ನವದೆಹಲಿ: 2023ರ ಅಂತ್ಯದೊಳಗೆ 5ಜಿ ಸೇವೆಗಳನ್ನು ದೇಶದ ಎಲ್ಲೆಡೆ ಶುರುಮಾಡಬೇಕು, ರಿಟೇಲ್ ವಿಭಾಗದಲ್ಲಿ ಇನ್ನಷ್ಟು ಮಹತ್ವಾಕಾಂಕ್ಷೆ ಹೊಂದಬೇಕು ಹಾಗೂ ಕಂಪನಿಯನ್ನು ದೇಶದ ಅತ್ಯಂತ ಹೆಚ್ಚು ಪರಿಸರಸ್ನೇಹಿ ಕಂಪನಿಯಾಗಿಸಬೇಕು ಎಂಬ ಗುರಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತಮ್ಮ ಪುತ್ರರು ಮತ್ತು ಪುತ್ರಿಗೆ ನಿಗದಿಪಡಿಸಿದ್ದಾರೆ.
ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರ ಜನ್ಮದಿನದ ಅಂಗವಾಗಿ ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಅಂಬಾನಿ ಬುಧವಾರ ಮಾತನಾಡಿದ್ದಾರೆ. ಅವರ ಮಾತಿನ ವಿವರಗಳನ್ನು ಗುರುವಾರ ಪ್ರಕಟಿಸಲಾಗಿದೆ. ದೂರಸಂಪರ್ಕ ಮತ್ತು ಡಿಜಿಟಲ್ ವಹಿವಾಟುಗಳಿಗೆ ಆಕಾಶ್ ಅಂಬಾನಿ, ರಿಟೇಲ್ ವಹಿವಾಟಿಗೆ ಇಶಾ ಮತ್ತು ನವ ಇಂಧನ ವಹಿವಾಟಿಗೆ ಅನಂತ್ ಅವರನ್ನು ಮುಂದಾಳತ್ವ ಇರಲಿದೆ ಎಂದಿದ್ದಾರೆ.
‘ಆಕಾಶ್ ಅಧ್ಯಕ್ಷತೆಯಲ್ಲಿ ಜಿಯೊ 5ಜಿ ನೆಟ್‌ವರ್ಕ್ ಆರಂಭಿಸುತ್ತಿದೆ. ಇದು 2023ರಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅಂಬಾನಿ ಹೇಳಿದ್ದಾರೆ. ಇಶಾ ನೇತೃತ್ವದ ರಿಟೇಲ್ ವಹಿವಾಟು ತಂಡವು ‘ಇನ್ನೂ ಮಹತ್ವಾಕಾಂಕ್ಷೆಯ ಗುರಿಗಳನ್ನು ಬೆನ್ನಟ್ಟುವ ಸಾಮರ್ಥ್ಯ ಹೊಂದಿದೆ’ ಎಂದಿದ್ದಾರೆ.
‘ಅನಂತ್ ಅವರು ಮುಂದಿನ ತಲೆಮಾರಿನ (ನವ ಇಂಧನ) ವಹಿವಾಟಿಗೆ ಪ್ರವೇಶಿಸಿದ್ದಾರೆ. ಜಾಮ್‌ನಗರದಲ್ಲಿ ನಮ್ಮ ಗಿಗಾ ಫ್ಯಾಕ್ಟರಿ ಸಜ್ಜುಗೊಳಿಸುವಲ್ಲಿ ಮುಂದಡಿ ಇರಿಸುತ್ತಿದ್ದೇವೆ. ನವ ಇಂಧನ ವಹಿವಾಟಿನ ತಂಡವು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ದೇಶಕ್ಕೆ ನೆರವಾಗಬೇಕು’ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.