ADVERTISEMENT

ಕ್ರೆಡಿಟ್ ಸ್ಕೋರ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಅವಿನಾಶ್ ಕೆ.ಟಿ
Published 9 ಏಪ್ರಿಲ್ 2023, 21:30 IST
Last Updated 9 ಏಪ್ರಿಲ್ 2023, 21:30 IST
   

ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಎಂದಾದರೆ ಉತ್ತಮವಾದ ಕ್ರೆಡಿಟ್ ಸ್ಕೋರ್ ಇರಲೇಬೇಕು. ಆದರೆ ಕ್ರೆಡಿಟ್ ಸ್ಕೋರ್ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಪದೇ ಪದೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೆ ತೊಂದರೆ ಆಗುತ್ತೆದೆ, ಕ್ರೆಡಿಟ್ ಸ್ಕೋರ್ ಒಮ್ಮೆ ಕಡಿಮೆ ಆದರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವೇ ಇಲ್ಲ, ನಮ್ಮ ಆದಾಯದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ ಎಂಬುದು ತಪ್ಪು ಕಲ್ಪನೆಗಳ ಸಾಲಿಗೆ ಸೇರಿವೆ.

ಕ್ರೆಡಿಟ್ ಸ್ಕೋರ್ ಕುರಿತು ತಿಳಿದಿರಲೇಬೇಕಾದ ಕೆಲವು ಅಂಶಗಳನ್ನು ಪರಿಶೀಲಿಸೋಣ.

1. ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಅಂದರೆ?: ಸಾಲದ ಅಗತ್ಯವಿದೆ ಎಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ ಕೂಡಲೇ ಬ್ಯಾಂಕ್‌ಗಳು ಕೇಳುವುದು ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ವಿವರ. ಗ್ರಾಹಕರಿಗೆ ಸಾಲ ಕೊಡಲು ಬ್ಯಾಂಕ್‌ಗಳು ಕ್ರೆಡಿಟ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕ್ರೆಡಿಟ್ ಸ್ಕೋರ್ ಎನ್ನುವುದು ನಿಮಗೆ ಎಷ್ಟು ಸಾಲ ಕೊಡಬಹುದು ಎಂಬುದನ್ನು ತೀರ್ಮಾನಿಸಲು ಬ್ಯಾಂಕ್‌ಗಳು ಬಳಸಿಕೊಳ್ಳುವ ಅಳತೆಗೋಲು.

ADVERTISEMENT

ನಿಮ್ಮ ಹಣಕಾಸಿನ ವ್ಯವಹಾರದ ಶಿಸ್ತು ಹಾಗೂ ಅಶಿಸ್ತಿಗೆ ಕ್ರೆಡಿಟ್ ಸ್ಕೋರ್ ಕನ್ನಡಿ ಇದ್ದಂತೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಸಾಲ ಸಿಗುತ್ತದೆ. 300ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ. 750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

2. ಸಿಬಿಲ್ ವರದಿಯಲ್ಲಿ ಸಾಲದ ಮಾಹಿತಿ ಹೇಗೆ ಬರುತ್ತದೆ?: ಕ್ರೆಡಿಟ್ ರೇಟಿಂಗ್ ಬ್ಯೂರೋಗಳಾದ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ (CIBIL), ಈಕ್ವಿಫ್ಯಾಕ್ಸ್, ಎಕ್ಪೀರಿಯನ್ ಸಂಸ್ಥೆಗಳು ಪ್ರತಿ ತಿಂಗಳು ಬ್ಯಾಂಕ್‌ಗಳಿಂದ ಮಾಹಿತಿ ಪಡೆದು ಸಾಲಗಾರರ ಮಾಹಿತಿಯನ್ನು ಭರ್ತಿಮಾಡಿ ಕ್ರೆಡಿಟ್ ಸ್ಕೋರ್ ನೀಡುತ್ತವೆ. ಸಾಲವನ್ನು ಸರಿಯಾಗಿ ಪಾವತಿಸಿದ್ದಾರೋ, ಸಾಲ ಪಾವತಿಯಲ್ಲಿ ವಿಳಂಬವಾಗಿದೆಯೋ ಎಂಬಿತ್ಯಾದಿ ಮಾಹಿತಿ ಪರಿಗಣಿಸಿ ಕ್ರೆಡಿಟ್ ಸ್ಕೋರ್ ನೀಡಲಾಗುತ್ತದೆ.

3. ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?: ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ, ಅಗತ್ಯವಿರುವುದಕ್ಕೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸುವುದು, ಸಾಲ ಪಡೆಯುವಾಗ ಅಡಮಾನ ಸಹಿತ ಸಾಲ ಮತ್ತು ಅಡಮಾನ ರಹಿತ ಸಾಲಗಳ ಮಿಶ್ರಣ ಕಾಯ್ದುಕೊಳ್ಳುವುದು, ಹೆಚ್ಚುವರಿ ಸಾಲದ ಅಗತ್ಯವಿದ್ದಾಗ ಎಚ್ಚರಿಕೆಯಿಂದ ಅದಕ್ಕೆ ಅರ್ಜಿ ಸಲ್ಲಿಸುವುದು, ಕ್ರೆಡಿಟ್ ವರದಿಯಲ್ಲಿ ತಪ್ಪುಗಳಿದ್ದರೆ ದೂರು ನೀಡಿ ಸರಿಪಡಿಸಿಕೊಳ್ಳುವುದು, ಸಾಲಕ್ಕೆ ಖಾತರಿದಾರರಾಗಿದ್ದರೆ ಸಾಲ ಪಡೆದವರು ಮರುಪಾವತಿ ಮಾಡುವಂತೆ ನೋಡಿಕೊಳ್ಳುವುದು... ಹೀಗೆ ಕೆಲವು ನಿರ್ದಿಷ್ಟ ಕ್ರಮಗಳನ್ನು ರೂಢಿಸಿಕೊಂಡಾಗ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.

4. ಪದೇ ಪದೇ ಸಿಬಿಲ್ ಸ್ಕೋರ್ ಪರಿಶೀಲಿಸಿದರೆ?: ನೀವು ಕ್ರೆಡಿಟ್ ಸ್ಕೋರ್ ಪರಿಶೀಲಿಸಿದಾಗ ಅದನ್ನು ‘ಸಾಫ್ಟ್ ಎನ್ಕ್ವೈರಿ’ ಎಂದು ಪರಿಗಣಿಸಲಾಗುತ್ತದೆ. ಈ ರೀತಿಎಷ್ಟೇ ಬಾರಿ ಕ್ರೆಡಿಟ್ ಸ್ಕೋರ್‌ ಪರಿಶೀಲನೆ ಮಾಡಿದರೂ ಅದರಿಂದ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ. ಆದರೆ ಮೇಲಿಂದ ಮೇಲೆ ನೀವು ಸಾಲಕ್ಕೆ ಅರ್ಜಿ ಸಲ್ಲಿಸಿ ಬ್ಯಾಂಕ್‌ಗಳು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ಮುಂದಾದಾಗ ಅದು ‘ಹಾರ್ಡ್ ಎನ್ಕ್ವೈರಿ’ ಎನಿಸಿಕೊಳ್ಳುತ್ತದೆ. ‘ಹಾರ್ಡ್ ಎನ್ಕ್ವೈರಿ’ಯಿಂದ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕಡಿಮೆ ಅವಧಿಯಲ್ಲಿ ಸಾಲಕ್ಕಾಗಿ ಹೆಚ್ಚೆಚ್ಚು ಅರ್ಜಿಗಳನ್ನು ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್‌ಗೆ ಧಕ್ಕೆಯಾಗುತ್ತದೆ.

5. ಆದಾಯ, ಉಳಿತಾಯದಿಂದ ಕ್ರೆಡಿಟ್ ಸ್ಕೋರ್ ಉತ್ತಮವಾಗುವುದೇ?: ನಿಮ್ಮ ಆದಾಯ ಅಥವಾ ಬ್ಯಾಂಕ್‌ನಲ್ಲಿರುವ ಉಳಿತಾಯದ ಹಣದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುವುದಿಲ್ಲ. ಸಾಲ ತಗೆದುಕೊಂಡ ಮೇಲೆ ಮರುಪಾವತಿಯಲ್ಲಿ ಎಷ್ಟು ಶಿಸ್ತು ಕಾಯ್ದುಕೊಂಡಿದ್ದೀರಿ, ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸಿದ್ದೀರಾ ಎನ್ನುವುದರ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ.

6. ಕ್ರೆಡಿಟ್ ಸ್ಕೋರ್ ಹೆಚ್ಚಳಕ್ಕೆ ಅವಕಾಶ?: ಬಾಕಿ ಇರುವ ಸಾಲಗಳನ್ನು ಮರುಪಾವತಿ ಮಾಡುವುದು, ಸಾಲಗಳನ್ನು ಕಡಿಮೆ
ಮೊತ್ತಕ್ಕೆ ಸೆಟಲ್ಮೆಂಟ್ ಮಾಡಿಕೊಳ್ಳದೆ ಪೂರ್ತಿ ಅಸಲು ಮತ್ತು ಬಡ್ಡಿ ಮೊತ್ತ ಪಾವತಿಸುವುದು ಸೇರಿದಂತೆ ಸಾಲ ಮರುಪಾವತಿಯಲ್ಲಿ ಎಚ್ಚರಿಕೆ ವಹಿಸಿದರೆ ಕಡಿಮೆ ಇರುವ ಕ್ರೆಡಿಟ್ ಸ್ಕೋರ್‌ಅನ್ನು ಕಾಲಕ್ರಮೇಣ ಹೆಚ್ಚಿಸಿಕೊಳ್ಳಬಹುದು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.