ನವದೆಹಲಿ: ಹಬ್ಬದ ಋತುವಿನಲ್ಲಿ ದೇಶೀಯ ಮಾರ್ಗದ ವಿಮಾನ ಟಿಕೆಟ್ ದರದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಟ್ರಾವೆಲ್ ಪೋರ್ಟಲ್ ಇಕ್ಸಿಗೊ ತಿಳಿಸಿದೆ.
ದೀಪಾವಳಿಗೆ ಏಕಮುಖ ಸಂಚಾರ ದರದಲ್ಲಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಬಹುದು. ಓಣಂ ಹಬ್ಬದ ಸಂದರ್ಭದಲ್ಲಿ ಶೇ 20ರಿಂದ ಶೇ 25ರಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಅಕ್ಟೋಬರ್ 30ರಿಂದ ನವೆಂಬರ್ 5ರ ವರೆಗೆ ದೆಹಲಿ–ಚೆನ್ನೈ ನಡುವಿನ ತಡೆರಹಿತ ಸಂಚಾರ ದರವು ₹7,618 ಆಗುವ ಸಾಧ್ಯತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ರಿಂದ ಶೇ 16ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
‘ದೆಹಲಿ–ಚೆನ್ನೈ, ಮುಂಬೈ–ಬೆಂಗಳೂರು ಮತ್ತು ದೆಹಲಿ–ಹೈದರಾಬಾದ್ ನಡುವಿನ ಏಕಮುಖ ಸಂಚಾರದ ಸರಾಸರಿ ದರ ₹4 ಸಾವಿರದಿಂದ ₹5 ಸಾವಿರ ಇದೆ. ಈ ದರದಲ್ಲಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಬಹುದು’ ಎಂದು ಇಕ್ಸಿಗೊ ಗ್ರೂಪ್‌ನ ಸಹ ಕಾರ್ಯ ನಿರ್ವಾಹಕ ಅಧಿಕಾರಿ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಜುಲೈ ತಿಂಗಳಿನಲ್ಲಿ ದೇಶೀಯ ವಿಮಾನ ಮಾರ್ಗದಲ್ಲಿ 1.29 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 7.3ರಷ್ಟು ಹೆಚ್ಚಳವಾಗಿದೆ. ಆದರೆ, ಪ್ರಸಕ್ತ ವರ್ಷದ ಜೂನ್‌ನಲ್ಲಿ 1.32 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ. ಇದಕ್ಕೆ ಹೋಲಿಸಿದರೆ ಕಡಿಮೆಯಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.