ADVERTISEMENT

ಏರ್‌ ಇಂಡಿಯಾದ 60 ವಿಮಾನ ಸಂಚಾರ ರದ್ದು

ಪಿಟಿಐ
Published 30 ಅಕ್ಟೋಬರ್ 2024, 16:02 IST
Last Updated 30 ಅಕ್ಟೋಬರ್ 2024, 16:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಏರ್ ಇಂಡಿಯಾ ವಿಮಾನಯಾನ ಕಂಪನಿಯು ನವೆಂಬರ್‌ 15ರಿಂದ ಡಿಸೆಂಬರ್‌ 31ರ ವರೆಗೆ ಭಾರತ ಮತ್ತು ಅಮೆರಿಕದ ನಡುವೆ ಸಂಚರಿಸುವ 60 ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಈ ಅವಧಿಯಲ್ಲಿ ಭಾರತದಿಂದ ಅಮೆರಿಕಕ್ಕೆ ಸಂಚರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಸ್ಯಾನ್‌ಫ್ರಾನ್ಸಿಸ್ಕೊ, ಚಿಕಾಗೊ, ವಾಷಿಂಗ್ಟನ್‌, ನ್ಯೂಯಾರ್ಕ್‌ ಸೇರಿ ಇತರೆ ನಗರಗಳ ನಡುವೆ ಸಂಚರಿಸುತ್ತಿದ್ದ ವಿಮಾನಗಳ ಸಂಚಾರವನ್ನು ರದ್ದು‍ಪಡಿಸಲಾಗಿದೆ ಎಂದು ತಿಳಿಸಿವೆ.

‘ಕೆಲವು ವಿಮಾನಗಳ ನಿರ್ವಹಣಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ, ಅವುಗಳು ಸೇವೆಗೆ ಲಭ್ಯವಿಲ್ಲ. ಇದರಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಏರ್‌ ಇಂಡಿಯಾ ತಿಳಿಸಿದೆ.

ADVERTISEMENT

‘ಈ ಬಗ್ಗೆ ಟಿಕೆಟ್‌ ಬುಕಿಂಗ್‌ ಮಾಡಿರುವ ‍ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ಅದೇ ದಿನ ಅಥವಾ ಬದಲಿ ದಿನಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದು ಹೇಳಿದೆ.

ಬಹುತೇಕ ಮುಂಬೈ ಮತ್ತು ದೆಹಲಿಯಿಂದ ಕಾರ್ಯಾಚರಣೆ ನಡೆಸುವ ವಿಮಾನಗಳ ಸೇವೆ ರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.