ನವದೆಹಲಿ: ಭಾರತೀಯ ರೈಲ್ವೆಯ ಸಂಪರ್ಕ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ಅಮೆಜಾನ್ ಉತ್ಪನ್ನಗಳ ಪಾರ್ಸೆಲ್‌ಗಳನ್ನು ಗ್ರಾಹಕರಿಗೆ ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.
ಕೇಂದ್ರ ಸರ್ಕಾರದ ವಿಕಸಿತ ಭಾರತ ಮತ್ತು ವಿಕಸಿತ ರೈಲ್ವೆ ಪರಿಕಲ್ಪನೆಗೆ ಅನುಗುಣವಾಗಿ ದೇಶದ ಮೂಲಸೌಕರ್ಯಗಳನ್ನು ಮತ್ತು ಆರ್ಥಿಕತೆಯ ಆಧಾರಸ್ತಂಭಗಳನ್ನು ಉಪಯೋಗಿಸಿಕೊಂಡು ಗ್ರಾಹಕರನ್ನು ವೇಗವಾಗಿ ತಲುಪುವುದು ಇದರ ಉದ್ದೇಶ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.
ಭಾರತದ ಆರ್ಥಿಕತೆಯ ಪ್ರಗತಿಗಾಗಿ ರೈಲ್ವೆಯನ್ನು ಹೆಚ್ಚು ಬಳಸುವ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ ನಾವು ಭಾರತೀಯ ರೈಲ್ವೆ ಜೊತೆ ಕೈಜೋಡಿಸಿದ್ದೇವೆ. ದೇಶದಾದ್ಯಂತ ಗ್ರಾಹಕರಿಗೆ 1 ಅಥವಾ 2 ದಿನಗಳೊಳಗೆ, ವಿಶೇಷವಾಗಿ ಹಬ್ಬದ ಋತುಗಳಲ್ಲಿ ಕೋಟ್ಯಂತರ ಉತ್ಪನ್ನಗಳನ್ನು ತಲುಪಿಸುವಲ್ಲಿ ಈ ಒಪ್ಪಂದವು ನೆರವಾಗಲಿದೆ ಎಂದು ಅಮೆಜಾನ್ ಇಂಡಿಯಾದ ಕಾರ್ಯಾಚರಣೆಗಳ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ ತಿಳಿಸಿದ್ದಾರೆ.
ಸರಕು ರವಾನೆಯ ಈ ಪಾಲುದಾರಿಕೆಯು ಇ-ಕಾಮರ್ಸ್ ವಹಿವಾಟನ್ನು ಹೆಚ್ಚು ಅರ್ಥೈಸಿಕೊಂಡು, ಅದಕ್ಕೆ ಅನುಗುಣವಾಗಿ ರೈಲ್ವೆ ಸಂಚಾರ ಸೇವೆಗಳನ್ನು ಯೋಜಿಸುವುದಕ್ಕೆ ನೆರವಾಗುತ್ತದೆ. ಭಾರತೀಯ ರೈಲ್ವೆ ಮೂಲಕ ಇ-ಕಾಮರ್ಸ್ ಸರಕುಗಳ ವಿತರಣೆಯನ್ನು ವೇಗಗೊಳಿಸುವಲ್ಲಿ ಅಮೆಜಾನ್ ಜೊತೆಗಿನ ಒಪ್ಪಂದವು (ಎಂಒಯು) ಒಂದು ಪ್ರಮುಖ ಹೆಜ್ಜೆ ಎಂದು ಭಾರತೀಯ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವಹಿವಾಟು ಅಭಿವೃದ್ಧಿ ವಿಭಾಗದ ಸದಸ್ಯ ರವೀಂದರ್ ಗೋಯಲ್ ತಿಳಿಸಿದ್ದಾರೆ.
2019ರಿಂದಲೂ ಭಾರತೀಯ ರೈಲ್ವೆ ಮೂಲಕ ಅಮೆಜಾನ್ ತನ್ನ ಪಾರ್ಸೆಲ್ ಸೇವೆಗಳನ್ನು ನೆಚ್ಚಿಕೊಂಡಿತ್ತು. 2019ರಿಂದೀಚೆಗೆ 120ಕ್ಕೂ ಹೆಚ್ಚು ರೈಲುಗಳಲ್ಲಿ ಅಮೆಜಾನ್ ಪ್ಯಾಕೇಜುಗಳು ರವಾನೆಯಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.