ನವದೆಹಲಿ: ಅದಾನಿ ಸಮೂಹದ ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ (ಎಸಿಎಲ್) 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹473 ಕೋಟಿ ನಿವ್ವಳ ಲಾಭ ಗಳಿಸಿದೆ.
2023–24ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹987 ಕೋಟಿ ಲಾಭ ಗಳಿಸಿತ್ತು ಎಂದು ಕಂಪನಿ ಷೇರುಪೇಟೆಗೆ ಸೋಮವಾರ ತಿಳಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹7,423 ಕೋಟಿ ವರಮಾನ ಗಳಿಸಿತ್ತು. ಅದು ಈ ಬಾರಿ ₹7,516 ಕೋಟಿಯಾಗಿದೆ. ಒಟ್ಟು ವೆಚ್ಚವು ಈ ತ್ರೈಮಾಸಿಕದಲ್ಲಿ ₹7,023 ಕೋಟಿಯಾಗಿದೆ ಎಂದು ತಿಳಿಸಿದೆ.
ಇದು ಕಳೆದ 5 ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಗಳಿಸಿದ ಅತ್ಯಧಿಕ ವರಮಾನವಾಗಿದೆ. ಹೆಚ್ಚಿನ ವ್ಯಾಪಾರ ಮತ್ತು ಪ್ರೀಮಿಯಂ ಉತ್ಪನ್ನಗಳ ಮಾರಾಟದಿಂದ ವರಮಾನ ಏರಿಕೆಯಾಗಿದೆ ಎಂದು ಎಸಿಎಲ್ ತಿಳಿಸಿದೆ.
ಗುಜರಾತ್‌ನ ಸಂಘಿ ಇಂಡಸ್ಟ್ರೀಸ್, ಹೈದರಾಬಾದ್‌ನ ಪೆನ್ನಾ ಇಂಡಸ್ಟ್ರೀಸ್ ಮತ್ತು ತಮಿಳುನಾಡು ಮೂಲದ ಎಂವೈ ಹೋಮ್ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳ ಸ್ವಾಧೀನದಿಂದಾಗಿ ತ್ರೈಮಾಸಿಕದ ಹಣಕಾಸು ಫಲಿತಾಂಶಗಳು ವರ್ಷದ ಹಿಂದಿನ ಅವಧಿಗೆ ಹೋಲಿಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಅದಾನಿ ಪವರ್ ಲಾಭ ಕುಸಿತ:
ಅದಾನಿ ಸಮೂಹದ ಅದಾನಿ ಪವರ್ ಸೆಪ್ಟೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇ 50ರಷ್ಟು ಕುಸಿತವಾಗಿದ್ದು, ₹3,297 ಕೋಟಿ ಲಾಭ ಗಳಿಸಿದೆ.
ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹6,594 ಕೋಟಿ ಲಾಭ ಗಳಿಸಿತ್ತು ಎಂದು ಕಂಪನಿ ತಿಳಿಸಿದೆ. ವರಮಾನದಲ್ಲಿನ ಇಳಿಕೆಯಿಂದ ಲಾಭದ ಪ್ರಮಾಣದಲ್ಲಿ ಕುಸಿದಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.