ನವದೆಹಲಿ: ಅಮೆಜಾನ್ ತನ್ನ ಕೆಲವು ಭಾರತೀಯ ಉದ್ಯೋಗಿಗಳಿಗೆ ಬುಧವಾರ ಸ್ವಯಂಪ್ರೇರಿತ ಪ್ರತ್ಯೇಕತೆಯ ಆಫರ್ ನೀಡಿದೆ.
ಸ್ವಯಂಪ್ರೇರಿತ ಬೇರ್ಪಡಿಕೆಯ(ವಿಎಸ್‌ಪಿ) ಯೋಜನೆಯಲ್ಲಿ ಭಾರತೀಯ ಉದ್ಯೋಗಿಗಳಿಗೆ 22 ವಾರಗಳ ಮೂಲ ವೇತನಕ್ಕೆ ಸಮನಾದ ಹಣ, ಪ್ರತಿ 6 ತಿಂಗಳ ಸರ್ವಿಸ್‌ಗೆ ಒಂದು ವಾರದ ಮೂಲ ಸಂಬಳದಂತೆ ಹಣ (ಗರಿಷ್ಠ 20 ವಾರಗಳು), ಆರು ತಿಂಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆ ಮತ್ತು ಉದ್ಯೋಗ ಒಪ್ಪಂದದ ನಿಯಮಗಳ ಪ್ರಕಾರ ನೋಟಿಸ್ ಅವಧಿ ಅಥವಾ ಹಣ ಪಾವತಿಸಬೇಕು.
ಅಮೆಜಾನ್ ಹೇಳಿಕೆ ಪ್ರಕಾರ, ಬೋನಸ್ ಅಥವಾ ಸ್ಥಳಾಂತರ ಕುರಿತಾದ ವೆಚ್ಚಗಳ ಬಾಕಿ ಉಳಿದಿರುವ ಬಾಧ್ಯತೆಗಳ ವಿನಾಯಿತಿ ಸಹ ಇದರಲ್ಲಿ ಒಳಗೊಂಡಿರುತ್ತದೆ.
ಅಮೆಜಾನ್ ಜಗತ್ತಿನಾದ್ಯಂತ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಇದು ಅಮೆಜಾನ್ ಇತಿಹಾಸದಲ್ಲಿ ಅತಿದೊಡ್ಡ ಉದ್ಯೋಗ ಕಡಿತವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಈ ವಾರದ ಆರಂಭದಲ್ಲಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು.
ಕೋವಿಡ್ ಸಂಕಷ್ಟದ ಕೆಟ್ಟ ಪರಿಸ್ಥಿತಿ ನಂತರ ಅಮೆಜಾನ್ ಆನ್‌ಲೈನ್ ಶಾಪಿಂಗ್ ಚೇತರಿಸಿಕೊಳ್ಳುತ್ತಿದೆ. ಆದರೆ, ಬೆಳವಣಿಗೆಯು ದುರ್ಬಲವಾಗಿರುತ್ತದೆ ಮತ್ತು ಬಹುಶಃ 2001ಕ್ಕಿಂತ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಯಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ಎಚ್ಚರಿಸಿದೆ.
ಜಗತ್ತಿನ ಪ್ರಮುಖ ಟೆಕ್ ಕಂಪನಿಗಳು ಇತ್ತೀಚಿನ ವಾರಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಡಿಜಿಟಲ್ ಜಾಹೀರಾತು ಆದಾಯದಲ್ಲಿನ ಕುಸಿತ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯ ಮಧ್ಯೆ ಹೊಸ ನೇಮಕಾತಿಯನ್ನೂ ತಡೆಹಿಡಿದಿವೆ.
ಮೈಕ್ರೋಸಾಫ್ಟ್, ಮೆಟಾ, ಟ್ವಿಟರ್, ಮತ್ತು ಸ್ನ್ಯಾಪ್ ಐಎನ್‌ಸಿ ಕಂಪನಿಗಳು ಉದ್ಯೋಗಗಳನ್ನು ಕಡಿತಗೊಳಿಸಿವೆ. ಆದರೆ, ಆ್ಯಪಲ್ ಮತ್ತು ಆಲ್ಫಾಬೆಟ್ ಹೊಸ ನೇಮಕಾತಿಯನ್ನು ನಿಧಾನಗೊಳಿಸಿವೆ.
‘ಕೋವಿಡ್ ಸಂಕಷ್ಟದಿಂದ ಹೊರಬರುತ್ತಿರುವ ಈ ಸಂದರ್ಭ ಜಗತ್ತಿನಲ್ಲಿ ಹಲವಾರು ಸ್ಥೂಲ ಆರ್ಥಿಕ ಒತ್ತಡಗಳು ಎದುರಾಗುತ್ತಿವೆ. ನಾವು 2023ಕ್ಕೆ ತಮ್ಮ ಯೋಜನೆಗಳ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದೇವೆ’ಎಂದು ಅಮೆಜಾನ್ ಬುಧವಾರ ತಿಳಿಸಿದೆ.
‘ನಾವು ನಮ್ಮ ಕಾರ್ಪೊರೇಟ್ ಉದ್ಯೋಗಿಗಳ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದ್ದೇವೆ. ಕೆಲವು ತಂಡಗಳು ಹೊಂದಾಣಿಕೆಗಳನ್ನು ಮಾಡುತ್ತಿವೆ, ಇದರರ್ಥ ಕೆಲವು ಹುದ್ದೆಗಳು ಇನ್ನು ಮುಂದೆ ಅಗತ್ಯವಿಲ್ಲ’ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.