ಮುಂಬೈ: ಅಮೆಜಾನ್ ಇಂಡಿಯಾ ತನ್ನ ಮಾರ್ಕೆಟ್‌ಪ್ಲೇಸ್‌ನಲ್ಲಿ ವಿವಿಧ ವರ್ಗದ ಉತ್ಪನ್ನಗಳ ಮಾರಾಟಕ್ಕೆ ವಿಧಿಸುವ ಶುಲ್ಕದಲ್ಲಿ ಶೇ 12ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.
ಅಮೆಜಾನ್‌ನಲ್ಲಿ ಮಾರಾಟ ಮಾಡುವ ಪ್ರತಿ ಉತ್ಪನ್ನಕ್ಕೂ ಮಾರಾಟಗಾರರಿಗೆ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕದಿಂದ ಕಂಪನಿಯು ಆದಾಯ ಗಳಿಸುತ್ತದೆ.
ಹಬ್ಬದ ಋತುವಿನ ಅಂಗವಾಗಿ ಮಾರಾಟಗಾರರಿಗೆ ಅನುಕೂಲ ಕಲ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ. ಸೆಪ್ಟೆಂಬರ್ 9ರಿಂದ ಮಾರಾಟ ಶುಲ್ಕವನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಶುಲ್ಕ ಕಡಿಮೆ ಮಾಡುವ ಮೂಲಕ ಎಲ್ಲಾ ವರ್ಗದ ಮಾರಾಟಗಾರರ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ಗುರಿ ಹೊಂದಲಾಗಿದೆ. ಮಾರಾಟಗಾರರು ಅಮೆಜಾನ್ ಡಾಟ್ ಇನ್‌ನಲ್ಲಿ ತಮ್ಮ ಉತ್ಪನ್ನಗಳ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಇದು ಅನುವು ಮಾಡಿಕೊಡಲಿದೆ ಎಂದು ಹೇಳಿದೆ.
ಮಾರಾಟಗಾರರಿಗೆ ವಿವಿಧ ಉತ್ಪನ್ನಗಳ ವಿಭಾಗದಲ್ಲಿ ಶೇ 3ರಿಂದ ಶೇ 12ರ ವರೆಗೆ ಮಾರಾಟ ಶುಲ್ಕ ಕಡಿತದ ಪ್ರಯೋಜನ ದೊರೆಯಲಿದೆ. ವಿಶೇಷವಾಗಿ ₹500ಕ್ಕಿಂತ ಕಡಿಮೆ ಬೆಲೆಯ ಕೈಗೆಟುಕುವ ದರದ ಉತ್ಪನ್ನ ಒದಗಿಸುವ ಮಾರಾಟಗಾರರಿಗೆ ಇದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ತಿಳಿಸಿದೆ.
‘ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಂದ ಹಿಡಿದು ಹೊಸ ಉದ್ಯಮ ಸ್ಥಾಪಿಸಲು ಇಚ್ಛಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಪ್ರಸ್ತುತ ಶುಲ್ಕ ಕಡಿತದಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಸಿಗಲಿದೆ. ಉನ್ನತ ಮಟ್ಟದ ಮಾರಾಟ ಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಂಪನಿಯು ಈ ಕ್ರಮಕೈಗೊಂಡಿದೆ’ ಎಂದು ಅಮೆಜಾನ್ ಇಂಡಿಯಾದ ಮಾರಾಟ ಪಾಲುದಾರ ಸೇವಾ ವಿಭಾಗದ ನಿರ್ದೇಶಕ ಅಮಿತ್ ನಂದಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.