ನವದೆಹಲಿ: ವಾರ್ಷಿಕ ವೆಚ್ಚಗಳ ಉಳಿತಾಯದ ಉದ್ದೇಶದಿಂದ ಬಹುರಾಷ್ಟ್ರೀಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿಯು 2025ರ ವೇಳೆಗೆ ಸುಮಾರು 14,000 ವ್ಯವಸ್ಥಾಪಕ ಹುದ್ದೆಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
2025ರ ತ್ರೈಮಾಸಿಕದ ಅಂತ್ಯದಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ ತಮ್ಮ ವ್ಯವಸ್ಥಾಪಕರು ನಿಗದಿಪಡಿಸಿದ ಗುರಿಗಿಂತ ಶೇ 15ರಷ್ಟು ಹೆಚ್ಚು ನೀಡಿದ್ದೇ ಆದಲ್ಲಿ ಅದರಿಂದ ₹25,206 ಕೋಟಿ ಉಳಿತಾಯ ಸಾಧ್ಯವಾಗಲಿದೆ ಎಂದು ಸಿಇಒ ಆ್ಯಂಡಿ ಜಸ್ಸಿ ಹೇಳಿದ್ದಾರೆ.
‘ವಿಶ್ವದ ಅತಿದೊಡ್ಡ ಸ್ಟಾರ್ಟ್‌ಅಪ್‌ನಂತೆ ಕಾರ್ಯನಿರ್ವಹಿಸಲು ಕೆಲವು ಬದಲಾವಣೆಗಳನ್ನು ಜಾರಿಗೆ ತರುವುದು ಅನಿವಾರ್ಯ. ಈ ಬದಲಾವಣೆಗಳು ಶೀಘ್ರ ನಿರ್ಧಾರ ತೆಗೆದುಕೊಳ್ಳುವಿಕೆ, ಮಿತವ್ಯಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ’ ಎಂದು ಜಸ್ಸಿ ತಿಳಿಸಿದ್ದಾರೆ.
ಜಾಗತಿಕವಾಗಿ ಅಮೆಜಾನ್ ತನ್ನ ವ್ಯವಸ್ಥಾಪಕ ಸಿಬ್ಬಂದಿಯ ಸಂಖ್ಯೆಯನ್ನು 1,05,770ರಿಂದ 91,936ಕ್ಕೆ ಕಡಿತಗೊಳಿಸಿದರೆ, ಇದು ವಾರ್ಷಿಕ ವೆಚ್ಚ 30,248 ಕೋಟಿಯಿಂದ ₹17,644 ಕೋಟಿಯಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ಅಮೆಜಾನ್ 2025ರಲ್ಲಿ ಶೇಕಡ 5ರಷ್ಟು ಹೆಚ್ಚುವರಿ ಲಾಭದ ಗುರಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ.
ಅಮೆಜಾನ್ ಕಂಪನಿ ಈಗಾಗಲೇ ಹೆಚ್ಚು ವ್ಯವಸ್ಥಾಪಕರನ್ನು ನೇಮಕ ಮಾಡಿಕೊಂಡಿದೆ. ಈಗ ವಾರ್ಷಿಕ ವೆಚ್ಚಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಯಾವ ತಂಡದಲ್ಲಿ ಎಷ್ಟು ಉದ್ಯೋಗಿಗಳು ಇರಬೇಕು ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಸ್ಸಿ ವಿವರಿಸಿದ್ದಾರೆ.
ಅಮೆಜಾನ್‌ನ ಶೇ 7ರಷ್ಟು ಉದ್ಯೋಗಿಗಳು ವ್ಯವಸ್ಥಾಪಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರತಿ ವ್ಯವಸ್ಥಾಪಕರು ವಾರ್ಷಿಕ ₹1.6 ಕೋಟಿಯಿಂದ ₹2.9 ಕೋಟಿ ವೇತನ ಹಾಗೂ ಇತರೆ ಭತ್ಯೆಗಳನ್ನು ಪಡೆಯುತ್ತಿದ್ದಾರೆ.
ಇತ್ತೀಚೆಗೆ ಅಮೆಜಾನ್ ಸಾರಿಗೆ ಸೇವೆಗಳು ಮತ್ತು ಅಂಚೆ ಇಲಾಖೆ ಮೂಲಕ ರಾಷ್ಟ್ರವ್ಯಾಪಿ ವಿತರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.