ನವದೆಹಲಿ: ‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಕೃಷಿ ಮತ್ತು ಔಷಧದಂತಹ ರಫ್ತು ವಲಯಗಳು ಉತ್ತಮ ಬೆಳವಣಿಗೆ ಕಂಡಿದೆ’ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧವನ್ ಹೇಳಿದ್ದಾರೆ.
ಪಿಎಚ್‌ಡಿಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಫ್ತು ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ವಲಯಗಳು ಉತ್ತಮ ಬೆಳವಣಿಗೆ ಕಂಡಿದ್ದರೆ, ಇನ್ನೂ ಕೆಲವು ವಲಯಗಳ ಬೆಳವಣಿಗೆ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ. ಉತ್ತಮ ಬೆಳವಣಿಗೆ ಕಂಡಿರುವ ವಲಯಗಳತ್ತ ಗಮನ ಹರಿಸುವ ಮೂಲಕ ಅವು ಕೋವಿಡ್–19ಕ್ಕೂ ಮೊದಲಿನ ಮಟ್ಟ ತಲುಪುವಂತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
‘ಅಲ್ಪಾವಧಿಯ ಅವಕಾಶಗಳನ್ನು ತಕ್ಷಣವೇ ಬಳಸಿಕೊಳ್ಳಬೇಕು. ಮಧ್ಯಮಾವಧಿಯಿಂದ ದೀರ್ಘಾವಧಿಯ ಅವಕಾಶಗಳಿಗೆ ಸಂಬಂಧಿಸಿದಂತೆ ನಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಿದೆ’ ಎಂದೂ ಸಲಹೆ ನೀಡಿದ್ದಾರೆ.
ಪೆಟ್ರೋಲಿಯಂ, ಎಂಜಿನಿಯರಿಂಗ್, ರಾಸಾಯನಿಕ ಹಾಗೂ ಹರಳು ಮತ್ತು ಚಿನ್ನಾಭರಣ ವಲಯಗಳ ಬೆಳವಣಿಗೆ ಇಳಿಕೆ ಕಂಡಿದ್ದರಿಂದ ನವೆಂಬರ್‌ನಲ್ಲಿ ದೇಶದ ಒಟ್ಟಾರೆ ರಫ್ತು ವಹಿವಾಟು ಶೇಕಡ 8.74ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.