ನವದೆಹಲಿ: ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ರೆಲಿಗೇರ್ ಎಂಟರ್‌ಪ್ರೈಸಸ್‌ನ ಮುಖ್ಯಸ್ಥೆ ರಶ್ಮಿ ಸಲೂಜಾ ಅವರನ್ನು ಏರ್ ಇಂಡಿಯಾ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.
ಮಾರ್ಚ್ 5ರಂದು ಲಂಡನ್‌ಗೆ ತೆರಳುತ್ತಿದ್ದ (ಎಐ 161) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದ ಕ್ಯಾಫ್ಟನ್‌ನ ಕೈಗೊಂಡ ತೀರ್ಮಾನದಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿವೆ.
ವಿಮಾನವು ನಿಗದಿತ ಸಮಯಕ್ಕೆ ಹೊರಡುವ ಮೊದಲೇ ರಶ್ಮಿ ಅವರು ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವಾಗ್ವಾದಕ್ಕೆ ಇಳಿದಿದ್ದರು ಎನ್ನಲಾಗಿದೆ. ಆದರೆ, ಅವರ ಹೆಸರನ್ನು ಏರ್ ಇಂಡಿಯಾವು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ಬಗ್ಗೆ ರೆಲಿಗೇರ್ ಎಂಟರ್‌ಪ್ರೈಸಸ್ ಕೂಡ ಪ್ರತಿಕ್ರಿಯೆ ನೀಡಿಲ್ಲ.
‘ಈ ಘಟನೆಯಿಂದಾಗಿ ವಿಮಾನ ಹಾರಾಟವು ಒಂದು ಗಂಟೆ ವಿಳಂಬವಾಗಿದೆ. ಆದರೆ, ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಬಗ್ಗೆ ಅವರು ಲಿಖಿತ ಹೇಳಿಕೆ ನೀಡಿದ್ದರಿಂದ ಮತ್ತೊಂದು ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅವಕಾಶ ಕಲ್ಪಿಸಲಾಯಿತು’ ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ವಿವಿಧ ಕಾರಣಗಳಿಗಾಗಿ ಒಟ್ಟು 894 ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಲು ಏರ್ ಇಂಡಿಯಾವು ಅನುಮತಿ ನಿರಾಕರಿಸಿದೆ. ಈ ಪ್ರಯಾಣಿಕರಿಗೆ ಪರಿಹಾರ ನೀಡಿಕೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು ₹98 ಲಕ್ಷವನ್ನು ಖರ್ಚು ಮಾಡಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.