ADVERTISEMENT

ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಒಪ್ಪಿಗೆ: ಎಲ್ಲೆಲ್ಲಿ ಖರೀದಿ?

ಪ್ರತಿ ಕ್ವಿಂಟಲ್‌ಗೆ ₹6,783 ದರ ನಿಗದಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 12:57 IST
Last Updated 25 ಅಕ್ಟೋಬರ್ 2024, 12:57 IST
<div class="paragraphs"><p>ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು</p></div>

ಹಾವೇರಿ ಜಿಲ್ಲೆಯ ಕುರುಬರ ಮಲ್ಲೂರು–ಬರದೂರು ಗ್ರಾಮದ ರಸ್ತೆಯಲ್ಲಿ ಒಣಗಲು ಹಾಕಿದ್ದ ಶೇಂಗಾ ಜಲಾವೃತಗೊಂಡು ಹಾಳಾಗಿದ್ದು ನೆನೆದ ಶೇಂಗಾ ಕಾಳುಗಳನ್ನು ರೈತರು ಮಂಗಳವಾರ ಪುನಃ ಒಣಗಲು ಹಾಕಿರುವುದು

   

ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಶೇಂಗಾ ಸೇರಿ ರಾಜ್ಯದಲ್ಲಿ ಒಟ್ಟು ಎಂಟು ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಲು ಒಪ್ಪಿಗೆ ಸಿಕ್ಕಿರುವುದು ಇದೇ ಮೊದಲು.

ADVERTISEMENT

ಈಗಾಗಲೇ, ಬೆಂಬಲ ಬೆಲೆಯಡಿ ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ ಹಾಗೂ ಹತ್ತಿ ಖರೀದಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಶೇಂಗಾಕ್ಕೆ ಕನಿಷ್ಠ ₹2,500 ಹಾಗೂ ಗರಿಷ್ಠ 7,400 ದರ (‘ಎ’ ಗ್ರೇಡ್‌) ಇದೆ. ಮುಂಗಾರು ಅವಧಿಯಲ್ಲಿ ಬಿತ್ತನೆಯಾಗಿರುವ ಶೇಂಗಾ ಫಸಲು ಈಗ ಕಟಾವಿಗೆ ಬಂದಿದೆ.

ಕೆಲವೆಡೆ ರೈತರು ಈಗಾಗಲೇ ಕಟಾವು ಪೂರ್ಣಗೊಳಿಸಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಬೆಲೆ ಇಳಿಕೆಯ ಆತಂಕಕ್ಕೆ ಸಿಲುಕಿದ್ದ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. 

ಪ್ರತಿ ಕ್ವಿಂಟಲ್‌ಗೆ ₹6,783 ದರ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯ ಮಾರ್ಗಸೂಚಿ ಅನ್ವಯ ಖರೀದಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಏಜೆನ್ಸಿ ನಿಗದಿ

‘ಬೆಲೆ ಕುಸಿತದಿಂದ ರೈತರು ದಿಕ್ಕೆಟ್ಟಿದ್ದಾರೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಅನುಮತಿ ನೀಡಿದೆ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಶೇಂಗಾ ಖರೀದಿಗೆ ಕೇಂದ್ರ ಸರ್ಕಾರದಿಂದ ಎರಡು ಹಾಗೂ ರಾಜ್ಯ ಸರ್ಕಾರದಿಂದ ನಾಲ್ಕು ಏಜೆನ್ಸಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಖರೀದಿ ಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರದ ಏಜೆನ್ಸಿಗಳಾದ ನಾಫೆಡ್, ಎನ್‌ಸಿಸಿಎಫ್ ಹಾಗೂ ರಾಜ್ಯದ ಖರೀದಿ ಏಜೆನ್ಸಿಗಳೊಂದಿಗೆ ಸಮಾಲೋಚನೆ ನಡೆಸುವಂತೆ ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಖರೀದಿ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಆಯಾ ಜಿಲ್ಲಾಧಿಕಾರಿ ಅವರು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸುವ ಪೂರ್ವದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡರೆ ಗೊಂದಲಕ್ಕೆ ಅವಕಾಶ ಸಿಗುವುದಿಲ್ಲ. ಯಾವುದೇ, ಖರೀದಿ ಕೇಂದ್ರದ ಬಗ್ಗೆ ರೈತರಿಂದ ದೂರುಗಳು ಬರಬಾರದಂತೆ ಎಚ್ಚರಿಕೆವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಖರೀದಿ?

ಕೊಪ್ಪಳ ಧಾರವಾಡ ಹಾವೇರಿ ಬಳ್ಳಾರಿ ಚಿತ್ರದುರ್ಗ ಗದಗ ಬಾಗಲಕೋಟೆ ದಾವಣಗೆರೆ ರಾಯಚೂರು ತುಮಕೂರು ಹಾಗೂ ವಿಜಯನಗರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.