ನವದೆಹಲಿ: ಇ–ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಮಾರಾಟಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮತ್ತೆ ಮೂರು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಭಾರತದಲ್ಲಿಅವಕಾಶ ನೀಡಿದೆ.
‘ಇನ್ನುಂದೆ ಮಲಯಾಳಂ, ತೆಲುಗು ಹಾಗೂ ಬಂಗಾಳಿ ಭಾಷೆಯಲ್ಲೂ ಮಾರಾಟಗಾರರು ತಮ್ಮ ವ್ಯವಹಾರ ನಡೆಸಬಹುದು. ಇದರಿಂದ ಆ ಭಾಷೆಯ ಗ್ರಾಹಕರಿಗೂ ಅನುಕೂಲ‘ ಎಂದು ಅಮೆಜಾನ್ ಇಂಡಿಯಾ ಹೇಳಿದೆ.
ಈ ಮೊದಲು ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ಮರಾಠಿಯಲ್ಲಿ ಮಾರಾಟಗಾರರು ಹಾಗೂ ಗ್ರಾಹಕರು ಅಮೆಜಾನ್‌ನಲ್ಲಿ ವ್ಯವಹರಿಸಬಹುದಿತ್ತು. ಇದೀಗ ಬಂಗಾಳಿ, ತೆಲುಗು ಹಾಗೂ ಮಲಯಾಳಂ ಭಾಷೆ ಸೇರಿ ಒಟ್ಟು 8 ಭಾಷೆಗಳಲ್ಲಿ ಅಮೆಜಾನ್ ಇಂಡಿಯಾ ಸೇವೆ ಸಿಗಲಿದೆ.
ಈ ಸೇವೆ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲೂ ಇರಲಿದೆ. ಸದ್ಯ ಭಾರತದಲ್ಲಿ ಅಮೆಜಾನ್ ಇಂಡಿಯಾದಲ್ಲಿ 8.5 ಲಕ್ಷ ಮಾರಾಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
‘ಸ್ಥಳೀಯ ಮಾರಾಟಗಾರರನ್ನು ತಲುಪಲು ಹಾಗೂ ವ್ಯವಹರಿಸಲು ಭಾಷೆ ಬಹುದೊಡ್ಡ ತೊಡಕು. ಹೀಗಾಗಿ ನಾವು ದೇಶದ ಬಹುತೇಕ ಪ್ರಮುಖ ಎಂಟು ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುತ್ತಿದ್ದೇವೆ. 2025 ರ ವೇಳೆಗೆ ಸುಮಾರು 1 ಕೋಟಿ ಸಣ್ಣ ಉದ್ದಿಮೆದಾರರನ್ನು (ಎಂಎಸ್‌ಎಂಇಗಳು)ಅಮೆಜಾನ್ ಮಾರಾಟಗಾರರನ್ನಾಗಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ‘ ಎಂದು ಅಮೆಜಾನ್ ಇಂಡಿಯಾದ ನಿರ್ದೇಶಕ ಸುಮಿತ್ ಸಹಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.