ADVERTISEMENT

ವಿಮಾನಗಳ ಟಿಕೆಟ್‌ ದರ ಏರಿಕೆ: ಕಾರಣ ಏನು?

ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ

ಪಿಟಿಐ
Published 10 ಏಪ್ರಿಲ್ 2024, 15:41 IST
Last Updated 10 ಏಪ್ರಿಲ್ 2024, 15:41 IST
<div class="paragraphs"><p>ವಿಮಾನ</p></div>

ವಿಮಾನ

   

ನವದೆಹಲಿ: ವಿಸ್ತಾರಾ ಏರ್‌ಲೈನ್ಸ್‌ ಬಿಕ್ಕಟ್ಟು ದೇಶೀಯ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದ್ದು, ವಿಮಾನಗಳ ಟಿಕೆಟ್‌ ದರದಲ್ಲಿ ಶೇ 20ರಿಂದ ಶೇ 25ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪೈಲಟ್‌ಗಳ ಸೇವೆಯಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದಾಗಿ ವಿಸ್ತಾರಾ ಏರ್‌ಲೈನ್ಸ್‌ನ ಶೇ 10ರಷ್ಟು ವಿಮಾನಗಳ ಹಾರಾಟ ರದ್ದಾಗಿದೆ. ಹಾಗಾಗಿ, ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಟಿಕೆಟ್‌ ದರದಲ್ಲಿ ಏರಿಕೆಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಹೇಳಿದ್ದಾರೆ.

ADVERTISEMENT

ಬೇಸಿಗೆ ಋತುವಿನಲ್ಲಿ ಸಹಜವಾಗಿ ವಿಮಾನ ಸಂಚಾರಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಈ ವೇಳೆ ವಿಮಾನಯಾನ ಕಂಪನಿಗಳು ದೇಶೀಯ ಮಾರ್ಗದಲ್ಲಿ ಹೆಚ್ಚು ಆಸನಗಳಿರುವ ವಿಮಾನಗಳ ಸಂಚಾರಕ್ಕೆ ಒತ್ತು ನೀಡುತ್ತವೆ. 

ವಿಸ್ತಾರಾ ಏರ್‌ಲೈನ್ಸ್‌ನ ದೈನಂದಿನ ಸಂಚಾರದಲ್ಲಿ 20ರಿಂದ 30 ವಿಮಾನಗಳ ಹಾರಾಟ ರದ್ದಾಗಿದೆ. ಆರ್ಥಿಕ ದಿವಾಳಿತನಕ್ಕೆ ಸಿಲುಕಿರುವ ಗೋ ಫಸ್ಟ್‌ನ ಹಲವು ವಿಮಾನಗಳ ಸೇವೆ ಕಡಿತಗೊಂಡಿದೆ. ಮತ್ತೊಂದೆಡೆ ಎಂಜಿನ್‌ ಸಮಸ್ಯೆಯಿಂದಾಗಿ ಇಂಡಿಗೊ ಕಂಪನಿಯ 70ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದೇ ಟಿಕೆಟ್‌ ದರ ಏರಿಕೆಗೆ ಕಾರಣವಾಗಿದೆ. 

‘ಕೆಲವು ಮಾರ್ಗಗಳ ದರದಲ್ಲಿ ನಿರೀಕ್ಷೆಗೂ ಮೀರಿ ದರ ಏರಿಕೆಯಾಗಿದೆ. ನವದೆಹಲಿ ಮತ್ತು ಬೆಂಗಳೂರು ನಡುವಿನ ಏಕಮುಖ ಸಂಚಾರ ದರವು ಶೇ 39ರಷ್ಟು ಏರಿಕೆಯಾಗಿದೆ. ನವದೆಹಲಿ ಮತ್ತು ಶ್ರೀನಗರ ನಡುವಿನ ದರ ಶೇ 30ರಷ್ಟು ಹೆಚ್ಚಳವಾಗಿದೆ’ ಎಂದು ಟ್ರಾವೆಲ್‌ ಪೋರ್ಟಲ್ ಇಕ್ಸಿಗೊ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.