ಬೆಲೆ ಪರಿಷ್ಕರಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದವು. ಇದರಿಂದ ಕಂಪನಿಗಳ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದುಬಂದಿತು.

‌ಈ ನಡುವೆಯೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ₹2 ಕಡಿತಗೊಳಿಸಿತು. ಜೊತೆಗೆ, ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ ದರವನ್ನೂ ನಿಯಂತ್ರಿಸಿತು. ಇದರಿಂದ ಕಂಪನಿಗಳ ಲಾಭದಲ್ಲಿ ಕುಸಿತವಾಗಿದೆ.  

ADVERTISEMENT

ಐಒಸಿ ಕಳೆದ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹13,750 ಕೋಟಿ ಲಾಭ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ₹2,643 ಗಳಿಸಿದೆ. ಈ ಲಾಭಕ್ಕೆ ಹೋಲಿಸಿದರೆ ಶೇ 81ರಷ್ಟು ಕುಸಿತವಾಗಿದೆ. 

ಎಚ್‌ಪಿಸಿಎಲ್‌ ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹6,765 ಕೋಟಿ ಲಾಭ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ₹633 ಕೋಟಿ ಗಳಿಸಿದೆ. ಲಾಭದ ಪ್ರಮಾಣದಲ್ಲಿ ಶೇ 90ರಷ್ಟು ಇಳಿಕೆಯಾಗಿದೆ. 

ಬಿಪಿಸಿಎಲ್‌ ಲಾಭದ ಪ್ರಮಾಣವು ಇಳಿಕೆಯಾಗಿದ್ದು, ₹2,841 ಕೋಟಿ ಗಳಿಸಿದೆ. ಕಳೆದ ಆರ್ಥಿಕಷ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹10,644 ಕೋಟಿ ಗಳಿಸಿತ್ತು.

2023–24ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಐಒಸಿ ₹39,618 ಕೋಟಿ, ಬಿಪಿಸಿಎಲ್‌ ₹26,673 ಕೋಟಿ ಮತ್ತು ಎಚ್‌ಪಿಸಿಎಲ್‌ ₹14,693 ಕೋಟಿ ಲಾಭ ಗಳಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.